ಕುಣಿಗಲ್: 2022- 23ನೇ ಶೈಕ್ಷಣಿಕ ವರ್ಷದ ಅಂತ್ಯದೊಳಗಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದ 5 ಜಿಲ್ಲೆಗಳಲ್ಲಿನ ಒಂದು ಸಾವಿರ ಶಾಲೆಗಳಿಗೆ 20 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ವಿಭಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದಲ್ಲಿ ನಡೆದ ನಡೆದ ಶಿಕ್ಷಕರ ಕುಂದು ಕೊರತೆ ಸಭೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆ ನೀಗಿಸಲು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ತಾತ್ಕಾಲಿಕ ವ್ಯವಸ್ಥೆಯಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡುತ್ತಿದೆ, ಈ ಅತಿಥಿ ಶಿಕ್ಷಕರಿಗೆ ಮಾಸಿಕ 7500 ರೂ. ನೀಡಲಾಗುತ್ತದೆ, ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ವಯೋನಿವೃತ್ತಿ, ರಾಜೀನಾಮೆ ಮತ್ತು ನಿಧನ ಮತ್ತಿತರ ಕಾರಣಗಳಿಂದ ಸಾಕಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಅಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಅನುದಾನಿತ ಪ್ರೌಢಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕಾತಿ ಮಾಡುಕೊಳ್ಳಲು ಅವಕಾಶ ನೀಡಬೇಕು ಎಂದು ನಾರಾಯಣಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.
ಕಲಿಕಾ ಚೇತರಿಕೆ ತರಬೇತಿಯನ್ನು ಕೇವಲ ಸರ್ಕಾರಿ ಶಾಲಾ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತಿದೆ, ಇದನ್ನು ಅನುದಾನಿತ ಶಾಲೆಗಳ ಶಿಕ್ಷಕರಿಗೂ ಕೊಡಬೇಕು, ಆ ಮೂಲಕ ತಾರತಮ್ಯ ಹೋಗಲಾಡಿಸಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ಸ್ಥಳದಲ್ಲಿಯೇ ಕರೆಮಾಡಿ ಸೂಚನೆ ನೀಡಿದರು. ಪ್ರಸಕ್ತ ವರ್ಷ ಮೇ16 ರಿಂದ ಶಾಲೆಗಳು ಆರಂ‘ವಾಗುತ್ತಿವೆ. ಪ್ರತಿ ವರ್ಷ ಡಿಸೆಂಬರ್ನಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿತ್ತು, ಆದರೆ ಈ ವರ್ಷ ಶಾಲೆ ಆರಂಭದಲ್ಲೇ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಇದ್ದ ಹಲವಾರು ಜಟಿಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುತ್ತಾ ಬರಲಾಗುತ್ತಿದೆ, ಅನುದಾನಿತ ಶಾಲೆಗಳ ಶಿಕ್ಷಕರ ಬಹು ವರ್ಷಗಳ ಬೇಡಿಕೆಯಾಗಿರುವ ಕಾಲ್ಪನಿಕ ವೇತನ ಬಡ್ತಿ ಕೊಡಿಸಲು 350 ಕೋಟಿ ರೂ. ಬೇಕು, ಕೊರೊನಾ ಕಾರಣದಿಂದ ಖಜಾನೆ ಖಾಲಿಯಾಗಿತ್ತು, ಈಗೀಗ ಆರ್ಥಿಕ ಚಟುವಟಿಕೆಗಳು ಶುರುವಾಗಿ ರಾಜ್ಯ ಆರ್ಥಿಕವಾಗಿ ಸದೃಢವಾಗುತ್ತಿದೆ, ರಾಜ್ಯದ ಖಜಾನೆ ತುಂಬುತ್ತಿದೆ, ಈ ದಿಸೆಯಲ್ಲಿ ಕಾಲ್ಪನಿಕ ವೇತನ ಬಡ್ತಿ ಕೊಡಿಸಲು ದೊಡ್ಡ ಹೋರಾಟ ಮಾಡಲು ಉದ್ದೇಶಿಸಲಾಗಿದೆ, ಅನುದಾನಿತ ಪ್ರೌಢಶಾಲೆಗಳಲ್ಲಿ 31 ಡಿಸೆಂಬರ್ 2015ಕ್ಕೂ ಮುಂಚೆ ಖಾಲಿಯಾಗಿರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅವಕಾಶ ಕೊಟ್ಟಿದೆ, ಆದರೆ ಅಲ್ಲಿಂದೀಚೆಗೆ ಖಾಲಿಯಾಗಿರುವ ಹುದ್ದೆಗಳನ್ನು ನೇಮಕ ಮಾಡಲು ಅವಕಾಶ ನೀಡಿಲ್ಲ, ಇದರಿಂದ ಅಲ್ಲಿ ಪಾಠ ಮಾಡಲು ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ, ಈ ಹಿನ್ನೆಲೆಯಲ್ಲಿ 2020ರ ವರೆಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿಯಾಗಿರುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ತಕ್ಷಣ ಅನುಮತಿ ನೀಡಬೇಕು, ನೇಮಕಾತಿ ಪ್ರಕ್ರಿಯೆ ಏಕ ಗವಾಕ್ಷಿ ಯೋಜನೆ ಅಡಿಯಲ್ಲಿ ಆಗಬೇಕು, ಬಿಇಓ, ಡಿಡಿಪಿಐ ಕಚೇರಿಗಳಿಗೆ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು, ಶಿಕ್ಷಕರ ನೇಮಕಾತಿ ಸಂಬಂಧ ಇರುವ ನಿಯಮಗಳನ್ನು ಸರಳೀಕರಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಹೇಳಿದರು.
ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು, ಕೆಲವಕ್ಕೆ ಸ್ಥಳದಲ್ಲೆ ಪರಿಹಾರ ಸೂಚಿಸಿದರು, ಇನ್ನು ಕೆಲವನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಬಗೆಹರಿಸುವ ಭರವಸೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಪ್ರಧಾನ ಕಾರ್ಯದರ್ಶಿ ದೇವರಾಜ, ನಿವೃತ್ತ ಬಿಇಓ ಡಿ.ಕೃಷ್ಣ, ಡಯಟ್ ಉಪನ್ಯಾಸಕಿ ಮಮತಾಮಣಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಎಸ್.ಎನ್. ನರಸಿಂಹಮೂರ್ತಿ, ಮುಖ್ಯ ಶಿಕ್ಷಕರಾದ ವೆಂಕಟೇಶ್ ಬಾಬು, ಪ್ರಕಾಶಮೂರ್ತಿ, ತೋಟಗಾರಿಕೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗಂಗಾಧರ್, ಶಿಕ್ಷಕರಾದ ಚನ್ನಪ್ಪ, ಓಬಣ್ಣ ಮತ್ತಿತರರು ಹಾಜರಿದ್ದರು.
ಶಿಕ್ಷಕರ ಸಮಸ್ಯೆ ಬಗೆಹರಿಸಲು ಶ್ರಮಿಸುವೆ: ವೈಎಎನ್
Get real time updates directly on you device, subscribe now.
Prev Post
Comments are closed.