ಬೇಡಿಕೆ ಈಡೇರಿಕೆಗೆ ಮಾಜಿ ಸೈನಿಕರ ಪ್ರತಿಭಟನೆ

ಕುಣಿಗಲ್ ನಲ್ಲಿ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ

138

Get real time updates directly on you device, subscribe now.

ಕುಣಿಗಲ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾಜಿ ಸೈನಿಕರ ಸಂಘದ ವತಿಯಿಂದ ಮಾಜಿ ಸೈನಿಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸಮಸ್ಯೆ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ನಲ್ಲಿ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ರಮೇಶಗೌಡ ನೇತೃತ್ವದಲ್ಲಿ ಹಾಸನ, ಬೆಂಗಳೂರು, ನಾಗಮಂಗಲ, ಮೈಸೂರು ಇತರೆಡೆಗಳಿಂದ ಬಂದು ಸಂಘಟಿತರಾದ ನಿವೃತ್ತ ಸೈನಿಕರು ಕೈಯಲ್ಲಿ ನಾಡಧ್ವಜ, ರಾಷ್ಟ್ರಧ್ವಜ ಹಿಡಿದು ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಮಾಜಿ ಸೈನಿಕರ ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಬಿಜೆಪಿ ಮುಖಂಡ, ಪಿ.ಎಲ್.ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಮಾಜಿ ಸೈನಿಕರು ಸಮಸ್ಯೆಯನ್ನು ಸರ್ಕಾರ, ತಾಲೂಕು ಆಡಳಿತ ಆದ್ಯತೆ ಮೇರೆಗೆ ಬಗೆಹರಿಸಬೇಕು, ದೇಶ ಕಾಯಲು ಎಂತಹ ಹೋರಾಟಕ್ಕೂ ಸಿದ್ಧರಾಗುವ ಸೈನಿಕರು ತಮ್ಮ ಸಮಸ್ಯೆ ಈಡೇರಿಕೆಗೂ ಅಷ್ಟೆ ಪರಿಣಾಮಕಾರಿ ಹೋರಾಟ ನಡೆಸುತ್ತಾರೆ. ತಾಲೂಕಿನಲ್ಲಿ ತಹಶೀಲ್ದಾರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ ಕೆಲ ಕೆಳಹಂತದ ಸಿಬ್ಬಂದಿ ಮಾಡುವ ತಪ್ಪುಗಳಿಂದಾಗಿ ಜನ ಭಾದಿತರಾಗುತ್ತಿದ್ದಾರೆ, ಹಾಗೆಯೇ ಹಲವು ಸೈನಿಕ ಕುಟುಂಬಗಳಿಗೂ ಅನ್ಯಾಯವಾಗುತ್ತಿದೆ, ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಸೈನಿಕರ ಸಮಸ್ಯೆ ಬಗೆಹರಿಸಬೇಕು, ಮಾಜಿ ಸೈನಿಕರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಿ ಬಗೆಹರಿಸುವ ಭರವಸೆ ನೀಡಿದರು.
ತಾಲೂಕು ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಮಾಜಿ ಸೈನಿಕರಿಗೆ ವ್ಯವಸಾಯದ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡುವಂತೆ ಹಲವಾರು ಸುತ್ತೊಲೆ ಹೊರಡಿಸಿದೆ, ಆದರೆ ಸುತ್ತೊಲೆಯ ಅಂಶಗಳು ಯಾವುದೂ ಜಾರಿಯಾಗಿಲ್ಲ, ತಾಲೂಕಿನಲ್ಲಿ 90 ಮಂದಿ ಮಾಜಿ ಸೈನಿಕರು ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ತಾಲೂಕು ಕಚೇರಿಗೆ ಎಡತಾಕುತ್ತಿದ್ದಾರೆ, ಮಾಜಿ ಸೈನಿಕರ ಸಮಸ್ಯೆ ಬಗೆಹರಿಸುವ ಕನಿಷ್ಟ ಸೌಜನ್ಯ ತಾಲೂಕು ಆಡಳಿತ ಮಾಡದೆ ಇರುವುದು ನೋಡಿದರೆ ತಾಲೂಕು ಆಡಳಿತ ಮಾಜಿ ಸೈನಿಕರ ಬಗ್ಗೆ ಯಾವ ಧೋರಣೆ ಹೊಂದಿದೆ ಎಂದು ತಿಳಿಯಬೇಕಾಗಿರುತ್ತದೆ, ಇಂದು ಸಾಂಕೇತಿಕ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶಗೌಡ ಇತರರು ಮಾತನಾಡಿದರು. ಪ್ರತಿಭಟನೆಯಲ್ಲಿ ತಾಲೂಕಿನ ಮಾಜಿ ಸೈನಿಕರ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿರುವುದನ್ನು ಪ್ರಸ್ತಾಪಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಚಿಕ್ಕಣ್ಣ, ಗಂಗಾಧರಯ್ಯ, ಕರಿಗೌಡ, ಮೋಹನ್, ರಂಗರಾಜ್, ಜಯಕುಮಾರ, ಆರ್.ಮುರುಳಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!