ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತರ ಜಿಲ್ಲಾ ಸಮಾವೇಶ 22ಕ್ಕೆ

187

Get real time updates directly on you device, subscribe now.

ತುಮಕೂರು: ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಮೇ 22 ರಂದು ಬೆಳಗ್ಗೆ 11 ಗಂಟೆಗೆ ಅಮಾನಿಕೆರೆಯ ಗಾಜಿನಮನೆಯಲ್ಲಿ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆಯೇ ಈ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು, ಕೊರೊನ ಹಿನ್ನಲೆಯಲ್ಲಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ, ಹಾಗಾಗಿ ಪಕ್ಷದ ವರಿಷ್ಠರು ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮತಿ ಪಡೆದು ಮೇ 22 ರಂದು ಅಲ್ಪಸಂಖ್ಯಾತರ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಮಾವೇಶದಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 10 ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಜೈನ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಜಿಲ್ಲಾ ಮುಖಂಡರಾದ ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಎಸ್.ಷಫಿಅಹಮದ್, ಡಾ.ರಫಿಕ್ ಅಹಮದ್, ಶಾಸಕರಾದ ಹ್ಯಾರೀಸ್, ರಿಜ್ವಾನ್ ಹರ್ಷದ್ ಸೇರಿದಂತೆ ಹಾಲಿ ಮತ್ತು ಮಾಜಿ ಶಾಸಕರು ಮುಖಂಡರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನು ಯಾವುದೇ ನೊಟೀಸ್ ಇಲ್ಲದೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದರ ವಿರುದ್ಧ ಸರಕಾರದ ಮಟ್ಟದಲ್ಲಿ ಧ್ವನಿ ಎತ್ತಲು ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಲಾಗುವುದು ಎಂದು ಅತೀಕ್ ಅಹಮದ್ ನುಡಿದರು.
ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ದೊರೆಯಲಿದೆ, ಪ್ರಸ್ತುತ ಮಾಜಿ ಶಾಸಕರಾದ ಡಾ.ರಫಿಕ್ ಅಹಮದ್, ನಾನು ಹಾಗೂ ಇಕ್ಬಾಲ್ ಅಹಮದ್ ಸೇರಿ ಮೂವರು ಆಕಾಂಕ್ಷಿಗಳಾಗಿದ್ದೇವೆ, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದೇವೆ, ಚುನಾವಣೆ ಪೂರ್ವದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ, ಅವರಲ್ಲಿ ಯಾರಿಗೆ ಗೆಲ್ಲುವ ಶಕ್ತಿ ಇದೆ ಎಂದು ನೋಡಿಕೊಂಡು ಪಕ್ಷ ಟಿಕೇಟ್ ನೀಡಲಿದೆ ಎಂದರು.
ಮಾಜಿ ಶಾಸಕ ಡಾ.ರಫಿಕ್ ಅಹಮದ್ ಮಾತನಾಡಿ, ಈ ಹಿಂದೆ 2012 ರಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದಿಂದ ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ಏರ್ಪಡಿಸಲಾಗಿತ್ತು, ಆ ನಂತರ ಹಲವು ಸಂದ‘ರ್ದಲ್ಲಿ ಮಾಡಬೇಕೆಂದರೂ ಕೊರೊನ ಮತ್ತಿತರ ತೊಂದರೆಗಳಿಂದ ಸಾಧ್ಯವಾಗಿರಲಿಲ್ಲ, ಮುಂಬರುವ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ಸಮಾವೇಶ ಅತ್ಯಗತ್ಯ ಎಂದರು.
ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸುಮಾರು 4 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿತ್ತು, ಇದರ ಲವಾಗಿ ಅರಿವು ಯೋಜನೆಯ ಮೂಲಕ ಸಿಇಟಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ, ಉನ್ನತ ವ್ಯಾಸಾಂಗಕ್ಕೆ ರಿಯಯಿತಿ ದರದಲ್ಲಿ ಕೆಎಂಡಿಸಿ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತಿತ್ತು, ಇದರಿಂದ ಉನ್ನತ ಶಿಕ್ಷಣಕ್ಕೆ ಹೋಗುವ ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತರ ಸಂಖ್ಯೆ 4 ಪಟ್ಟು ಹೆಚ್ಚಾಗಿತ್ತು, ಆದರೆ ಪ್ರಸ್ತುತ ಬೊಮ್ಮಾಯಿ ಸರಕಾರ ಅರಿವು ಯೋಜನೆ ಕಡಿತ ಮಾಡಿದೆ, ಇದರಿಂದ ಮುಸ್ಲಿಂ ಬಡ ವಿದ್ಯಾರ್ಥಿಗಳ ಶಿಕ್ಷಣ ಸಂಪೂರ್ಣ ಕುಂಠಿತಗೊಂಡಿದೆ, ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡದ ಜೊತೆಗೆ, ಕಾಂಗ್ರೆಸ್ ಪಕ್ಷದ ಪರವಾಗಿ ನಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದೇವೆ ಎಂದು ಡಾ.ರಫಿಕ್ ಅಹಮದ್ ತಿಳಿಸಿದರು.
ಸಮಾಜ ಸೇವಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಮುಂಬರುವ ಚುನಾವಣೆಗೆ ಕಾರ್ಯಕರ್ತರಿಗೆ ಹುರುಪು ಮತ್ತು ಹುಮ್ಮಸ್ಸು ತುಂಬುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು. ಈ ವೇಳೆ ಪಾಲಿಕೆ ಸದಸ್ಯ ನಯಾಜ್ ಅಹಮದ್ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!