ಜನಪರ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಮಾಡಿ

ಅಧಿಕಾರಿಗಳು ದಕ್ಷತೆ, ಬದ್ಧತೆಯಿಂದ ನಿರ್ವಹಿಸಬೇಕು: ಅರಗ ಜ್ಞಾನೇಂದ್ರ

180

Get real time updates directly on you device, subscribe now.

ತುಮಕೂರು: ಸರ್ಕಾರದ ಬಗ್ಗೆ ಜನಸಾಮಾನ್ಯರ ಮನದಲ್ಲಿ ಗೌರವ ಮೂಡಬೇಕಾದರೆ, ಜನಪರ ಕಲ್ಯಾಣ ಕಾರ್ಯಕ್ರಮಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷತೆಯಿಂದ ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪರಿಸ್ಥಿತಿ, ಪೂರ್ವ ಮುಂಗಾರು ಮಳೆ, ಬಿತ್ತನೆ ಬೀಜ, ಗೊಬ್ಬರ ದಾಸ್ತಾನು, ಮತ್ತಿತರ ವಿಷಯಗಳ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಓ ಮತ್ತು ಜಿಲ್ಲಾ ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲೆಯ ರೈತರಿಗೆ ತೊಂದರೆಯಾಗದಂತೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಯಾಗಬೇಕು ಮತ್ತು ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿಗೆ ಒತ್ತುಕೊಡಬೇಕು, ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಬೀಜದ ಕೊರತೆಯಾಗದಂತೆ ಸಾಕಾಗುವಷ್ಟು ಗುಣಮಟ್ಟದ ಬಿತ್ತನೆ ಬೀಜ ಸರಬರಾಜುದಾರರಿಂದ ಖರೀದಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದ ಸಚಿವರು, ಜನಸಾಮಾನ್ಯರಿಗೆ ಆರೋಗ್ಯ ರಕ್ಷಣೆ ದುಬಾರಿಯಾಗಿರುವ ಈ ಕಾಲಘಟ್ಟದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದಂತಹ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿರುವುದು ಒಂದು ವರದಾನವಾಗಿದೆ ಎಂದ ಅವರು, ಜಿಲ್ಲೆಯ ವೈದ್ಯಾಧಿಕಾರಿಗಳು ದೇಶದ ವಿವಿಧ ಭಾಗದಲ್ಲಿನ ವೈದ್ಯಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿನ ಕೋವಿಡ್ ಪರಿಸ್ಥಿತಿಗಳ ಬಗ್ಗೆ ಅವಲೋಕಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಕಿವಿ ಮಾತು ಹೇಳಿದರು.
ಅಲ್ಲದೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ 100 ಹಾಸಿಗೆಗಳುಳ್ಳ ತಾಯಿ ಮಕ್ಕಳ ಆಸ್ಪತ್ರೆ, ಟ್ರಾಮಾಕೇರ್ ಸೆಂಟರ್, ಕ್ಯಾನ್ಸರ್ ಕೇಂದ್ರ ಹಾಗೂ 10 ಹಾಸಿಗೆಗಳುಳ್ಳ ಪೌಷ್ಠಿಕ ಪುನಃಶ್ಚೇತನ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಮೇ 15 ರಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಲಸಿಕಾಕರಣವಾಗದಿರುವ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭುವಿಗಳ ಆಯ್ಕೆಯು ಜಾಗರೂಕತೆಯಿಂದ ಕೂಡಿರಬೇಕು, ಯೋಜನೆಗಳು ನಿಜವಾದ ಅರ್ಹರಿಗೆ ಸಿಗುವಂತಾಗಬೇಕು, ಬಡವರಿಗೆ ವಸತಿ ಯೋಜನೆಗಳ ಬಗ್ಗೆ ಸಾಕಷ್ಟು ಅರಿವು ಇರುವುದಿಲ್ಲ, ಆದುದರಿಂದ ಅಧಿಕಾರಿಗಳು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ, ವಸತಿ ಯೋಜನೆಗಳ ತ್ವರಿತ ಅನುಷ್ಠಾನದ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕುಗಳ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಪಿಡಿಓಗಳ ಪ್ರಗತಿ ಪರಿಶೀಲನಾ ಸಭೆಯು ಕಾಲಕಾಲಕ್ಕೆ ನಡೆಯಬೇಕು ಎಂದು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕಿ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಪೂರ್ವ ಮುಂಗಾರು ಮಳೆಗೆ ಅಗತ್ಯವಾದ ಭೂಮಿ ಸಿದ್ಧತೆ ಮಾಡಲಾಗಿದೆ, ಬಿತ್ತನೆ ಬೀಜ, ರಸಗೊಬ್ಬರಗಳನ್ನು ನಿಗದಿಪಡಿಸಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ 1500 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ, ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಘಟಕಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ, ತುಮಕೂರು, ತಿಪಟೂರು ಮತ್ತು ಶಿರಾ ತಾಲ್ಲೂಕುಗಳಲ್ಲಿ 3 ಆರ್ಟಿಪಿಸಿಆರ್ ಲ್ಯಾಬ್ಗಳನ್ನು ತೆರೆಯಲಾಗಿದೆ, ಎಲ್ಲಾ ಸರ್ಕಾರಿ ಔಷಧಿ ಕೇಂದ್ರಗಳಲ್ಲಿ ಕೋವಿಡ್ ಸೇರಿದಂತೆ ಇತರೆ ಔಷಧಿ ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆರೋಗ್ಯ ಮೇಳಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರಲ್ಲದೆ, ಆರೋಗ್ಯ ಮೇಳಗಳಲ್ಲಿ 7ಲಕ್ಷಕ್ಕೂ ಅಧಿಕ ಜನರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!