ತುಮಕೂರು: ತಾಂತ್ರಿಕತೆಯಲ್ಲಿ ಮತ್ತಷ್ಟು ಕ್ರಾಂತಿ ಮಾಡಲು ಯುವ ಪೀಳಿಗೆ ಸಿದ್ಧರಾಗಬೇಕಿದೆ ಎಂದು ಬಾಬಾ ಸಾಹೇಬ್ ನೀಲಕಂಠ ಕಲ್ಯಾಣಿ ಸಲಹೆ ನೀಡಿದರು.
ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿ, ಭಾರತದಲ್ಲಿ ಓದಿದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಭಾರತವು ತಾಂತ್ರಿಕತೆಯಲ್ಲಿ ವಿಶ್ವ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ, ಈಗ ವ್ಯಾಸಂಗ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ತಾಂತ್ರಿಕತೆಯಲ್ಲಿ ಮತ್ತಷ್ಟು ಕ್ರಾಂತಿ ಮಾಡಲು ಉತ್ಸುಕರಾಗಬೇಕಿದೆ ಎಂದು ಸಲಹೆ ನೀಡಿದರು.
ನಮ್ಮ ದೇಶವು ಹಲವು ರಂಗಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದೆ, ಇಲ್ಲಿನ ಉತ್ಪಾದನೆ ಮತ್ತು ಉತ್ಪನ್ನಗಳು ಅಮೆರಿಕಾ ಸೇರಿ ಹೊರ ರಾಷ್ಟ್ರಗಳಿಗೆ ರ್ತಾಗುತ್ತಿವೆ, ವಿಶ್ವದ ವಿವಿಧ ಕಂಪನಿಗಳಲ್ಲಿ ನಮ್ಮ ಭಾರತೀಯರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಂತಹ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ, ತಾಂತ್ರಿಕತೆಯಲ್ಲಿ ಅತ್ಯಂತ ವೇಗ ಕಾಣುತ್ತಿದ್ದೇವೆ, ಇದರ ಜೊತೆಗೆ ಆರ್ಥಿಕವಾಗಿಯೂ ಪ್ರಗತಿ ಹೊಂದುತ್ತಿದ್ದೇವೆ, ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.
ಕಳೆದ 2 ವರ್ಷಗಳಿಂದ ದೇಶ ಕೋವಿಡ್ ಸಂಕಷ್ಟ ಎದುರಿಸಿತು, ಈ ಸವಾಲುಗಳನ್ನು ಜೈಯಿಸಿ ಹೊರ ಬಂದಿದೆ, ಸರ್ಕಾರವು ಹಲವು ಅತ್ಯುತ್ತಮ ಕಾರ್ಯಗಳ ಮೂಲಕ ಕೋವಿಡ್ ಸಂಕಷ್ಟ ನಿಭಾಯಿಸಿತು, ಲಸಿಕೆ, ಆಕ್ಸಿಜನ್ ವ್ಯವಸ್ಥೆ, ಆಕ್ಸಿಮೀಟರ್, ಆಸ್ಪತ್ರೆಗಳಿಗೆ ಉಪಕರಣ ರವಾನಿಸಿ ಕೋವಿಡ್ ರೋಗಿಗಳ ಆರೋಗ್ಯ ನಿರ್ವಹಣೆಗೆ ಶ್ರಮಿಸಿತು, ಈಗ ಸಹಜ ಸ್ಥಿತಿಗೆ ಮರಳಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ದೇಶದಲ್ಲಿ 35 ವರ್ಷದೊಳಗಿನ ಯುವ ಜನತೆ ಶೇ.65 ರಷ್ಟು ಇದ್ದು, ವ್ಯಾಸಂಗ ಮುಗಿಸಿದ ನಂತರ ಉದ್ಯೋಗಕ್ಕೆ ಸೇರಿದಾಗ ಬದುಕಿನಲ್ಲಿ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಬೇಕು, ನಮ್ಮ ಓದಿಗೆ ಸಹಕಾರಿಗಳಾದ ತಂದೆ ತಾಯಿ, ಪೋಷಕರನ್ನು ಎಂದಿಗೂ ಮರೆಯಬಾರದು, ಮಾತೃ ದೇವೋಭವ, ಪಿತೃ ದೇವೋಭವ ಪರಿಪಾಲನೆ ಮಾಡುತ್ತಲೇ ಈ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಜ್ಞಾನ ಸಂಪಾದನೆಗೆ ಮಿಗಿಲಾದ ಅಂಶ ಮತ್ತೊಂದಿಲ್ಲ, ಯಾರು ಹೆಚ್ಚು ಜ್ಞಾನ ಸಂಪಾದನೆ ಮಾಡುತ್ತಾರೋ ಅಂತಹವರು ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳುತ್ತಾರೆ, ಅಂತಹ ಜ್ಞಾನಮಾರ್ಗದತ್ತ ಯುವ ಜನತೆ ಮುಂದಾಗಬೇಕು, ಅನ್ವೇಷಣೆ, ಆವಿಷ್ಕಾರ ಮತ್ತು ಉದ್ಯಮಶೀಲತೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತರಾಗಬೇಕು ಎಂದು ಸಲಹೆ ನೀಡಿದರು.
ಪದವಿ ಪ್ರದಾನ ಸಮಾರಂಭದಲ್ಲಿ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿಇಓ ಡಾ.ಶಿವಕುಮಾರಯ್ಯ, ಪ್ರಾಂಶುಪಾಲ ಡಾ.ಎಸ್.ವಿ.ದಿನೇಶ್, ಆಡಳಿತ ಮಂಡಳಿ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗೋಲ್ಡ್ ಮೆಡಲ್, ಡಾ. ಶಿವಕುಮಾರ ಸ್ವಾಮೀಜಿ ಮೆಡಲ್ ಹಾಗೂ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಂತ್ರಿಕ ಕ್ರಾಂತಿಗೆ ಯುವ ಪೀಳಿಗೆ ಸಿದ್ಧವಾಗಲಿ
Get real time updates directly on you device, subscribe now.
Prev Post
Next Post
Comments are closed.