ಮಕ್ಕಳ ತುರ್ತು ಸಹಾಯವಾಣಿ ಬಳಸಿ: ಡೀಸಿ

18 ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ 1098 ಬಳಸಿ

161

Get real time updates directly on you device, subscribe now.

ತುಮಕೂರು: ಚೈಲ್ಡ್ ಲೈನ್ ಒಂದು ರಾಷ್ಟ್ರ ಮಟ್ಟದಲ್ಲಿನ ಮಕ್ಕಳ ಸಹಾಯವಾಣಿಯಾಗಿದ್ದು, 1098 ಇದರ ಸಂಖ್ಯೆಯಾಗಿರುತ್ತದೆ. ಈ ದೂರವಾಣಿ ಸಂಖ್ಯೆಯು ಉಚಿತವಾಗಿ ವರ್ಷದ 365 ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಸಂಕಷ್ಟದಲ್ಲಿರುವ ಅಥವಾ ತೊಂದರೆಯಲ್ಲಿರುವ 18 ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಬೀದಿ ಬದಿಯ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಯ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಾಲ್ಯ ವಿವಾಹ ಬಾಲಕಾರ್ಮಿಕ, ಚಿಂದಿ ಆಯುವ, ಭಿಕ್ಷಾಟನೆಯಲ್ಲಿ ತೊಡಗಿರುವ, ಶಾಲೆ ಬಿಟ್ಟ ಮಕ್ಕಳ, ವಸತಿ ಸೌಲಭ್ಯ ಪ್ರಕರಣಗಳ ಬಗ್ಗೆ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿದರೆ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯವಿರುವ ರಕ್ಷಣೆ ಮತ್ತು ಪೋಷಣೆ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಕ್ರಮಬದ್ಧವಾದ ಕಾರ್ಯವಿಧಾನಗಳನ್ನು ಅನುಸರಿಸಿ ಜಿಲ್ಲೆಯಲ್ಲಿನ ಬೀದಿ ಬದಿಯ ಮಕ್ಕಳನ್ನು ಗುರುತಿಸುವುದು ಹಾಗೂ ಪುನರ್ವಸತಿ ಕಲ್ಪಿಸುವಲ್ಲಿ ಇಲಾಖೆಗಳು ಕ್ರಮವಹಿಸಬೇಕು ಎಂದರಲ್ಲದೇ ಗುರುತಿಸಿದ ಮಕ್ಕಳ ವಿವರಗಳನ್ನು ಎನ್ಸಿಪಿಸಿಆರ್ ಸಿದ್ಧಪಡಿಸಿದ ಬಾಲ ಸ್ವರಾಜ್ ಪೋರ್ಟಲ್ ನಲ್ಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ, ಪೊಲೀಸ್, ಕಾರ್ಮಿಕ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಶಿಕ್ಷಣ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಆರೋಗ್ಯ ಇಲಾಖಾಧಿಕಾರಿಗಳು ಸಂಕಷ್ಟದಲ್ಲಿರುವ ಮಕ್ಕಳ ಗುರುತಿಸಿ ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸ ಬೇಕಲ್ಲದೆ ಮಕ್ಕಳೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸಬೇಕು, ಮಕ್ಕಳನ್ನು ವಸತಿಶಾಲೆ, ವಸತಿ ನಿಲಯಗಳಿಗೆ ದಾಖಲು ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸಭೆಗೆ ಮಾಹಿತಿ ನೀಡುತ್ತಾ ಸಮಗ್ರ ಮಕ್ಕಳ ರಕ್ಷಣಾ ಯೋಜನೆಗಳ ವಿಶೇಷ ಶಿಶುಪಾಲನಾ ಕಾರ್ಯಕ್ರಮದಡಿ ಹೆಚ್ಐವಿ ಭಾದಿತ 278 ಮಕ್ಕಳಿಗೆ 31.99 ಲಕ್ಷ ರೂ. ಗಳ ಆರ್ಥಿಕ ನೆರವು ನೀಡಲಾಗಿದೆ ಎಂದರಲ್ಲದೇ ಕೋವಿಡ್ ಮತ್ತು ಕೋವಿಡೇತರ ಭಾದಿತ ಮಕ್ಕಳ ವಿವರಗಳನ್ನು ಬಾಲಸ್ವರಾಜ್ ಪೋರ್ಟಲ್ನಲ್ಲಿ ಅಳವಡಿಸಲಾಗಿದೆ ಎಂದ ಅವರು 115 ಮಕ್ಕಳನ್ನು ಪ್ರಾಯೋಜಿತ ಕಾರ್ಯಕ್ರಮದಡಿ ಆರ್ಥಿಕ ಸೌಲಭ್ಯ ನೀಡಲು ಗುರುತಿಸಲಾಗಿದೆಯಲ್ಲದೆ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಕೋವಿಡ್ ಸೋಂಕಿನಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಅನಾಥರಾಗಿರುವ 8 ಮಕ್ಕಳಿಗೆ ತಲಾ 3 ಲಕ್ಷಗಳಂತೆ ಆರ್ಥಿಕ ಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು.
ದತ್ತು ಕಾರ್ಯಕ್ರಮದ ಪ್ರಗತಿಯ ಮಾಹಿತಿ ನೀಡಿ ಏಪ್ರಿಲ್ 2021 ರಿಂದ ಈವರೆಗೂ ಸಂಸ್ಥೆಗೆ 37 ಮಕ್ಕಳು ದಾಖಲಾಗಿದ್ದು ಅವರಲ್ಲಿ 26 ಮಕ್ಕಳನ್ನು ದತ್ತು ನೀಡಲಾಗಿದೆ ಎಂದರಲ್ಲದೇ ಪ್ರಸ್ತುತ ದತ್ತು ಕೇಂದ್ರದಲ್ಲಿ 17 ಮಕ್ಕಳು ಇದ್ದು ಅವರಲ್ಲಿ 11 ಮಕ್ಕಳು ದತ್ತು ನೀಡಲು ಅರ್ಹರಿರುವ ಬಗ್ಗೆ ತಿಳಿಸಿದರು.
ಏಪ್ರಿಲ್ 2022 ರವರೆಗೆ ಬಾಲನ್ಯಾಯ ಮಂಡಳಿಯಲ್ಲಿ 109 ಪ್ರಕರಣ ದಾಖಲಾಗಿದೆ, ಅವುಗಳಲ್ಲಿ 50 ಪ್ರಕರಣ ಇತ್ಯರ್ಥಗೊಂಡಿದ್ದು 59 ಪ್ರಕರಣ ಬಾಕಿ ಇರುವುದಾಗಿ ತಿಳಿಸಿದರು, ಇನ್ನೂ ಇದೇ ಅವಧಿಯಲ್ಲಿ ಪೋಕ್ಸೋ ಕಾಯಿದೆಯಡಿ 169 ಪ್ರಕರಣ ದಾಖಲಾಗಿದ್ದು ಇವುಗಳಲ್ಲಿ 28 ಪ್ರಕರಣ ಖುಲಾಸೆಗೊಂಡು 3 ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟಿಸಲಾಗಿ ಒಟ್ಟು 31 ಪ್ರಕರಣ ಇತ್ಯರ್ಥಗೊಂಡಿವೆ ಎಂದರಲ್ಲದೇ 138 ಪ್ರಕರಣ ಬಾಕಿ ಇರುವ ಬಗ್ಗೆ ತಿಳಿಸಿದರು. ಶಿಕ್ಷೆಯಾದ 3 ಪ್ರಕರಣಗಳ ಪೈಕಿ 2 ಪ್ರಕರಣಗಳಿಗೆ ತಲಾ 6 ಲಕ್ಷ ರೂ. ಮತ್ತು 1 ಪ್ರಕರಣಕ್ಕೆ 1 ಲಕ್ಷ.ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಕೇಶವ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!