ಶಿರಾದಲ್ಲಿ ಜನತಾ ಜಲಧಾರೆ ರಥಯಾತ್ರೆ- ಮದಲೂರು ಕೆರೆಗೆ ಗಂಗಾಪೂಜೆ

ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ತರಲು ಜೆಡಿಎಸ್ ಗೆಲ್ಲಿಸಿ: ಹೆಚ್.ಡಿ.ಕುಮಾರ ಸ್ವಾಮಿ

244

Get real time updates directly on you device, subscribe now.

ಶಿರಾ: ದೇಶದಲ್ಲಿ 75 ವರ್ಷ ನಮ್ಮನು ಆಳಿದ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ನದಿಗಳ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ರಾಜ್ಯದ ನದಿಗಳ ನೀರನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ರೈತರ ಬದುಕನ್ನು ಹಸನು ಮಾಡಬೇಕೆಂದು ಪಣತೊಟ್ಟಿದ್ದೇನೆ. ಜನತೆ ಒಮ್ಮೆ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಿರಾ ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದಲ್ಲಿ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಮುಖ್ಯಮಂತ್ರಿ ಆಗಬೇಕೆಂದು ಜನತಾ ಜಲಧಾರೆ ಯಾತ್ರೆ ಹಮ್ಮಿಕೊಂಡಿಲ್ಲ, ಬಹುಮತ ಬರದಿದ್ದರೂ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ, ನಾನು ಮುಖ್ಯಮಂತ್ರಿ ಆಗಲು ಪಕ್ಷಕ್ಕೆ ಮತ ಕೇಳಲು ಬಂದಿಲ್ಲ, ರಾಜ್ಯದಲ್ಲಿ ಶಾಶ್ವತವಾದ ನೀರಾವರಿ ಯೋಜನೆ ಜಾರಿ ಮಾಡುವ ಉದ್ದೇಶವೇ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮದ ಉದ್ದೇಶ, ರಾಜ್ಯದ ಜನತೆಯ ಮುಂದೆ ಒಂದು ಅವಧಿಗೆ ಸ್ವತಂತ್ರ್ಯವಾದ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಆರ್ಶೀವದಿಸಿದರೆ ಮುಂದಿನ 5 ವರ್ಷದ ಒಳಗೆ ಎಲ್ಲಾ ನೀರಾವರಿ ಮೂಲಗಳಿಂದ ಅದು 3 ಲಕ್ಷ ಕೋಟಿಯಾಗಲಿ, 5 ಲಕ್ಷ ಕೋಟಿಯಾಗಲಿ ಹಳ್ಳಿ ಹಳ್ಳಿಗೆ ನೀರು ತರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ಎಂದರು.
ಹೈಟೆಕ್ ಆಸ್ಪತ್ರೆ, ಹೈಟೆಕ್ ಶಾಲೆ: ರಾಜ್ಯದಲಿ 2023ಕ್ಕೆ ಜೆಡಿಎಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತಂದರೆ ಪ್ರತಿ ಗ್ರಾಮ ಪಂಚಾಯಿತಿಯ ಕೇಂದ್ರದಲ್ಲಿ ಎಲ್ಕೆಜಿಯಿಂದ 12 ತರಗತಿಯವರೆಗೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯದಲ್ಲಿ ಹೈಟೆಕ್ ಶಾಲೆಗಳನ್ನು ತೆರೆದು ಉಚಿತವಾಗಿ ಶಿಕ್ಷಣ ಕೊಡುವ ಯೋಜನೆ ಹಾಕಿಕೊಂಡಿದ್ದೇನೆ ಹಾಗೂ ರಾಜ್ಯದ ಜನತೆಗೆ ಉಚಿತ ಆರೋಗ್ಯ ಸೇವೆ ನೀಡಲು, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಸೌಲಭ್ಯ ಹೊಂದಿರುವ 30 ಹಾಸಿಗೆಯುಳ್ಳ ಆಸ್ಪತ್ರೆ ಸ್ಥಾಪಿಸುತ್ತೇನೆ, ಈ ಆಸ್ಪತ್ರೆಯಲ್ಲಿ 24 ಗಂಟೆ ಇಬ್ಬರು ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
25000 ಕೋಟಿಗೆ 10000 ಕೋಟಿ ಕಮಿಷನ್: ರಾಜ್ಯ ಸರಕಾರ ಯೋಜನೆಗಳ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಸರಕಾರ ಲೂಟಿ ಮಾಡುತ್ತಿದೆ, 40 ಪರ್ಸೆಂಟ್ ಕಮಿಷನ್ ಪಡೆದು ಹಲವು ಕಾಮಗಾರಿ ಮಾಡುತ್ತಿದೆ, ಇದೇ ರೀತಿ ನಮ್ಮ ಸರಕಾರದಲ್ಲಿ ಮಾಡಿದಿದ್ದರೆ 25 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡುವ ಬದಲು ವಿವಿಧ ಯೋಜನೆಗಳಿಗೆ 25 ಸಾವಿರ ಹಣ ಬಿಡುಗಡೆ ಮಾಡಿದ್ದರೆ ನನಗೂ 10 ಸಾವಿರ ಕೋಟಿ ಪರ್ಸೆಂಟೇಜ್ ಬರುತ್ತಿತ್ತು, ಅದೇ ಹಣದಲ್ಲಿ ಚುನಾವಣೆ ಮಾಡಬಹುದಿತ್ತು, ಆದರೆ ಜೆಡಿಎಸ್ ಪಕ್ಷ ಹಣ ಮಾಡುವ ಪಕ್ಷವಲ್ಲ, ಜನರ ಹಿತ ಕಾಯುವ ಪಕ್ಷ ಎಂದು ತಿಳಿಸಿದರು.
ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ, ಇಲ್ಲಿ ನನ್ನ ಮುಖ ನೋಡಿ ಮತ ಹಾಕಿ, ನಾನು ನಿಮ್ಮ ಜೊತೆಗಿರುತ್ತೇನೆ, ನರೇಂದ್ರಮೋದಿ ಮುಖ ನೋಡಿ ಇಲ್ಲಿ ಗೊತ್ತಿಲ್ಲದ ಎಂಪಿಗಳನ್ನು ಗೆಲ್ಲಿಸುತ್ತೀರಿ, ದಿನ ಬೆಳಗ್ಗೆ ನಿಮ್ಮ ಮನೆಯ ಹತ್ತಿರುವ ನಿಮ್ಮವರಿಗೆ ಮತ ನೀಡಿ ಹೆಚ್ಡಿಕೆ ಮನವಿ ಮಾಡಿದರು.
ತುಮಕೂರಿಗೆ ಹೇಮಾವತಿ ನೀರು ಕಾರಣ ಹೆಚ್.ಡಿ.ದೇವೇಗೌಡ: ತುಮಕೂರು ಜಿಲ್ಲೆಗೂ ಹೇಮಾವತಿ ನೀರು ಹರಿದು ಬರಲು ದೇವೇಗೌಡ ಅವರೇ ಕಾರಣ, ದೇವೇಗೌಡರು ಹೋರಾಟ ಮಾಡದಿದ್ದರೆ ಹೇಮಾವತಿ ಜಲಾಶಯ ನಿರ್ಮಾಣವೇ ಆಗುತ್ತಿರಲಿಲ್ಲ. ಆದರೆ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು ತುಮಕೂರಿಗೆ ಹೇಮಾವತಿ ನೀರು ಹರಿಯಲು ದೇವೇಗೌಡರು ಅಡ್ಡಿಪಡಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಹಾಸನಕ್ಕೆ 1.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೇಮಾವತಿ ನೀರು ಹರಿದರು ತುಮಕೂರು ಜಿಲ್ಲೆಗೆ 3.33 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಕ್ಕಿದೆ, ಸುಳ್ಳು ಅಪಪ್ರಚಾರ ಅದಕ್ಕೆ ಬಲಿಯಾಗಬೇಡಿ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ಶಾಸಕರು ಶಿರಾ ತಾಲ್ಲೂಕಿನಲ್ಲಿ ಇದುವರೆಗೆ ಒಂದೇ ಒಂದು ಮನೆ ಹಂಚಿಲ್ಲ, ಹೆಚ್.ಡಿ.ಕುಮಾರಸ್ವಾಮಿ ಯವರು ರೈತರ 25000 ಕೋಟಿ ಸಾಲ ಮನ್ನಾ ಮಾಡಿದ್ದಾರೆ, 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ವೃದ್ಧಾಪ್ಯ ವೇತನ 5000 ರೂಪಾಯಿಗೆ ಹೆಚ್ಚು ಮಾಡುತ್ತಾರೆ ಎಂದರು.
ಶಿರಾಕ್ಕೆ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ನಗರದ ದರ್ಗಾ ಸರ್ಕಲ್ನಿಂದ ಅದ್ಧೂರಿ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.
ಮದಲೂರಿನಲ್ಲಿ ಜಲಸಂಗ್ರಹ: ಜನತಾ ಜಲಧಾರೆಯ ರಥಯಾತ್ರೆಯು ಬೆಳಗ್ಗೆ ತಾಲ್ಲೂಕಿನ ಮದಲೂರು ಕೆರೆಗೆ ಭೇಟಿ ನೀಡಿ ಮದಲೂರು ಕೆರೆಗೆ ಗಂಗಾಪೂಜೆ ಸಲ್ಲಿಸಿ ನಂತರ ಮದಲೂರು ಕೆರೆಯ ನೀರನ್ನು ಸಂಗ್ರಹಿಸಿ ತಾಲ್ಲೂಕಿನ ವಿವಿಧ ದೇವಸ್ಥಾನ, ಮಸೀದಿಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮಧುಗಿರಿ ಶಾಸಕ ವೀರಭದ್ರಯ್ಯ, ಮಾಜಿ ಶಾಸಕರಾದ ಸುಧಾಕರ್ ಲಾಲ್, ಸುರೇಶ್ ಬಾಬು, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಸದಸ್ಯ ರವಿಶಂಕರ್, ಆರ್.ರಾಮು, ಮಾಜಿ ಜಿಪಂ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ತಾಪಂ ಅಧ್ಯಕ್ಷ ಸತ್ಯಪ್ರಕಾಶ್, ಮಾಜಿ ಜಿಪಂ ರಾಮಕೃಷ್ಣ, ಸಿ.ಆರ್.ಉಮೇಶ್, ಲಿಂಗದಹಳ್ಳಿ ಚೇತನ್ಕುಮಾರ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!