ರೈತರು ತುಮುಲ್ ನ ಬೆನ್ನೆಲುಬು: ಮಹಾಲಿಂಗಪ್ಪ

232

Get real time updates directly on you device, subscribe now.

ಗುಬ್ಬಿ: ಕೊರೋನದಂತಹ ಸಂದರ್ಭದಲ್ಲಿ ಇಡೀ ದೇಶವೇ ಆರ್ಥಿಕ ಬಿಕ್ಕಟ್ಟಿನಿಂದ ಕೂಡಿತ್ತು, ಅಂತಹ ಸಂದರ್ಭಲ್ಲಿ ತುಮಕೂರು ಹಾಲು ಒಕ್ಕೂಟ ರೈತರನ್ನು ಕೈಬಿಡಲಿಲ್ಲ, ರೈತರೆ ತುಮುಲ್ನ ಬೆನ್ನೆಲುಬು ಎಂದು ನಾವು ಅರಿತಿದ್ದೇವೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕಿನ ನಿಟ್ಟೂರು ಹೋಬಳಿಯ ಎನ್.ನಂದಿಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿ, ಗುಜರಾತ್ ನಂತರ ಕರ್ನಾಟಕ ಉತ್ಪಾದನೆಯ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದ್ದು ರಾಜ್ಯದ 14 ಒಕ್ಕೂಟಗಳಲ್ಲಿ ತುಮಕೂರು ವಿಶೇಷ ಅಭಿವೃದ್ಧಿಯತ್ತ ಸಾಗಿದೆ, ಇಲ್ಲಿನ ಹಾಲು ದೇಶದ ಜಮ್ಮು ಕಾಶ್ಮೀರ, ದೆಹಲಿ, ಮುಂಬೈ, ತಿರುಪತಿ, ಬೆಂಗಳೂರು ಸೇರಿದಂತೆ ಹಲವು ಭಾಗಗಳಿಗೆ ಸರಬರಾಜು ಮಾಡಲಾಗುತ್ತಿದೆ, ಹತ್ತಾರು ಉಪ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಾಗಿದೆ, ಅದನ್ನೂ ಸಹ ತಾವೆಲ್ಲರೂ ತೆಗೆದುಕೊಂಡು ಹಾಲು ಒಕ್ಕೂಟಗಳ ಅಭಿವೃದ್ಧಿಗೆ ಸಹಕಾರ ಮಾಡಬೇಕು ಎಂದರು.
ರೈತರಿಗೆ ಬೇಕಾಗಿರುವಂತಹ ಎಲ್ಲಾ ರೀತಿಯ ಸೌಕರ್ಯವನ್ನು ನಾವು ನೀಡುತ್ತಿದ್ದು, ಉತ್ಪಾದಕರ ಸಹಕಾರ ಸಂಘದಲ್ಲಿ ಇರುವ ಪ್ರತಿಯೊಬ್ಬ ಸದಸ್ಯರಿಗೂ ಅನುಕೂಲವಾಗಬೇಕು, ಅವರು ಸಾಕುವ ಹಸುಗಳಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಹಲವು ಯೋಜನೆ ಮಾಡಿದ್ದೇವೆ, ಜಿಲ್ಲೆಯಲ್ಲಿ ಸುಮಾರು 800 ಶೀತಲ ಘಟಕಗಳನ್ನು ಇದುವರೆಗೂ ಮಾಡಿದ್ದು ಇನ್ನೂ ಹಲವು ಭಾಗದಲ್ಲಿ ಗುಣಮಟ್ಟ ಉಳಿಸಿಕೊಳ್ಳಲು ಹಲವು ಯೋಜನೆ ಸಿದ್ಧಪಡಿಸಿದೆ, ರೈತರಿಗೆ ಕಷ್ಟ ಕಾಲದಲ್ಲಿ ಸಮಸ್ಯೆಯಾಗಬಾರದೆಂದು ಹಸುಗಳಿಗೆ ವಿಮೆ ಯೋಜನೆ ಸಹ ಮಾಡಿಸಿದ್ದು, ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗುತ್ತದೆ, ಹಾಗಾಗಿ ಪ್ರತಿಯೊಬ್ಬರು ಕೂಡ ಹಸು ವಿಮೆ ಮಾಡಿಸಲೇಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ನೂತನ ಕಟ್ಟಡಗಳ ಸ್ಥಾಪನೆ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ನಮ್ಮ ಸದಸ್ಯರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆ ನೀಡಲಾಗುತ್ತಿದೆ, ನೀವು ಮತ್ತಷ್ಟು ಗುಣಮಟ್ಟದ ಹಾಲು ನೀಡಿ ಹಾಲು ಒಕ್ಕೂಟ ನಿಮ್ಮ ಜೊತೆ ಸದಾ ಇರುತ್ತದೆ ಎಂದು ತಿಳಿಸಿದರು.
ತುಮುಲ್ ಗುಬ್ಬಿ ತಾಲ್ಲೂಕಿನ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ತೆಂಗು, ಅಡಿಕೆ, ತರಕಾರಿ, ಹೂವು ಇವುಗಳಲ್ಲಿ ಯಾವುದನ್ನೇ ಬೆಳೆದರು ಮಾರುಕಟ್ಟೆ ಹುಡುಕಿಕೊಂಡು ನಗರಗಳಿಗೆ ಹೋಗಿ ಮಾರಾಟ ಮಾಡಿ ಹಣ ಗಳಿಸಬೇಕು, ಆದರೆ ಪ್ರತಿ ಗ್ರಾಮದಲ್ಲಿ ಸ್ಥಾಪಿಸಿರುವ ಉತ್ಪಾದಕರ ಸಹಕಾರ ಸಂಘಗಳಿಂದ 15 ದಿನಗಳಿಗೆ ನಿಮ್ಮ ಮನೆ ಬಾಗಿಲಿಗೆ ಹಣ ಕೊಡುವಂತಹ ಸಂಸ್ಥೆ ಇದ್ದರೆ ಅದು ಹಾಲು ಒಕ್ಕೂಟ ಮಾತ್ರ, ಸಂಘಗಳು ಎಲ್ಲರೂ ಒಟ್ಟಿಗೆ ಮಾಡಿದಾಗ ಇಡೀ ಗ್ರಾಮವೇ ಅಭಿವೃದ್ಧಿಯಾಗುತ್ತದೆ, ಇಲ್ಲಿ ಯಾವುದೇ ರಾಜಕೀಯ ಮಾಡದೆ ಸಹಕಾರ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಿ ನಮ್ಮ ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚು ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿರುವ ಕೀರ್ತಿ ನಮ್ಮದಾಗಿದ್ದು, ಇನ್ನೂ ಹೆಚ್ಚಿನ ಗುಣಮಟ್ಟದ ಹಾಲನ್ನು ತಾವೆಲ್ಲ ಹಾಕಬೇಕು, ನಿಮಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನಾವು ನೀಡುತ್ತೇವೆ ಎಂದು ರೈತರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎನ್.ನಂದಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್.ಸಿ.ಚೆಲುವನಾರಾಯಣ, ತುಮುಲ್ ವ್ಯವಸ್ಥಾಪಕ ಡಾ.ಟಿ.ಎಂ.ಪ್ರಸಾದ್, ಉಪ ವ್ಯವಸ್ಥಾಪಕ ಚಂದ್ರಶೇಖರ್ ಬಿ ಕೇದನೂರಿ, ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ್ , ಮಂಜುಳಾ ಮುನಿಯಪ್ಪ, ರವೀಶ್, ವಿಸ್ತರಣಾಧಿಕಾರಿ ಟಿ.ಆರ್.ಪುಷ್ಪಲತಾ, ಸಿದ್ದಲಿಂಗಸ್ವಾಮಿ, ಜಯಕುಮಾರ್, ಉಪಾಧ್ಯಕ್ಷ ಉಮೇಶ್ ಸೇರಿದಂತೆ ಎಲ್ಲಾ ನಿರ್ದೇಶಕರು, ಕಾರ್ಯದರ್ಶಿ ಸುರೇಶ್, ದಯಾನಂದ್ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!