ತುಮಕೂರು: ಉತ್ಕೃಷ್ಟ ತತ್ವಜ್ಞಾನಿ ಶಂಕರಾಚಾರ್ಯರು ತ್ಯಾಗ ಮತ್ತು ವೈರಾಗ್ಯದ ತತ್ವಕ್ಕೆ ಅನ್ವರ್ಥರಾಗಿದ್ದರು ಎಂದು ರಾಮಕೃಷ್ಣ ಆಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬ್ರಾಹ್ಮಣ ಮಹಾಸಭಾ, ಶ್ರೀಶಂಕರ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರೀಶಂಕರಾಚಾರ್ಯರ ಜಯಂತಿ ಆಚರಣೆಯಲ್ಲಿ ಮಾತನಾಡಿ, ಶಂಕರಾಚಾರ್ಯರ ಬಗ್ಗೆ ಜಗತ್ತು ಕಣ್ಣು ತೆರೆದಿದೆ, ಅವರು ಶ್ರೇಷ್ಠ ಸಂತ, ದಾರ್ಶನಿಕ, ಪ್ರವಾದಿ ಎಂದು ಗೌರವಿಸಲ್ಪಟ್ಟಿದ್ದಾರೆ ಎಂದು ನುಡಿದರು.
ಶಂಕರಾಚಾರ್ಯರು ಬದುಕಿದ್ದು ವರ್ಷಗಳಲ್ಲಿ ಕೇವಲ 32, ಆದರೆ ಬೇರೆಯವರು ವರ್ಷಗಳಲ್ಲಿ ಮಾಡುವ ಕೆಲಸವನ್ನು ಶಂಕರರು ವಾರಗಳಲ್ಲಿ ಮಾಡಿದವರು ಎಂಬ ವಿದೇಶಿ ಚಿಂತಕ ಥಾಮಸ್ ಬೇಕನ್ ಅವರ ಮಾತನ್ನು ಶ್ರೀಗಳು ಉಲ್ಲೇಖಿಸಿ ಮಾತನಾಡಿದರು.
ವೇದೋಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳ ಬಗ್ಗೆ ಅಭುತವಾದ ಭಾಷ್ಯ ಬರೆದ ಶಂಕರಾಚಾರ್ಯರು ಕಪಾಲಿಕರು, ತಾಂತ್ರಿಕ ಸಾಧಕರು ನಡೆಸುತ್ತಿದ್ದ ನರಬಲಿ ನಿಲ್ಲಿಸಿದವರು ಎಂದು ವಿವರಿಸಿದರು.
ಶಂಕರಾಚಾರ್ಯರು ಹೇಳಿರುವಂತೆ ಪ್ರತಿಯೊಬ್ಬ ಮನುಷ್ಯನು ಚಾರಿತ್ರ್ಯ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಆಧ್ಯಾತ್ಮಿಕ ಔನ್ನತ್ಯ ಸಾಧಿಸಬೇಕು ಎಂದು ಪ್ರತಿಪಾದಿಸಿದರು.
ಶಂಕರಾಚಾರ್ಯರ ಬುದ್ಧಿಮತ್ತೆ ಮತ್ತು ವೈಚಾರಿಕ ಪ್ರಜ್ಞೆಯಿಂದಲೇ ಜಗತ್ತು ಅವರನ್ನು ಗುರುತಿಸಿದೆ ಎಂದ ಅವರು 3 ಭಾಷ್ಯಗ್ರಂಥಗಳು, 54 ಪ್ರಕರಣ ಉಪದೇಶ ಗ್ರಂಥಗಳು ಮತ್ತು 76 ಸ್ತೋತ್ರಗಳನ್ನು ರಚಿಸಿದ್ದು, ಮಾತೃಭಾಷೆ ಮಲೆಯಾಳಂ, ದೇವಭಾಷೆ ಸಂಸ್ಕೃತ ಜೊತೆಗೆ ಪ್ರಾಕೃತ ಮತ್ತು ಮಾಗಧಿ ಭಾಷೆಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದರು ಎಂದರು.
ಅನಕ್ಷರಸ್ತರನ್ನು ಅಕ್ಷರಸ್ತರನ್ನಾಗಿಸುವುದು ಸುಲಭಾ, ಆದರೆ ಅಕ್ಷರಸ್ತರನ್ನು ವಿಚಾರವಂತರನ್ನಾಗಿಸುವುದು ಕಷ್ಟ ಎಂಬ ಅಮೆರಿಕಾ ರಾಷ್ಟ್ರಾಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರ ಮಾತನ್ನು ಉಲ್ಲೇಖಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ 8 ನೇ ಶತಮಾನದಲ್ಲಿ ಶಂಕರಾಚಾರ್ಯರು ಮುಂದಿನ ಪೀಳಿಗೆಗೆ ಏನು ಬೇಕೋ ಅದನ್ನು ರಕ್ಷಣೆ ಮಾಡಿದ ಶ್ರೇಷ್ಠ ದಾರ್ಶನಿಕ ಎಂದರು.
ಶಾಸಕ ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ನಾಗೇಶ್ ಬಾವಿಕಟ್ಟೆ, ಉಪವಿಭಾಗಾಧಿಕಾರಿ ವಿ.ಅಜಯ್, ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಟೂಡಾ ಅಧ್ಯಕ್ಷ ನಾಗೇಶ್ ಬಾವಿಕಟ್ಟೆ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಕಾರ್ಯಕ್ರಮದಲ್ಲಿ ಕಾರ್ಪೋರೆಟರ್ ಸಿ.ಎನ್.ರಮೇಶ್, ಕೈಗಾರಿಕೋದ್ಯಮಿ ಚಂದ್ರಶೇಖರ್ ಇತರರು ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.