ಶಿರಾಗೆ ಕೋರೊನಾ ಬಿಡುಗಡೆ?

128

Get real time updates directly on you device, subscribe now.

ಶಿರಾ: ಕೊರೋನಾ ಕಾರಣಕ್ಕೆ ಓರ್ವ ವ್ಯಕ್ತಿ ಮೃತಗೊಂಡು, ರೆಡ್ ಜೋನ್ ಘೋಷಿಸಲಾಗಿರುವ ಶಿರಾದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದವರ ಪೈಕಿ ಹೊಸದಾಗಿ ಯಾವುದೇ ಕೇಸು ಕಂಡುಬಂದಿಲ್ಲದೇ ಜನರು ನಿಟ್ಟುಸಿರು ಬಿಡುವಂತಾಗಿದೆ.
ಮೃತ ರೋಗಿಯ ಕುಟುಂಬದ 22 ಜನರ ಪೈಕಿ ಒಬ್ಬರಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಮತ್ತೊಬ್ಬರನ್ನು ಸಹಾಯಕ್ಕಾಗಿ ಜೊತೆಯಲ್ಲಿ ಕಳುಹಿಸಲಾಗಿದ್ದು, ಉಳಿದ 20 ಜನರನ್ನು ನಗರದಲ್ಲಿಯೇ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ನಗರದಲ್ಲಿ ಮೃತನಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ವೈದ್ಯರು, ಐವರು ವೈದ್ಯ ಸಹಾಯಕರನ್ನು ನಗರದಲ್ಲಿಯೆ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಇದೇ ಅಲ್ಲದೇ ಜಿಲ್ಲಾ ಕೇಂದ್ರದಲ್ಲಿ ಮೃತನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಮತ್ತು ವೈದ್ಯಕೇತರ ಸಿಬ್ಬಂದಿ ಸೇರಿ ಸುಮಾರು 29 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಸೆಕಂಡರಿ ಲೈನ್‌ನಲ್ಲಿ ಮದರಸಾದ ಶಿಕ್ಷಕ ಸೇರಿದಂತೆ ಇಪ್ಪತ್ತೈದು ಜನರನ್ನು, ಮೃತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಕೆಲವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಎಲ್ಲರ ಕ್ವಾರಂಟೈನ್ ಪೀರಿಯಡ್ ಗುರುವಾರಕ್ಕೆ ಮುಕ್ತಾಯಗೊಳ್ಳಲಿದೆ. ನಿರ್ಬಂಧ ಮುಕ್ತಾಯಕ್ಕೂ ಮುನ್ನ ಮತ್ತೊಮ್ಮೆ ಎಲ್ಲರಿಂದಲೂ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡಲಾಗುವುದು. ಸದ್ಯಕ್ಕೆ ಯಾರಲ್ಲಿಯೂ ಕೊರೋನಾದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎನ್ನುವುದೇ ಸಮಾಧಾನದ ಅಂಶ. ಮಾದರಿ ಪರೀಕ್ಷೆಯಲ್ಲಿಯೂ ಎಲ್ಲರದ್ದೂ ನೆಗೆಟೀವ್ ಎಂದು ಬಂದಲ್ಲಿ ಶಿರಾ ಕೊರೋನಾ ಭಯ ಮುಕ್ತ ಎನ್ನಬಹುದಾಗಿದೆ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ವಿದೇಶ ಪ್ರವಾಸ ಮುಗಿಸಿ ಮರಳಿ ಬಂದಿದ್ದ ಸುಮಾರು 11 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಎಲ್ಲರ ಕ್ವಾರಂಟೈನ್ ಪೀರಿಯಡ್ ಮುಗಿದಿದ್ದು ಯಾರಲ್ಲಿಯೂ ಕೊರೋನಾ ಲಕ್ಷಣ ಕಂಡುಬಂದಿಲ್ಲ. ಎಲ್ಲರೂ ಆರೋಗ್ಯದಿಂದ ಇದ್ದಾಾರೆ ಎಂದು ತಿಳಿದುಬಂದಿದೆ. ಮಾರಕ ಕೊರೋನಾ ವಿರುದ್ಧ ಜಿಲ್ಲಾಡಳಿತ ಕೈಗೊಂಡ ಬಿಗಿ ಕ್ರಮಗಳಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Get real time updates directly on you device, subscribe now.

Comments are closed.

error: Content is protected !!