ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ

ಮೂಢನಂಬಿಕೆ ಬಿಟ್ಟು ಆರೋಗ್ಯ ತಪಾಸಣೆ ಮಾಡಿಸಿ: ಡಿ.ಕೆ.ಸುರೇಶ್

229

Get real time updates directly on you device, subscribe now.

ಕುಣಿಗಲ್: ಆರೋಗ್ಯದ ವಿಚಾರಣೆಯಲ್ಲಿ ದೇವರಿಗೆ ಹರಕೆ ಕಟ್ಟುವ ಮೂಢ ನಂಬಿಕೆಗಳ ಪರಿಪಾಠ ಬಿಟ್ಟು ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆದು ಉತ್ತಮ ಅರೋಗ್ಯ ಹೊಂದುವ ಮೂಲಕ ಆರೋಗ್ಯವಂತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ತಾಲೂಕಿನ ಅಮೃತೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆರೋಗ್ಯ ಮೆಗಾ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಉದ್ಘಾಟಿಸಿ, ಕೊವಿಡ್ ಎರಡು ಅಲೆ ಬಂದ ನಂತರ ಜನತೆಯಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಆರೋಗ್ಯಸಂರಕ್ಷಿಸುವ ನಿಟ್ಟಿನಲ್ಲಿ ಹಲವು ಯೋಜನೆ ಅನುಷ್ಠಾನಗೊಳಿಸಿವೆ, ಸಾಮಾನ್ಯ ಜನತೆಗೂ ಯೋಜನೆಯ ಅರಿವು ಮೂಡಿಸಲು ಈ ಕಾರ್ಯಕ್ರಮ ಸಹಕಾರಿ, ಲಕ್ಷಾಂತರ ಜನ ಸಂಖ್ಯೆ ಇರುವ ತಾಲೂಕಿನಲ್ಲಿ ಕೇವಲ 20 ಸಾವಿರ ಮಂದಿಗೆ ಆರೋಗ್ಯ ಕಾರ್ಡ್ ಮಾಡಿಸಿರುವುದು ಸರಿಯಲ್ಲ, ಎಲ್ಲರಿಗೂ ಆರೋಗ್ಯ ಕಾರ್ಡ್ ದೊರಕುವ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಶ್ರಮಿಸಬೇಕು, ಸರ್ಕಾರ ಆರೋಗ್ಯ ಕಾರ್ಡ್ ಕೊಟ್ಟರೆ ಸಾಲದು, ಆರೋಗ್ಯ ಕಾರ್ಡ್ನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಶೋಷಣೆ ಇಲ್ಲದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ಅಧಿಕಾರಿಗಳದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದರು.
ಉತ್ತಮ ಗುಣಮಟ್ಟದ ಕಲಬೆರಕೆ ಇಲ್ಲದ ಆಹಾರ ಪದಾರ್ಥಗಳನ್ನೆ ಬಳಸುವ ಮೂಲಕ ಆಹಾರದ ಮೂಲಕ ಬರುವ ರೋಗಗಳ ತಡೆಗಟ್ಟಬಹುದು, ಯಾವುದೇ ವ್ಯಕ್ತಿಯಾಗಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ, ನಮ್ಮ ಮುಂದೆ ಜೀವಂತ ಉದಾಹರಣೆಯಾಗಿ ಪವರ್ ಸ್ಟಾರ್ ಪುನೀತ್ ಅವರ ನಿದರ್ಶನ ಇದೆ, ಆ ಮೂಲಕ ಆರೋಗ್ಯವಂತ ಕರ್ನಾಟಕ ನಿರ್ಮಿಸಿ ಸುಭದ್ರ ಸಧೃಡ ಆರೋಗ್ಯವಂತ ಭಾರತದ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ರಂಗನಾಥ್, ತಾಲೂಕಿನಲ್ಲಿ ಕೊವಿಡ್ ಅಲೆಯ ಮುನ್ನ ನಂತರ ಖಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ, ತಾಲೂಕಿನಲ್ಲಿ ಶೇ. 9 ಮಧುಮೇಹ, ಶೇ. 8 ಅಧಿಕ ರಕ್ತದೊತ್ತಡ, ಶೇ.2 ವಿಕಲಾಂಗತೆ, ಶೇ.3 ಕಣ್ಣಿನ ಕಾಯಿಲೆ, ಶೇ.1 ಕ್ಯಾನ್ಸರ್ ಕಂಡುಬರುತ್ತಿರುವ ಜೊತೆಯಲ್ಲಿ ಮದ್ಯಪಾನದಿಂದ ಪಿತ್ತಕೋಶದ ಸಮಸ್ಯೆಗಳು ಗಣನೀಯ ಏರಿಕೆ ಕಾಣುತ್ತಿವೆ, ಪ್ರಾರಂಭಿಕ ಹಂತದಲ್ಲಿ ಕಾಯಿಲೆಗಳ ಪತ್ತೆ ಹಚ್ಚಿದಲ್ಲಿ ರೋಗ ಉಲ್ಬಣಗೊಳ್ಳುವುದನ್ನು ನಿಯಂತ್ರಿಸಬಹುದು, ಈ ನಿಟ್ಟಿನಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ನಿಂದ ಶೀಘ್ರದಲ್ಲೆ ಮೊಬೈಲ್ ಕ್ಲಿನಿಕ್ ಆಯೋಜಿಸಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಉಚಿತ ತಪಾಸಣೆಗೆ ವ್ಯವಸ್ಥೆ ಮಾಡುವ ಜೊತೆಯಲ್ಲಿ ಮೇ 15 ರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಆರೋಗ್ಯ ತಪಾಸಣೆ ಶಿಬಿರ ಆರಂಭಿಸಲಾಗುವುದು ಎಂದರು.
ಅಮೃತೂರು ಹೋಬಳಿಯ ಹಲವಾರು ಗ್ರಾಮಗಳ ಮೂರು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದ ಲಾಭ ಪಡೆದುಕೊಂಡರು. ಆರೋಗ್ಯ ಇಲಾಖೆಯಿಂದ ನುರಿತ ವೈದ್ಯರ ತಪಾಸಣೆ ನೆರವೇರಿಸುವ ಜೊತೆಯಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೌಂಟರ್ ಆಯೋಜಿಸಲಾಗಿತ್ತು. ಆಯುಶ್ ಇಲಾಖೆಯ ಕೌಂಟರ್ ಆಯೋಜಿಸಿ ಆಯುರ್ವೇದ ಔಷಧ ಉಚಿತವಾಗಿ ನೀಡಲಾಯಿತು, ಪ್ರಕೃತಿ, ಯೋಗ ವೈದ್ಯೆ ಡಾ.ಭವ್ಯ ನೇತೃತ್ವದಲ್ಲಿ ಯೋಗಾಸದ ಮೂಲಕ ಆರೋಗ್ಯ ರಕ್ಷಣೆಯ ಪ್ರಾತ್ಯಕ್ಷತೆ ನೀಡಲಾಯಿತು. ಅಮೃತೂರು ಗ್ರಾಪಂ ಅಧ್ಯಕ್ಷೆ ಪುಷ್ಪಲತ, ಪಡುವಗೆರೆ ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಜಿನ್ನಾಗರ ಗ್ರಾಪಂ ಅಧ್ಯಕ್ಷ ಲವಕುಮಾರ್ ಸೇರಿದಂತೆ ಗ್ರಾಪಂ ಸದಸ್ಯರು, ಕುಣಿಗಲ್ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಮುಖಂಡರಾದ ಹರೀಶ, ದಿವಾಕರಗೌಡ, ತಹಶೀಲ್ದಾರ್ ಮಹಾಬಲೇಶ್ವರ, ತಾಲೂಕು ಆರೋಗ್ಯಾಧಿಕಾರಿ ಜಗದೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!