ಶಿಕ್ಷಕರ ನೇಮಕಾತಿ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಸಿ

ಯಾವುದೇ ಲೋಪದೋಷವಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ

217

Get real time updates directly on you device, subscribe now.

ತುಮಕೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ ಸಂಬಂಧ ಮೇ 21 ಹಾಗೂ 22, 2022ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯು ಜಿಲ್ಲೆಯ 11 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಗೌಪ್ಯತೆ, ಸುರಕ್ಷತೆ ಮತ್ತು ವ್ಯವಸ್ಥಿತವಾಗಿ ಯಾವುದೇ ಸಣ್ಣ ಲೋಪ ದೋಷಕ್ಕೂ ಆಸ್ಪದ ನೀಡದಂತೆ ನಿಯಮಾನುಸಾರ ನಡೆಸಲು ಸಕಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಕೇಂದ್ರಗಳ ಪ್ರತಿಯೊಂದು ಪರೀಕ್ಷಾ ಆವರಣ ಮತ್ತು ಕೊಠಡಿಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮತ್ತು ಎಲ್ಲಾ ಕೇಂದ್ರಗಳಲ್ಲೂ ಮೆಟಲ್ ಡಿಟೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯದ ಉಸ್ತುವಾರಿಗಳನ್ನಾಗಿ ನೇಮಿಸುವಂತೆ ಮತ್ತು ಗ್ರೂಪ್- ಎ ಅಧಿಕಾರಿಗಳನ್ನು ಸಿಟ್ಟಿಂಗ್ ಸ್ಕ್ವಾಡ್ಗಳಾಗಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಪರೀಕ್ಷಾರ್ಥಿಗಳಲ್ಲದ ಪರೀಕ್ಷಾ ಉಸ್ತುವಾರಿ ಇಲ್ಲದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಅಥವಾ ಯಾವುದೇ ಅನಧಿಕೃತ ವ್ಯಕ್ತಿ ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶಿಸುವಂತಿಲ್ಲ, ನಿಯಮ ಉಲ್ಲಂಸಿ ಪ್ರವೇಶಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸೂಚಿಸಿದರು.
ಪರೀಕ್ಷಾ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ಸ್ಮಾರ್ಟ್ ಫೆನ್ ಅಥವಾ ಯಾವುದೇ ಮೊಬೈಲ್ ಗಳನ್ನು ಬಳಸುವಂತಿಲ್ಲ ಎಂದು ತಿಳಿಸಿದ ಅವರು, ಅಗತ್ಯವಿದ್ದಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸುವಂತೆ ತಿಳಿಸಿದರು.
ಖಾಸಗಿ ಅನುದಾನಿತ, ಅನುದಾನ ರಹಿತ ಸಂಸ್ಥೆಗಳ ಕಟ್ಟಡಗಳನ್ನು ಪರೀಕ್ಷಾ ಕೇಂದ್ರಗಳಾಗಿ ನಿಗದಿಪಡಿಸಿದ್ದಲ್ಲಿ ಆ ಸಂಸ್ಥೆಯ ಎಲ್ಲಾ ಸಿಬ್ಬಂದಿನ್ನು ಪರೀಕ್ಷಾ ಕಾರ್ಯದಿಂದ ಹೊರತುಪಡಿಸುವುದು ಮತ್ತು ಇವರಿಗೆ ಪರೀಕ್ಷೆಯ ಯಾವುದೇ ಕಾರ್ಯಕ್ಕೆ ನಿಯುಕ್ತಿಗೊಳಿಸತಕ್ಕದ್ದಲ್ಲ ಎಂದು ತಿಳಿಸಿದರು.
ಕೋವಿಡ್- 19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷೆಯ ಸಂಬಂಧ ಸಂಪೂರ್ಣ ನಿಯಂತ್ರಣ ಸಾಧಿಸಿ ಕಾನೂನು ಸುವ್ಯವಸ್ಥೆಯೊಂದಿಗೆ ಪರೀಕ್ಷೆ ಯಶಸ್ವಿಯಾಗಿ ನಡೆಸಲು ಪರೀಕ್ಷಾ ಕೇಂದ್ರದ ಸುತ್ತಮುತ್ತ ಕನಿಷ್ಠ 200 ಮೀಟರ್ ವ್ಯಾಪ್ತಿಯೊಳಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದರು.
ಪರೀಕ್ಷಾ ಕೇಂದ್ರವು ಸಾಧಾರಣ, ಸೂಕ್ಷ್ಮ, ಅತೀಸೂಕ್ಷ್ಮ ಕೇಂದ್ರಗಳಾಗಿದ್ದಲ್ಲಿ ಅವುಗಳಿಗೆ ಅಗತ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುವುದು ಮತ್ತು ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ಗಸ್ತುಪಡೆ ನಿಯೋಜಿಸಿ ಯಾವುದೇ ಅಕ್ರಮ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ ವಾಡ್ ಸಭೆಗೆ ತಿಳಿಸಿದರು.
ಸಭೆಯಲ್ಲಿ ಈ ಮೇಲ್ಕಂಡ ವಿಷಯಗಳಲ್ಲದೆ ಗೌಪ್ಯ ಸಾಮಗ್ರಿಗಳನ್ನು ಸ್ವೀಕರಿಸುವ ಬಗ್ಗೆ, ಮಾರ್ಗಾಧಿಕಾರಿಗಳ ಕರ್ತವ್ಯದ ಬಗ್ಗೆ, ಪರೀಕ್ಷಾ ದಿನಗಳಂದು ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವ ಬಗ್ಗೆ, ಪ್ರಶ್ನೆ ಪತ್ರಿಕೆಗಳಿಗೆ ಪೊಲೀಸ್ ಬೆಂಗಾವಲು ನೀಡುವ ಬಗ್ಗೆ, ಪರೀಕ್ಷಾ ಕಾರ್ಯಕ್ಕೆ ವಾಹನಗಳ ವ್ಯವಸ್ಥೆ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು.
ಎಲೆಕ್ಟ್ರಾನಿಕ್ ವಸ್ತುಗಳು ನಿಷೇಧಿತ
ಪರೀಕ್ಷಾರ್ಥಿಗಳಿಗೆ ಎಲ್ಲಾ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಷೇಧಿಸಲಾಗಿರುತ್ತದೆ, ಮೊಬೈಲ್, ಕ್ಯಾಲ್ಕ್ಯೂಲೇಟರ್, ಎಲೆಕ್ಟ್ರಾನಿಕ್ ವಾಚ್, ಬ್ಲೂಟೂತ್, ಯಾವುದೇ ರೀತಿಯ ಕೈಗಡಿಯಾರ, ಜಾಮಿಟ್ರಿ ಬಾಕ್ಸ್ ಇದ್ದಲ್ಲಿ ಕಡ್ಡಾಯವಾಗಿ ತಪಾಸಣೆಗೊಳಪಡಿಸಿ ರೇಖಾ ಗಣಿತ ಪರಿಕರಗಳನ್ನು ಮಾತ್ರ ಅನುಮತಿಸಲಾಗುವುದು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಡಿಡಿಪಿಐಗಳಾದ ನಂಜಯ್ಯ, ರೇವಣ್ಣ ಸಿದ್ದಪ್ಪ, ಜಿಲ್ಲಾ ಖಜಾನೆಯ ಉಪ ನಿರ್ದೇಶಕರಾದ ಮುನಿರೆಡ್ಡಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!