ಡಿಜಿಪಿ ರವೀಂದ್ರನಾಥ್ ವರ್ಗಾವಣೆ ರದ್ದುಗೊಳಿಸಿ

110

Get real time updates directly on you device, subscribe now.

ತುಮಕೂರು: ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ ಅವರ ವರ್ಗಾವಣೆ ರದ್ದುಗೊಳಿಸಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ತುಮಕೂರು ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮತ್ತು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರ ನೇತೃತ್ವದಲ್ಲಿ ಯುವಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಡಿಎಸ್ಎಸ್ನ ಪಿ.ಎನ್.ರಾಮಯ್ಯ, ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರಕಾರವನ್ನು ವಂಚಿಸಿ ಉದ್ಯೋಗ ಮತ್ತು ಅಧಿಕಾರ ಪಡೆದವರ ವಿರುದ್ಧ ತನಿಖೆ ನಡೆಸಿದ್ದನ್ನೇ ಅಪರಾಧವೆಂಬಂತೆ ಭಾವಿಸಿದ ಸರಕಾರ ಡಿಸಿಆರ್ಬಿಯ ಡಿಜಿಪಿಯಾಗಿದ್ದ ಡಾ.ಪಿ.ರವೀಂದ್ರನಾಥ್ ಅವರನ್ನು ಬೇರೆಡೆಗೆ ವರ್ಗಾವಣೆಗೊಳಿಸಿ ಅಪಮಾನ ಮಾಡಿದೆ, ಅಲ್ಲದೆ ನಕಲಿ ಜಾತಿ ಪ್ರಮಾಣ ಪತ್ರದಿಂದ ವಿವಿಧ ಸವಲತ್ತು ಪಡೆದ ಸರಕಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕಿರುಕುಳವೂ ಹೆಚ್ಚಾಗಿದ್ದು, ಇದರಿಂದ ಬೇಸತ್ತ ಅವರು ತಮ್ಮ ಹುದ್ದೆಗೂ ರಾಜೀನಾಮೆ ನೀಡಿರುವುದು, ಅವರ ಮೇಲೆ ಇರುವ ಆಂತರಿಕ ಮತ್ತು ಬಾಹ್ಯ ಒತ್ತಡಕ್ಕೆ ಸಾಕ್ಷಿಯಾಗಿದೆ, ಸರಕಾರ ಅವರ ರಾಜೀನಾಮೆ ಅಂಗೀಕರಿಸಬಾರದು, ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿರುವ ಡಾ.ಪಿ.ರವೀಂದ್ರನಾಥ್ ಅವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಎಸ್ಸಿ, ಎಸ್ಟಿ ಸಮುದಾಯದ ಅವಕಾಶಗಳನ್ನು ಕಸಿಯುತ್ತಿದ್ದ ಭ್ರಷ್ಟರನ್ನು ಪತ್ತೆ ಹಚ್ಚಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ಮಾಡಿದ್ದರು, ಇವರು ಡಿಸಿಆರ್ಬಿ ಡಿಜಿಪಿ ಆದ ನಂತರ ಸುಮಾರು 89 ಜನ ನಕಲಿ ಎಸ್ಸಿ, ಎಸ್ಟಿ ಜಾತಿ ಪ್ರಮಾಣ ಪತ್ರದಿಂದ ಸರಕಾರ ಉದ್ಯೋಗ ಪಡೆದಿದ್ದವರನ್ನು ಪತ್ತೆ ಹೆಚ್ಚಿ ಅವರನ್ನು ಸರಕಾರಿ ಕೆಲಸದಿಂದ ವಜಾಗೊಳ್ಳುವಂತೆ ಮಾಡಿದ್ದರು, ಇನ್ನೂ ನೂರಾರು ಕೇಸುಗಳು ನ್ಯಾಯಾಲಯದಲ್ಲಿದ್ದು, ನಕಲಿ ಜಾತಿ ಪ್ರಮಾಣ ಪತ್ರ ಪಡೆದವರು ಸರಕಾರದ ಮೇಲೆ ಒತ್ತಡ ಹಾಕಿ ಇವರನ್ನು ವರ್ಗಾವಣೆಯಾಗುವಂತೆ ಮಾಡಿದ್ದಾರೆ, ಡಿಸಿಆರ್ಬಿಯಲ್ಲಿ ಸಾವಿರಾರು ಪ್ರಕರಣಗಳ ಬಾಕಿ ಇವೆ, ಇಂತಹ ವೇಳೆ ಇವರನ್ನು ಅಲ್ಲಿಂದ ವರ್ಗಾವಣೆಗೊಳಿಸಿರುವುದು ಸರಿಯಲ್ಲ, ಕೂಡಲೇ ವರ್ಗಾವಣೆ ರದ್ದುಗೊಳಿಸಿ, ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಬೇಕು, ಡಾ.ಪಿ.ರವೀಂದ್ರನಾಥ್ ನೀಡಿರುವ ರಾಜೀನಾಮೆ ಅಂಗೀಕರಿಸಬಾರದೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಸರಕಾರಕ್ಕೆ ಡಾ.ಪಿ.ರವೀಂದ್ರನಾಥ್ ನೀಡಿರುವ ಅಂಗೀಕರಿಸದಂತೆ ಸರಕಾರದಲ್ಲಿರುವ ಎಸ್ಸಿ, ಎಸ್ಟಿ ಶಾಸಕರು, ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳು, ನೌಕರರು ಸರಕಾರದ ಮೇಲೆ ಒತ್ತಡ ತರಬೇಕು, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರೆಸುವಂತೆ ಧ್ವನಿ ಎತ್ತಬೇಕೆಂದು ಎನ್.ಕೆ.ನಿಧಿಕುಮಾರ್ ಆಗ್ರಹಿಸಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ, ಹತ್ತಾರು ವರ್ಷಗಳಿಂದ ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸರಕಾರದ ಜೊತೆಗೆ, ಸಾವಿರಾರು ವರ್ಷಗಳ ಶೋಷಣೆಯಿಂದ ಹೊರಬಂದು ವಿದ್ಯೆ ಕಲಿತು, ಉದ್ಯೋಗದ ಕನಸಿನಲ್ಲಿರುವ ಪರಿಜಾತಿ ಮತ್ತು ವರ್ಗಗಳ ಯುವಕರನ್ನು ವಂಚಿಸಿರುವ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ, ಅವರು ಸರಕಾರದಿಂದ ವಜಾಗೊಳ್ಳುವಂತೆ ಮಾಡಿದ ಅಧಿಕಾರಿಯನ್ನು ಸರಕಾರ ವರ್ಗಾವಣೆ ಹೆಸರಿನಲ್ಲಿ ನಡೆಸಿಕೊಂಡಿರುವ ರೀತಿ ಸರಿಯಲ್ಲ, ಕೂಡಲೇ ಅವರನ್ನು ಡಿಸಿಆರ್ಬಿ ಡಿಜಿಪಿ ಹುದ್ದೆಯಲ್ಲಿಯೇ ಮುಂದುವರೆಸುವುದರ ಜೊತೆಗೆ ಸರಕಾರದ ನಡೆಯಿಂದ ಮಾನಸಿಕವಾಗಿ ಬೇಸತ್ತು ಡಾ.ಪಿ.ರವೀಂದ್ರನಾಥ್ ಅವರು ನೀಡಿರುವ ರಾಜೀನಾಮೆ ಅಂಗೀಕರಿಸಬಾರದೆಂದರು.
ಈ ವೇಳೆ ಡಿಎಸ್ಎಸ್ ತಾಲೂಕು ಯುವ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ್, ನಗರ ಅಧ್ಯಕ್ಷ ಮಾರುತಿ.ಸಿ, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ನಗರ ಅಧ್ಯಕ್ಷ ಮನು.ಟಿ, ನಗರ ಉಪಾಧ್ಯಕ್ಷ ನಿತೀಶ್.ಎಂ.ಆರ್, ಗೂಳೂರು ಹೋಬಳಿ ಅಧ್ಯಕ್ಷ ಶ್ರೀನಿವಾಸ್.ಎನ್.ವಿ, ಗ್ರಾಮಾಂತರ ಅಧ್ಯಕ್ಷ ಸಿದ್ದಲಿಂಗಯ್ಯ.ಕೆ.ಎನ್, ಮುಖಂಡರಾದ ಕುಶಾಲ್, ವಿನಯ್, ಬಾಲ್ರಾಜ್.ಎಸ್. ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!