ಹೊಸ ಮದ್ಯದಂಗಡಿ ಆರಂಭಕ್ಕೆ ಗ್ರಾಮಸ್ಥರ ವಿರೋಧ

392

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಸೀಮಾಂಧ್ರ ಗಡಿ ಭಾಗದ ಲಕ್ಷ್ಮಿ ಪುರಗ್ರಾಮದ ಬಳಿ ಮದ್ಯದಂಗಡಿ ತೆರೆಯುವುದು ಬೇಡ ಎಂದು ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.

ಬಹುತೇಕ ಗ್ರಾಮಗಳು ಸೀಮಾಂಧ್ರಕ್ಕೆ ಹೊಂದಿಕೊಂಡಿದ್ದು ಸೀಮಾಂಧ್ರದ ಮಡಕಶಿರಾ ತಾಲ್ಲೂಕಿನಿಂದ ನೂರಾರು ಜನರು ಮದ್ಯ ವ್ಯಸನಿಗಳು ಆಗಮಿಸಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಾರೆ, ಇದರಿಂದ ಗ್ರಾಮದಲ್ಲಿರುವ ಮಹಿಳೆಯರು, ಮಕ್ಕಳು, ಎಲ್ಲರಿಗೂ ಸಾಕಷ್ಟು ತೊಂದರೆಯಾಗಲಿದೆ, ಸ್ಥಳೀಯ ಗ್ರಾಪಂ ನವರರಾಗಲಿ, ಸಂಬಂಧಪಟ್ಟ ಇಲಾಖೆಯವರು ಪರವಾನಗಿ ನೀಡಬಾರದು, ಈ ಹಳ್ಳಿಯಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟವರ್ಗದವರು, ರೈತರು, ಕೂಲಿ, ಕಾರ್ಮಿಕರು ವಾಸಿಸುತ್ತಿದ್ದು ಇಲ್ಲಿಯವರೆಗೂ ನೆಮ್ಮದಿಯ ಜೀವನ ಮಾಡುತ್ತಿದ್ದೇವೆ, ಇಂಥ ಚಿಕ್ಕ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಈ ರೀತಿ ಮದ್ಯದ ಅಂಗಡಿಗೆ ತೆರೆಯಲು ಪ್ರಯತ್ನ ಮಾಡಿದರೆ ಸದರಿ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುವುದಿಲ್ಲ, ಈ ಗ್ರಾಮದವರು ಮತ್ತು ಸುತ್ತಮುತ್ತಲಿನವರು ಕೂಲಿಯನ್ನೆ ನಂಬಿ ಜೀವನ ಮಾಡುತ್ತಿವೆ, ಈ ರೀತಿ ಮದ್ಯದಂಗಡಿ ತೆರೆದರೆ ಕುಟುಂಬಗಳು ಬೀದಿಗೆ ಬೀಳುವ ಸಂಭವವೇ ಹೆಚ್ಚಾಗಿದ್ದು, ಜೊತೆಗೆ ಜಮೀನುಗಳಲ್ಲಿ ಮದ್ಯದ ಬಾಟಲ್ಗಳ ಗಾಜಿನ ಚೂರು ಬೀಳುವ ಸಂಭವವಿರುತ್ತದೆ, ಇದರಿಂದಾಗಿ ಜಮೀನಿನ ಫಲವತ್ತತೆ ಕಡಿಮೆಯಾಗುತ್ತದೆ.
ಇಲ್ಲಿನ ಸಣ್ಣ ಸಣ್ಣ ಮಕ್ಕಳು ಸಹ ಕುಡಿತಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುವ ಸ್ಥಿತಿ ಉಂಟಾಗುತ್ತದೆ, ಅದೇ ರೀತಿ ಮದ್ಯ ವ್ಯಸನಿಗಳು ದ್ವಿಚಕ್ರ ವಾಹನದಲ್ಲಿ ಅತಿವೇಗವಾಗಿ ಬಂದು ಅಪಘಾತಗಳಿಗೆ ಕಾರಣವಾಗುತ್ತದೆ, ಜೊತೆಗೆ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗುವುದರಿಂದ ಈ ಮದ್ಯದ ಅಂಗಡಿ ತೆರೆಯಲು ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು, ನೀಡಿದಲ್ಲಿ ಉಗ್ರ ಹೋರಾಟ ಮತ್ತು ಕಾನೂನಾತ್ಮಕವಾಗಿ ನ್ಯಾಯಲಯದ ಮೊರೆ ಹೋಗಬೇಕಾಗುತ್ತದೆಂದು ಲಕ್ಷ್ಮಿ ಪುರ, ಐನ ಹಳ್ಳಿ, ಮಲ್ಲನಾಯಕನಹಳ್ಳಿ, ಹೊಟ್ಟೆಬೆಟ್ಟ, ತಾಂಡ, ಗೊಲ್ಲರಹಟ್ಟಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಮದ್ಯದ ಅಂಗಡಿ ಕರ್ನಾಟಕದ ಶಿರಾ, ಸಿಮಾಂಧ್ರದ ಅನಂತಪುರ ಸಂಪರ್ಕದ ಹೆದ್ದಾರಿಗೆ ಹೊಂದಿಕೊಂಡಂತೆ ತೆರೆಯಲು ಸಕಲ ಸಿದ್ಧತೆ ಮಾಡಿಕೊಂಡು ಅಂಗಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಅನುಮಾನ ಮೂಡುತ್ತಿದ್ದು, ಆಂಧ್ರ ಮೂಲದವರಾದ ಕಲ್ಮರಿ ಶ್ರೀರಾಮಪ್ಪ ಮತ್ತು ಇತರರು ಪ್ರಯತ್ನ ಮಾಡುತ್ತಿದ್ದಾರೆಂಬ ಮಾಹಿತಿ ಇದ್ದು, ಗ್ರಾಪಂ ನಿಂದ ಅನುಮತಿ ಪಡೆದಿಲ್ಲದಿರುವುದು ಸಾಕಷ್ಟು ಚರ್ಚೆಯಾಗುತ್ತಿದ್ದು, ಅದರಲ್ಲೂ ಕೃಷಿ ಜಮೀನಿನಲ್ಲಿ ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶ ಅರಿಯದಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಈ ಹಿಂದೆ ಲಕ್ಷ್ಮೀಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಶೀರ್ಷಿಕೆಯಡಿ ಪ್ರಥಮ ಕಾರ್ಯಕ್ರಮ ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಾಗ ಅಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮದ್ಯದ ಅಂಗಡಿ ತೆರೆಯದಂತೆ ಮನವಿ ಸಲ್ಲಿಸಿದರೂ ಗ್ರಾಮಸ್ಥರ ವಿರೋಧದ ನಡುವೆ ಮದ್ಯದ ಅಂಗಡಿಗೆ ಅನುಮತಿ ನೀಡುತ್ತಿರುವುದರ ಬಗ್ಗೆ ಕೂಡ ಪ್ರತಿಭಟನಾಕಾರರು ಗಮನ ಸೆಳೆದಿದ್ದಾರೆ.
ಗ್ರಾಮಸ್ಥರಾದ ಈರಣ್ಣ, ಕುಮಾರ, ಪಾಪೇಗೌಡ, ರಾಜು, ಸಣ್ಣಮಾದಪ್ಪ , ತಿಪ್ಪೇಸ್ವಾಮಿ, ಹನುಮಂತಯ್ಯ, ನರಸಿಂಹ, ಪಾಪೇಗೌಡ, ಸುರೇಶ್ ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!