ಈಶ್ವರ್ ಎಂ
ತುಮಕೂರು: ಸೋರುತ್ತಿವುದು ಮನೆಯ ಮಾಳಿಗೆ ಅಜ್ಞಾನದಿಂದ ಎಂಬ ಮಾತಿದೆ, ಅದರಂತೆ ತುಮಕೂರಿನ ಬಿಇಓ ನೂತನ ಕಚೇರಿ ಅಧ್ವಾನ ಹಾಗೂ ಕಳಪೆ ಕಾಮಗಾರಿಯಿಂದ ಈಗ ಸೋರಲಾರಂಭಿಸಿದೆ, ಕಟ್ಟಡ ಉದ್ಘಾಟನೆಯಾಗಿ ಆರು ತಿಂಗಳು ಕಳೆದಿಲ್ಲ, ನೋಡಿರಣ್ಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿಯ ದುಸ್ಥಿತಿ ಎಂದು ಇಲ್ಲಿನ ಸಿಬ್ಬಂದಿಯೇ ಹಿಡಿ ಶಾಪ ಹಾಕುತ್ತಿದ್ದಾರೆ.
ಹೌದು, ಬಿಇಓ ಕಚೇರಿ ಶಿಕ್ಷಣ ಕ್ಷೇತ್ರದ ಶಕ್ತಿ ಸೌಧವಾಗಿಯೇ ಗುರುತಿಸಿಕೊಂಡಿದೆ, ಶಿಕ್ಷಣದ ಗುಣಮಟ್ಟ ಹಾಗೂ ಎಲ್ಲಾ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವುದು, ಮಕ್ಕಳಿಗೆ ಅಗತ್ಯ ವಿದ್ಯಾಭ್ಯಾಸ ನೀಡುವುದು ಸೇರಿದಂತೆ ಎಲ್ಲಾ ಕೆಲಸಗಳು ಈ ಬಿಇಓ ಕಚೇರಿಯಿಂದಲೇ ಆಗಬೇಕು, ಆದರೆ ಇಂಥ ಬಿಇಓ ಕಚೇರಿ ಈಗ ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವಂತಾಗಿದೆ.
ನಗರದ ಹೃದಯ ಭಾಗದಲ್ಲಿರುವ ಚರ್ಚ್ ಸರ್ಕಲ್ ರೋಡ್ನಲ್ಲಿ ಕಳೆದ ಡಿಸೆಂಬರ್ ನಲ್ಲಿ ನೂತನ ಬಿಇಒ ಕಚೇರಿಯನ್ನು ಉದ್ಘಾಟಿಸಲಾಗಿತ್ತು, ಇಲ್ಲಿನ ಸಿಬ್ಬಂದಿ ಹೊಸ ಕಟ್ಟಕ್ಕೆ ಖುಷಿಯಿಂದ ಪ್ರವೇಶ ಪಡೆದು ಅಲ್ಲಿ ಕೆಲಸ ನಿರ್ವಹಿಸಲು ಆರಂಭಿಸಿದರು, ಆದರೆ ಕಟ್ಟಡದ ಕಳಪೆ ಕಾಮಗಾರಿ ಪರಿಣಾಮ ಈಗ ಸಿಬ್ಬಂದಿಗೆ ದರ್ಶನವಾಗುತ್ತಿದೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಈ ನೂತನ ಕಟ್ಟದ ಮೊದಲ ಮಹಡಿಯಲ್ಲಿ ನೀರು ಸೋರಲಾರಂಭಿಸಿದೆ, ಗುಣಮಟ್ಟದಿಂದ ಕಾಮಗಾರಿ ನಡೆಸಿಲ್ಲ, ಮೋಲ್ಡಿಂಗ್ ಸರಿಯಾಗಿ ಹಾಕದ ಪರಿಣಾಮ ಈಗ ಕಟ್ಟಡ ಸೋರಲಾರಂಭಿಸಿದೆ.
ಕೋಟಿ ವೆಚ್ಚದ ಕಟ್ಟಡ
ಈ ನೂತನ ಬಿಇಓ ಕಚೇರಿ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ, ನಿರ್ಮಿತಿ ಕೇಂದ್ರ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿತ್ತು, ಸಹಜವಾಗಿಯೇ ಗುಣಮಟ್ಟ ಕಾಪಾಡಿಕೊಂಡು ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತೆ ಎಂದು ಭಾವಿಸಲಾಗಿತ್ತು, ಆದರೆ ಆ ಕೆಲಸ ಆಗಿಯೇ ಇಲ್ಲ, ಇಲ್ಲಿ ಸಂಪೂರ್ಣ ಕಳಪೆ ದರ್ಶನವಾಗುತ್ತಿದೆ, ಕಟ್ಟಡದ ಮೇಲ್ಬಾಗದಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ, ಸರಾಗವಾಗಿ ನೀರು ಹೊರ ಹೋಗಲು ವ್ಯವಸ್ಥೆ ಮಾಡಿಲ್ಲ, ಇದರ ಪರಿಣಾಮ ನೀರು ಸೋರಲಾರಂಭಿಸುತ್ತೆ ಎನ್ನುತ್ತಾರೆ ಕಚೇರಿ ಮಂದಿ.
1000 ಲೀಟರ್ ಟ್ಯಾಂಕ್ ಬಳಕೆ
ತುಮಕೂರು ಬಿಇಓ ಕಚೇರಿಗೆ ಶಿಕ್ಷಕರು, ಶಾಲೆಗಳ ಸಿಬ್ಬಂದಿ ಸೇರಿದಂತೆ ನಿತ್ಯ ಸಾವಿರಾರು ಮಂದಿ ತಮ್ಮ ಕೆಲಸ ಕಾರ್ಯಕ್ಕಾಗಿ ಭೇಟಿ ನೀಡುತ್ತಾರೆ, ಇವರಿಗೆ ಇಲ್ಲಿ ಸೌಲಭ್ಯಗಳೇ ಇಲ್ಲದಂತಾಗಿದೆ, ಉತ್ತಮ ಶೌಚಾಲಯ, ನೀರಿನ ವ್ಯವಸ್ಥೆ ಕೂಡ ಇಲ್ಲ, 10 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇಡಬೇಕಾದ ಜಾಗದಲ್ಲಿ ಒಂದು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಇಟ್ಟು ಕೈತೊಳೆದುಕೊಂಡಿದ್ದಾರೆ, ಇದರಿಂದ ಇಲ್ಲಿಕೆ ಕೆಲಸ ಕಾರ್ಯಕ್ಕೆ ಬಂದಾಗ ಶೌಚಾಲಯ ಬಳಸಲು ನೀರಿನ ಸಮಸ್ಯೆಯೂ ಎದುರಾಗುತ್ತಿದೆ.
ಕಣ್ಣುಮುಚ್ಚಿ ಕುಳಿತ್ರಾ ಬಿಇಓ?
ಈ ನೂತನ ಬಿಇಓ ಕಚೇರಿ ಕಟ್ಟಡ ಎಸ್ಟಿಮೇಟ್ ಪ್ರಕಾರ ನಿರ್ಮಾಣ ಮಾಡಿಲ್ಲ, ಕಟ್ಟಡ ನಿರ್ಮಾಣವಾದ ಮೇಲೆ ಪಿಡಿಬ್ಲ್ಯುಡಿ ಯವರು ದೃಡೀಕಿಸಬೇಕು, ಆದರೆ ಇಲ್ಲಿ ಯಾವುದೂ ಪಾಲನೆಯಾಗಿಲ್ಲ, ಇನ್ನು ಬಿಇಓ ಹನುಮಾನಾಯಕ್ ಅವರು ಗುಣಮಟ್ಟ ಪರಿಶೀಲನೆಯಾದ ನಂತರ ತಮ್ಮ ಸುಪರ್ದಿಗೆ ಪಡೆಯಬೇಕಿತ್ತು, ಆದರೆ ಬಿಇಓ ಸಾಹೇಬ್ರು ಕಣ್ಣು ಮುಚ್ಚಿ ಕುಳಿತು ಅಕ್ರಮ ಹಾಗೂ ಕಳಪೆ ಕಾಮಗಾರಿಗೆ ಅವಕಾಶ ಮಾಡಿಕೊಟ್ರಾ, ಇದರಿಂದ ಅನುಕೂಲವನ್ನು ಪಡೆದು ಕಟ್ಟಡದ ಅಧ್ವಾನಕ್ಕೆ ಕಾರಣರಾಗಿ ಬಿಟ್ರಾ ಎಂಬ ಪ್ರಶ್ನೆ ಬಿಇಒ ಕಚೇರಿ ಅಂಗಳದಿಂಲೇ ಕೇಳಿ ಬರುತ್ತಿದೆ.
ಏನು ಮಾಡ್ತಿದ್ದಾರೆ ಜನಪ್ರತಿನಿಧಿಗಳು?
ನೂತನವಾಗಿ ನಿರ್ಮಾಣವಾದ ಬಿಇಓ ಕಚೇರಿಯನ್ನು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಹಾಗೂ ನಗರದ ಶಾಸಕ ಜ್ಯೋತಿಗಣೇಶ್ ಬಹಳ ಖುಷಿಯಾಗಿ ಉದ್ಘಾಟಿಸಿದರು, ಆದರೆ ಕಚೇರಿ ಗುಣಮಟ್ಟದಿಂದ ಇದೆಯಾ, ಕಳಪೆ ಕಾಮಗಾರಿ ನಡೆದಿದೆಯಾ ಎಂಬುದನ್ನು ಪರಿಶೀಲಿಸದೆ ಕಟ್ಟಡ ಅಧ್ವಾನಕ್ಕೆ ಪರೋಕ್ಷವಾಗಿ ಕಾರಣರಾದರಾ ಎಂಬ ಪ್ರಶ್ನೆಯೂ ಎದುರಾಗಿದೆ, ಇನ್ನು ಜಿಲ್ಲಾಧಿಕಾರಿಗಳು ಏನು ಮಾಡಿತ್ತಿದ್ದಾರೆ ಎಂಬ ಪ್ರಶ್ನೆಯೂ ಎದುರಾಗಿದೆ. ಇಲ್ಲಿ ಕಟ್ಟಡ ಕಾಮಗಾರಿ ಕಳೆಪೆ ಹಿಂದ ಹಣ ಲೂಟಿ ಮಾಡುವ ಹುನ್ನಾರವೂ ನಡೆದಿದೆ, ಅದರಲ್ಲಿ ಯಾವೆಲ್ಲಾ ಅಧಿಕಾರಿಗಳು ಭಾಗಿಯಾಗಿದ್ದಾರೆ, ಎಷ್ಟು ಹಣ ತಮ್ಮ ಜೇಬಿಗೆ ಇಳಿಸಿಕೊಂಡು ಬಿಇಓ ಕಚೇರಿಗೆ ಕಳಂಕ ತಂದಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಬಯಲಾಗಲಿದೆ, ಅಲ್ಲಿಯವರೆಗೂ ಕಾಯಬೇಕು ಅಷ್ಟೇ.
ಕ್ರಮ ಜರುತ್ತಾ?
ಬಿಇಓ ಕಚೇರಿ ಅಧ್ವಾನ ಮತ್ತು ಕಳಪೆ ಕಾಮಗಾರಿ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಶಾಸಕರು, ಸಂಸದರು, ಸಚಿವರು ಗಮನ ಹರಿಸಿ ಸರಿಪಡಿಸುವ ಕಾರ್ಯ ಮಾಡುತ್ತಾರಾ? ತಪ್ಪು ಮಾಡಿರುವ ಅಧಿಕಾರಿಗಳು ಮತ್ತು ಕಟ್ಟಡ ನಿರ್ಮಿಸಿದ ನಿರ್ಮಿತಿ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ? ಇಲ್ಲ ಬಿಇಓ ಕಚೇರಿ ಹಾಳು ಬಿದ್ದು ಹೋಗಲಿ ಎಂದು ಸುಮ್ಮನಾಗುತ್ತಾರಾ ಕಾದು ನೋಡಬೇಕು.
ಬಳಕೆಯಾಗದ ಶೌಚಾಲಯ
ಒಂದು ಕಚೇರಿ ಅಂದರೆ ಅಲ್ಲಿ ವ್ಯವಸ್ಥಿತ ಶೌಚಾಲಯ, ನೀರಿನ ಸೌಲಭ್ಯ ಇರಬೇಕು, ಆದರೆ ಇಲ್ಲಿನ ಕಚೇರಿಯಲ್ಲಿ ಶೌಚಾಲಯವಿದ್ದರೂ ಅದು ಬಳಕೆಯಾಗುತ್ತಿದೆ, ಶೌಚಾಲಯ ಬಳಸಿದೆ ಅಲ್ಲೂ ನೀರು ಸೋರಿಕೆಯಾಗಿ ವ್ಯವಸ್ಥಾಪಕರ ಕಚೇರಿಗೆ ನೀರು ಬರುತ್ತದೆ, ಇದರಿಂದ ಇಲ್ಲಿನ ಶೌಚಾಲಯವನ್ನೇ ಬಂದ್ ಮಾಡಲಾಗಿದೆ, ಇದು ನಾಚಿಕಗೇಡಿನ ಸಂಗತಿಯೂ ಹೌದು.
ಲೂಟಿಗಿಳಿಯಿತಾ ನಿರ್ಮಿತಿ ಕೇಂದ್ರ?
ತುಮಕೂರು ಜಿಲ್ಲೆಯಲ್ಲಿ ಯಾವುದೇ ದೊಡ್ಡ ಸರ್ಕಾರಿ ಕಟ್ಟಡ ನಿರ್ಮಾಣವಾಗಬೇಕಾದರೆ ಅದರ ಹೊಣೆಗಾರಿಕೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗುತ್ತದೆ, ನಿರ್ಮಿತಿ ಕೇಂದ್ರ ಗುಣಮಟ್ಟದ ಕಾಮಗಾರಿ ನಡೆಸಿ ಉತ್ತಮ ಕಟ್ಟಡ ನಿರ್ಮಿಸುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇತ್ತು, ಆದರೆ ಇತ್ತೀಚಿನ ದಿನಗಳಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಮ್ಮ ಭವರಸೆ ಬದಲಿಸಿದ್ದು ಯಾವುದೇ ಸರ್ಕಾರಿ ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ, ಇದಕ್ಕೆ ಉದಾಹರಣೆ ಇತ್ತೀಚಿಗೆ ನಿರ್ಮಾಣವಾಗಿರುವ ನೂತನ ಬಿಇಓ ಕಚೇರಿ ಕಟ್ಟಡ, ಇಲ್ಲಿ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ, ಬಳಸಿರುವ ವಸ್ತುಗಳು ಕಳಪೆಯಿಂದ ಕೂಡಿವೆ, ಇದೆಲ್ಲದರ ಪರಿಣಾಮ ಈಗ ಬಿಇಓ ಕಚೇರಿ ಸೋರಲಾರಂಭಿಸಿದೆ, ಇದರಿಂದ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊರುವ ನಿರ್ಮಿತಿ ಕೇಂದ್ರವನ್ನು ನಂಬಲಾಗದ ಸ್ಥಿತಿ ನಿರ್ಮಾಣವಾಗಿದೆ.
Comments are closed.