ಸೊಸೈಟಿಗಳ ಮೇಲೆ ತಹಸೀಲ್ದಾರ್ ದಾಳಿ

162

Get real time updates directly on you device, subscribe now.

ಹುಳಿಯಾರು: ನಿಯಮ ಬಾಹಿರವಾಗಿ ಅಡಿಗೆ ಎಣ್ಣೆ, ಉಪ್ಪು, ಸೋಪು ಮಾರುತ್ತಿದ್ದ ನ್ಯಾಯಬೆಲೆ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ತಹಸೀಲ್ದಾರ್ ಪರವಾನಗಿದಾರರ ಬೆವರಿಳಿಸಿದ ಘಟನೆ ಹುಳಿಯಾರಿನಲ್ಲಿ ಗುರುವಾರ ನಡೆದಿದೆ.
ಅಡಿಗೆ ಎಣ್ಣೆ, ಉಪ್ಪು, ಸೋಪು ಕೊಂಡರೆ ಮಾತ್ರ ಪಡಿತರ ನೀಡುವುದಾಗಿ ನ್ಯಾಯಬೆಲೆ ಅಂಗಡಿ ಪರವಾನಗಿದಾರರು ಕಾರ್ಡ್‌ದಾರರಿಗೆ ಕಡ್ಡಾಯ ಮಾಡಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆಯೇ ಸಾಕ್ಷಿಗಳ ಸಮೇತ ತಹಶೀಲ್ದಾರ್‍ ತೇಜಸ್ವಿನಿ ಅವರು ಇಲ್ಲಿನ ಶಂಕರ್ ಸ್ಟೋರ್, ಶ್ರೀನಿವಾಸ ಮೂರ್ತಿ, ರಹಮತ್ ಉಲ್ಲಾ ಸಾಬ್ ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕೊರೊನಾ ಲಾಕ್‌ಡೌನ್ ನಿಂದ ಬಡವರ, ಕೂಲಿಕಾರ್ಮಿಕರ, ರೈತರ ಸಂಕಷ್ಟ ಅರಿತು ಅವರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ 2 ತಿಂಗಳ ಪಡಿತರವನ್ನು ಮುಂಚಿತವಾಗಿ ಕೊಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಲಾಭ ಮಾಡಲು ಯೋಚಿಸುವ ನಿಮ್ಮಂತವರ ಪರವಾನಗಿ ರದ್ದು ಮಾಡುವುದೇ ಲೇಸು ಎಂದರು.
ಈ ಸಂದರ್ಭದಲ್ಲಿ ಪಡಿತರ ಚೀಟಿದಾರರೇ ಕೊಡುವಂತೆ ಕೇಳುತ್ತಾರೆ ಎಂದು ನ್ಯಾಯಬೆಲೆ ಅಂಗಡಿಯವರು ಸಮಜಾಯಿಷಿ ನೀಡಿದಾಗ ಕೋಪಗೊಂಡ ತಹಸೀಲ್ದಾರ್ ಎಣ್ಣೆ, ಉಪ್ಪು ಕೊಳ್ಳಲು ಪ್ರಾವಿಜನ್ ಸ್ಟೋರ್‌ಗಳಿಲ್ವೇನ್ರಿ, ನಿಮ್ಮತ್ರನೇ ಏಕೆ ಕೇಳ್ತಾರೆ, ಅಷ್ಟಕ್ಕೂ ಅಕ್ಕಿ, ಗೋಧಿ ಬಿಟ್ಟು ಇತರೆ ಸಾಮಗ್ರಿಗಳನ್ನು ಸೊಸೈಟಿಯಲ್ಲೇ ಇಟ್ಟಿರುವುದೇ ಮೊದಲ ತಪ್ಪು ಎಂದು ಕೆಂಡಮಂಡಲರಾದರು.
ಗ್ರಾಮಲೆಕ್ಕಿಗರನ್ನು ಕರೆದು ಸೊಸೈಟಿಯಲ್ಲಿದ್ದ ಎಣ್ಣೆ, ಉಪ್ಪನ್ನು ಸೀಜ್ ಮಾಡಿದರಲ್ಲದೆ ಪರವಾನಗಿ ರದ್ದು ಮಾಡಲು ಸ್ಥಳ ಮಹಜರು ಮಾಡಲು ಸೂಚಿಸಿದರು. ತಕ್ಷಣ ನ್ಯಾಯಬೆಲೆ ಅಂಗಡಿ ಪರವಾನಗಿದರರು ಕೈ ಮುಗಿದು ಕ್ಷಮೆ ಕೇಳಿ ಇನ್ಮುಂದು ಅಕ್ಕಿ, ಗೋಧಿ ಬಿಟ್ಟು ಬೇರೇನು ಮಾರುವುದಿಲ್ಲ ಬಿಟ್ಟು ಬಿಡಿ ಎಂದು ಕೇಳಿಕೊಂಡರು.
ಇನ್ನುಂದು ಬಾರಿ ಈ ರೀತಿಯ ದೂರು ಕೇಳಿ ಬಂದರೆ ಪರವಾನಗಿ ರದ್ದು ಮಾಡುವ ಖಡಕ್ ಎಚ್ಚರಿಕೆ ನೀಡಿದ ತಹಸೀಲ್ದಾರ್ ಮೊದಲೇ ಕರೊನಾ ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರಿಗೆ ಪಡಿತರ ಕೊಡಲು ಅಲೆದಾಡಿಸಬೇಡಿ, ಎಣ್ಣೆ ಖರೀದಿಸಲೇ ಬೇಕೆಂದು ಒತ್ತಡ ಹಾಕಬೇಡಿ, ಓಟಿಪಿ ಬಾರದಿದ್ದರೆ ಸಹಿ ಪಡೆದು ಉಚಿತವಾಗಿ ಒಬ್ಬರಿಗೆ 10 ಕೆ.ಜಿ. ಅಕ್ಕಿ, 2 ಕೆ.ಜಿ ಗೋಧಿ ವಿತರಿಸುವಂತೆ ಸೂಚನೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!