ತುಮಕೂರು: ಪಿ.ಎಸ್.ಐ ನೇಮಕಾತಿ ಪರೀಕ್ಷೆಯಲ್ಲಿ ಹಾಗೂ ಪ್ರಾಧ್ಯಪಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಆಗಿರುವ ಅಕ್ರಮವನ್ನು ವಿದ್ಯಾರ್ಥಿ ಪರಿಷತ್ ಖಂಡಿಸಿದ್ದು ರಾಜ್ಯ ಸರ್ಕಾರ ಪಾರದರ್ಶಕವಾಗಿ ತನಿಖೆ ನಡೆಸಿ ಬಡ ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಗೃಹ ಸಚಿವರ ಮುಖಾಂತರ ಮನವಿ ಸಲ್ಲಿಸಲಾಯಿತು.
ನಗರಕ್ಕೆ ಆಗಮಿಸಿದ್ದ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಎಬಿವಿಪಿ ಕಾರ್ಯಕರ್ತರು ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಪ್ರತಿಭಾವಂತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆ ನೇಮಕಾತಿ ಪರೀಕ್ಷೆಯಲ್ಲಿ ಹಾಗೂ 1242 ಸಹಾಯಕ ಪ್ರಾಧ್ಯಪಕರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ, ಪೋಲಿಸ್ ಇಲಾಖೆ ಸೇರುವ ಕನಸು ಕಟ್ಟಿಕೊಂಡು ಸಾವಿರಾರು ಯುವ ಜನರು ವರ್ಷಗಳ ಕಾಲ ಕಷ್ಟಪಟ್ಟು ತಯಾರಿ ನಡೆಸಿ ಪರೀಕ್ಷೆ ಬರೆಯುತ್ತಿದ್ದಾರೆ, ಆದರೆ ಪರೀಕ್ಷೆ ಮತ್ತು ನೇಮಕಾತಿಯಲ್ಲಿ ಅಕ್ರಮ ನಡೆಸಿ ಬಡ ಮತ್ತು ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವಂತೆ ಮಾಡುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶಿಕ್ಷಣ ಇಲಾಖೆಯ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ನಡೆಸಿದ ಪರೀಕ್ಷೆಯಲ್ಲಿಯು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದರೊಂದಿದೆ ನೇಮಕಾತಿಗಾಗಿ ಹಣದ ಆಮೀಷ ಒಡ್ದಿ ಮಧ್ಯವರ್ತಿಗಳು ಭ್ರಷ್ಟಾಚಾರ ನಡೆಸುತ್ತಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿದ ದೂರಿನ ತನಿಖೆಯ ನಡುವೆ ಬೆಳಕಿಗೆ ಬಂದಿದೆ.
ಪರೀಕ್ಷೆ ನಡೆದಾಗಲೇ ಅಕ್ರಮದ ಸುಳಿವು ಸಿಕ್ಕಿದರೂ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಳ್ಳಲಿಲ್ಲ, ಈಗಲಾದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಹಾಗೂ ಅರ್ಹ ಅಭ್ಯರ್ಥಿಗಳ ನೇಮಕಾತಿಯಾಗುವಂತೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ಪರೀಕ್ಷಾ ಅಕ್ರಮದ ಮೂಲಕ ನೇಮಕಗೊಂಡ ಪ್ರಾಧ್ಯಾಪಕರು ಶೈಕ್ಷಣಿಕ ಪಾವಿತ್ರ್ಯತೆಗೆ ಕಳಂಕವಾಗಿರುತ್ತಾರೆ, ಇದರಿಂದ ಭವಿಷ್ಯದ ಯುವ ಪೀಳಿಗೆಯೂ ದಾರಿ ತಪ್ಪುವ ಸಾಧ್ಯತೆ ಇದೆ, ಹೀಗಾಗಿ ಇದನ್ನು ಮಟ್ಟ ಹಾಕಲು ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕಾಗಿದೆ, ಈ ಅಕ್ರಮದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಇಲಾಖೆಯ ವ್ಯಕ್ತಿಗಳು, ಪ್ರಾಧ್ಯಾಪಕರು ಹಾಗೂ ರಾಜಕೀಯ ವ್ಯಕ್ತಿಗಳು ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಸಾವಿರಾರು ಜನರ ಭವಿಷ್ಯದಲ್ಲಿ ಚೆಲ್ಲಾಟವಾಡಿದ್ದಾರೆ, ಇಂತಹ ವ್ಯಕ್ತಿಗಳನ್ನು ಬಂಧಿಸಿ ಅವರಿಗೆ ಸೇರಿದ ಎಲ್ಲಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು, ತುರ್ತು ವಿಚಾರಣೆಗಾಗಿ ಸರ್ಕಾರ ವಿಶೇಷ ಅಧಿಕಾರಿಗಳನ್ನು ನೇಮಿಸಬೇಕು, ಇದಕ್ಕಾಗಿ ದೇಶದ ಜವಾಬ್ದಾರಿಯುತ ವಿದ್ಯಾರ್ಥಿ ಸಂಘಟನೆಯಾಗಿ ಎಬಿವಿಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ, ಎಬಿವಿಪಿ ತುಮಕೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಸರ್ವೇಶ್, ರೇಣುಕಾಪ್ರಸಾದ್, ಹರೀಶ್, ಲಿಖಿತ್ ಗೌಡ, ಕೌಶಿಕ್, ಸಚಿನ್, ಉಮೇಶ್, ಮಾಂತೇಶ್ ಇತರರು ಹಾಜರಿದ್ದರು.
ಪಿ.ಎಸ್.ಐ ಅಕ್ರಮ ನೇಮಕಾತಿ- ಪಾರದರ್ಶಕ ತನಿಖೆಗೆ ಮನವಿ
Get real time updates directly on you device, subscribe now.
Prev Post
Next Post
Comments are closed.