ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್

ಕಾಂಗ್ರೆಸ್ ನ ಪ್ರತಿ ಮನೆಯಲ್ಲಿ ರಾವಣ ಹುಟ್ಟಿದ್ದಾನೆ: ಕಟೀಲ್ ಕಿಡಿ

118

Get real time updates directly on you device, subscribe now.

ತುಮಕೂರು: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ಆಡಳಿತ ಸ್ವಾಮಿ ವಿವೇಕಾನಂದರು ವಿಶ್ವ ಕುಟುಂಬ ಹಾಗೂ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದು, ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಕನಸನ್ನು ಸಕಾರಗೊಳಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನಕುಮಾರ್ ಕಟೀಲ್ ತಿಳಿಸಿದರು.

ನಗರದ ಗಾಜಿನಮನೆಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಧುಗಿರಿ ಮತ್ತು ತುಮಕೂರು ಸಂಘಟನಾತ್ಮಕ ಜಿಲ್ಲೆಗಳ ವಿವಿಧ ಪ್ರಕೋಷ್ಠಗಳ ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದಿಂದ ಇಂದು ದೇಶದ ಪ್ರತಿ ಮನೆ ಮನೆಯಲ್ಲಿಯೂ ರಾವಣರಿದ್ದು, ಅವರನ್ನು ಸರಿದಾರಿಗೆ ತರಲು ಬಿಜೆಪಿ ಗಾಂಧೀಜಿಯ ರಾಮ ರಾಜ್ಯದ ಕನಸನ್ನು ಸಾಕಾರಗೊಳಿಸುತ್ತಿದೆ ಎಂದರು.
ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್, ಮೊದಲ ಪ್ರಧಾನಿಯಿಂದ ಮನಮೋಹನ್ ಸಿಂಗ್ವರೆಗೂ ಎಲ್ಲಾ ಪ್ರಭಾನಿಗಳು ಹಗರಣದಲ್ಲಿ ಸಿಲುಕಿದ್ದರು, ಶುದ್ಧವಾಗಿ ಬಂದವರು ಲಾಲ್ ಬಹದ್ದೂರ್ ಶಾಸ್ತ್ರಿ ಮಾತ್ರ ಎಂದರು.
ಬಿಜೆಪಿ ಆಡಳಿತವನ್ನು ಸರ್ವವ್ಯಾಪ್ತಿ ಮತ್ತು ಸರ್ವಸ್ಪರ್ಷಿಯಾಗಿ ಮಾಡಲು ಬಿಜೆಪಿ ಪಕ್ಷದ ಹುಟ್ಟು ಹಾಕಿರುವ 24 ವಿವಿಧ ಪ್ರಕೋಷ್ಠಗಳ 32 ಸಾವಿರಕ್ಕು ಹೆಚ್ಚು ಕಾರ್ಯಕರ್ತರು ಜಿಲ್ಲೆಯಿಂದ ತಾಲೂಕು, ತಾಲೂಕಿನಿಂದ ಹೋಬಳಿ, ಹೋಬಳಿಯಿಂದ ಗ್ರಾಮ, ಗ್ರಾಮದಿಂದ ಬೂತ್, ಬೂತ್ನಿಂದ ಮತದಾರ, ಹೀಗೆ ಎಲ್ಲಾ ಹಂತದಲ್ಲಿ ಪಕ್ಷದ ಸಾಧನೆ, ಜಾರಿಗೆ ತಂದ ಯೋಜನೆಗಳನ್ನು ಮತದಾರನಿಗೆ ಮುಟ್ಟಿಸುವ ಕೆಲಸ ಮಾಡಲಿದೆ, ಇದಕ್ಕಾಗಿ ನಮ್ಮ ಪ್ರಕೋಷ್ಠಗಳ ಕಾರ್ಯಕರ್ತರು ಸರ್ವ ಸನ್ನದ್ದರಾಗಿದ್ದಾರೆ ಎಂದು ಕಟೀಲ್ ತಿಳಿಸಿದರು.
ಈ ದೇಶದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ಒತ್ತು ನೀಡಿದ್ದರ ಫಲವಾಗಿ ಇಂದು ವಿನಾಶದ ಅಂಚಿಗೆ ತಲುಪಿದೆ, ವಿರೋಧ ಪಕ್ಷದ ಸ್ಥಾನ ಪಡೆಯಲು ಸಹ ವಿಫಲವಾಗಿದೆ, ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಪಡೆದಿದ್ದ ಬಿಜೆಪಿ ಇಂದು 400ಕ್ಕೂ ಹೆಚ್ಚು ಸ್ಥಾನ ಪಡೆದಿದೆ, ಪಕ್ಷದ ಹಿರಿಯರು ಹಾಕಿಕೊಟ್ಟ ದೇಶಪ್ರೇಮ, ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಅಂತ್ಯೋದಯ ಎಂಬ ಸಾಮಾಜಿಕ ಚಿಂತನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಕಾಂಗ್ರೆಸ್ ಪಕ್ಷ ವಿನಾಕಾರಣ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಮೇಲೆ ಪಿಎಸ್ಐ ಪರೀಕ್ಷೆ ಹಗರಣ ಸೇರಿದಂತೆ ಹಲವಾರು ಭ್ರಷ್ಟಾಚಾರದ ಆರೋಪ ಮಾಡಿದೆ, ನಾವು ಹೆದರಿ ಓಡಿ ಹೋಗುವುದಿಲ್ಲ, ಸರಿಯಾದ ರೀತಿ ತನಿಖೆ ನಡೆಸುತಿದ್ದೇವೆ, ಎಷ್ಟೇ ಪ್ರಭಾವಿ ಇದ್ದರೂ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಗೃಹ ಸಚಿವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಹಲವಾರು ಹಗರಣಗಳನ್ನು ತನಿಖೆ ನಡೆಸದೆ ಮುಚ್ಚಿ ಹಾಕಲಾಗಿದೆ, ಅರ್ಕಾವತಿ ಹಗರಣದ ಕುರಿತು ನ್ಯಾ.ಕೆಂಪಣ್ಣ ವರದಿ ಹೊರ ಬಂದರೆ ಸಿದ್ದರಾಮಯ್ಯ ಜೈಲಿನಲ್ಲಿ ಇರಬೇಕಾಗುತ್ತದೆ, ಪಿಎಸ್ಐ ಹಗರಣದಲ್ಲಿಯೂ ಶೇ.80 ರಷ್ಟು ಆರೋಪಿಗಳು ಕಾಂಗ್ರೆಸ್ ಪಕ್ಷದವರೆ ಆಗಿದ್ದಾರೆ, ಅವರೆಲ್ಲರೂ ಜೈಲಿಗೆ ಹೋಗುವ ಕಾಲ ದೂರವಿಲ್ಲ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಬಹುತೇಕರು ಬೇಲ್ ಮೇಲೆ ಹೊರಗಿದ್ದಾರೆ, ಬಿಜೆಪಿಯನ್ನು ಪ್ರಶ್ನಿಸುವ ನೈತಿಕತೆ ಅವರಿಗೆ ಇಲ್ಲ ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಎಂಬ ಬೃಹತ್ ನದಿಗೆ ಪ್ರಕೋಷ್ಠಗಳೇ ಶಕ್ತಿ, ಸಂಘಟನೆ ಮತ್ತು ತತ್ವದ ಅಡಿಯಲ್ಲಿ ಭಾರತ ವಿಶ್ವಕ್ಕೆ ತಾಯಿಯಾಗುವ ನಿಟ್ಟಿನಲ್ಲಿ ಪಕ್ಷ ಕಟ್ಟಿದ್ದೇವೆ, ಓಲೈಕೆಯ ರಾಜಕಾರಣದ ಕಾಂಗ್ರೆಸ್ ಪಕ್ಷವನ್ನು ಟಾರ್ಚ್ ಹಾಕಿ ಹುಡುಕಬೇಕಾಗಿದೆ, ಅಧಿಕಾರ ಇದೆ ಎಂದು ಕಾರ್ಯಕರ್ತರು ದರ್ಪದಿಂದ ಮೆರೆದರೆ ಏನಾಗುತ್ತದೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಇಂದಿನ ದನನೀಯ ಸ್ಥಿತಿಯೇ ಉದಾಹರಣೆ, ಬಿಜೆಪಿ ಕಾರ್ಯಕರ್ತರಿಗೆ ಇದೊಂದು ಎಚ್ಚರಿಕೆಯ ಗಂಟೆ ಎಂದರು.
ಗೃಹ ಸಚಿವರ ಕೆಲಸ ನಿಜಕ್ಕು ಸವಾಲಿನದ್ದಾಗಿದೆ, ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ, ತಮ್ಮ ಅಧಿಕಾರದ ಅವಧಿಯಲ್ಲಿ ಎಸ್ಎಫ್ಐ ಮತ್ತು ಪಿಎಫ್ಐ ಗೂಂಡಾಗಳ ಮೇಲಿದ್ದ ಸುಮಾರು 2000 ಕೇಸು ಹಿಂಪಡೆದು ಅವರು ಮಾಡುವ ದೃಷ್ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದರ ಲವಾಗಿ ಇಂದು ಹುಬ್ಬಳ್ಳಿ ಗಲಭೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಸೇರಿದಂತೆ ಹಲವಾರು ಕೋಮು ಗಲಭೆಗಳು ಸಂಭವಿಸಿವೆ, ಪ್ರಿಯಾಂಕ್ ಖರ್ಗೆ ಎಂಬ ಪ್ರಚಾರ ಪ್ರಿಯ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ, ಪಿಎಸ್ಐ ಪರೀಕ್ಷೆ ಹಗರಣದ ಕಿಂಗ್ಪಿನ್ ಖರ್ಗೆ ಅವರ ಅನುಯಾಯಿಗಳು. ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲವೆಂದು ಅರಗಜ್ಞಾನೇಂದ್ರ ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಉಪ್ಪು ತಿಂದವ ನೀರು ಕುಡಿಯಲೇಬೇಕು, ಕಾಂಗ್ರೆಸ್ ಪಕ್ಷದ ಮುಖಂಡರು ಇನ್ನಿಲ್ಲದ ಅಪಪ್ರಚಾರ ನಡೆಸಿ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತಿದ್ದಾರೆ, ಇವುಗಳ ವಿರುದ್ಧ ಪ್ರಕೋಷ್ಠಗಳ ಮುಖಂಡರು ಗಟ್ಟಿಯಾಗಿ ನಿಲ್ಲಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿಯ ಮಧುಗಿರಿ ಜಿಲ್ಲೆಯ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಾರ್ಟಿ, ಇಂದು ಹೆಮ್ಮೆರವಾಗಿ ಬೆಳೆದಿದೆ, 2023 ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಮಧುಗಿರಿ ಮತ್ತು ತುಮಕೂರು ಸಂಘಟನಾತ್ಮಕ ಜಿಲ್ಲೆಗಳಿಂದ ಗೆಲ್ಲಿಸಿ ಕಳುಹಿಸಲಿದ್ದೇವೆ, ಮುಂಬುರವ ಚುನಾವಣೆಗಳಲ್ಲಿ ಪಕ್ಷದ ವತಿಯಿಂದ ಹಿಂದುಳಿದ ವರ್ಗದ ವ್ಯಕ್ತಿಗೆ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿದರು.
ಬಿಜೆಪಿ ರಾಜ್ಯ ವಿವಿಧ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಬ್ಯಾಟರಂಗೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾದ ಭಾನುಪ್ರಕಾಶ್ ಮತ್ತು ಸಹ ಸಂಚಾಲಕ ಡಾ.ಶಿವಯೋಗಿಸ್ವಾಮಿ ಅವರ ನೇತೃತ್ವದಲ್ಲಿ ಪ್ರವಾಸ ಮಾಡಿ, ಎಲ್ಲಾ ಪ್ರಕೋಷ್ಠಗಳನ್ನು ಸಂಘಟಿಸಲಾಗಿದೆ, ಜಿಲ್ಲಾ ಮಟ್ಟದಿಂದ ಮಂಡಲದವರೆಗೆ ಪ್ರಕೋಷ್ಠಗಳ ಮುಖಂಡರು ಸಕ್ರಿಯರಾಗಿದ್ದಾರೆ, ಜಿಲ್ಲೆಯ 13 ಮಂಡಳಗಳ ಮುಖಂಡರು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ, ಮುಂದಿನ ಒಂದು ವರ್ಷಗಳ ಪ್ರತಿ ಮನೆ ಮನೆಗೆ ಪಕ್ಷದ ಸಾ‘ನೆ ತಿಳಿಸಲಿದ್ದಾರೆ ಎಂದರು.
ವೇದಿಕೆಯಲ್ಲಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಭಾನುಪ್ರಕಾಶ್, ಸಹ ಸಂಚಾಲಕ ಡಾ.ಶಿವಯೋಗಿಸ್ವಾಮಿ, ರಾಜ್ಯ ಸಂಯೋಜಕ ಬ್ಯಾಟರಂಗೇಗೌಡ, ಮುಖಂಡರಾದ ಎಂ.ಬಿ.ನಂದೀಶ್, ಶಾಸಕರಾದ ಜೋತಿಗಣೇಶ್, ಡಾ.ರಾಜೇಶಗೌಡ, ಮಸಾಲೆ ಜಯರಾಮ್, ಚಿದಾನಂದ ಎಂ ಗೌಡ, ಮೇಯರ್ ಬಿ.ಜಿ.ಕೃಷ್ಣಪ್ಪ, ವಿನಯ್ ಬಿದರೆ, ಜಯತೀರ್ಥ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!