ತುಮಕೂರು: ಪತ್ರಕರ್ತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಬಾಳನಕಟ್ಟೆಯ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದಲ್ಲಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಚಾಲನೆ ನೀಡಿ, ಪತ್ರಕರ್ತರ ನಾಮಲಕ ಅನಾವರಣಗೊಳಿಸಿ ಮಾತನಾಡಿ, ರಾಜ್ಯದ ಗ್ರಾಮೀಣ ಪ್ರದೇಶದ ಪತ್ರಕರ್ತರ ಸಮಸ್ಯೆ ಬಗೆ ಹರಿಸುವುದರ ಜೊತೆಗೆ ನಗರ ಪ್ರದೇಶದ ಪತ್ರಕರ್ತರ ಸಮಸ್ಯೆಗಳನ್ನೂ ಬಗೆ ಹರಿಸಲು ಮುಂದಾಗಿರುವುದಾಗಿ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತುಮಕೂರು ಜಿಲ್ಲಾ ಪತ್ರಿಕಾ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ನೀಡಿದ್ದರ ಹಿನ್ನಲೆಯಲ್ಲಿ ಪತ್ರಿಕಾ ಭವನ ನಿರ್ಮಾಣವಾಗಿತ್ತು, ತಂತ್ರಜ್ಞಾನ ಬೆಳೆದಂತೆಲ್ಲಾ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪತ್ರಕರ್ತರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಪತ್ರಿಕಾ ಭವನ ಇನ್ನೂ ಉತ್ತಮ ರೀತಿಯಲ್ಲಿ ನಿರ್ಮಾಣವಾಗಬೇಕೆಂಬ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದ ಮನವಿ ಮೇರೆಗೆ ಇದರ ನವೀಕರಣಕ್ಕೆ 18 ಲಕ್ಷ ರೂ. ಅನುದಾನ ನೀಡಿರುವುದಾಗಿ ತಿಳಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಅವರ ಹಿತ ಕಾಯಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪತ್ರಿಕಾ ಏಜೆಂಟರೆ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಪತ್ರಿಕೆಗಳನ್ನು ವಿತರಿಸಿ ಜೀವನ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ. ಅನೇಕ ಪತ್ರಕರ್ತರು ಇದನ್ನೇ ನಂಬಿಕೊಂಡು ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ನಗರ ಹಾಗೂ ಗ್ರಾಮೀಣ ಪತ್ರಕರ್ತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಪತ್ರಕರ್ತರಿಗೆ ಕಾರ್ಮಿಕ ಕಾಯ್ದೆ ಅಡಿಯಲ್ಲಿ ಸಿಗುವ ಸೌಲಭ್ಯ ದೊರಕಿಸಿಕೊಡಬೇಕು ಹಾಗೂ ಆರೋಗ್ಯ ವಿಮೆ, ಉಚಿತ ಹೆಲ್ತ್ ಕಾರ್ಡ್, ಉಚಿತ ಬಸ್ ಪಾಸ್ ಸೌಲಭ್ಯ, ತಾಲ್ಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣ, ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರಿಗೆ ವಿಶೇಷ ತರಬೇತಿಗೆ ಆದ್ಯತೆ ನೀಡುವುದು, ಪತ್ರಕರ್ತರಿಗೆ ಉಚಿತ ನಿವೇಶನ ನೀಡುವುದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಜಾಹೀರಾತು ನೀತಿ ಸರಳೀಕರಣಗೊಳಿಸುವುದು ಹಾಗೂ ಪತ್ರಕರ್ತರ ವಾಹನಗಳಿಗೆ ಉಚಿತ ಟೋಲ್ ಫ್ರೀ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ 25 ವರ್ಷ ಪೂರೈಸಿರುವ ಹಿರಿಯ ಪತ್ರಿಕಾ ಸಂಪಾದಕರಾದ ಜೀಲ್ ಪತ್ರಿಕೆ ಸಂಪಾದಕ ರುದ್ರಯ್ಯ, ಅಮೃತವಾಣಿ ಪತ್ರಿಕೆ ಸಂಪಾದಕ ಗಂಗಹನುಮಯ್ಯ, ಕಮಲಾ ಗಂಗಹನುಮಯ್ಯ, ಸೊಗಡು ಪತ್ರಿಕೆಯ ಎಸ್.ಶಿವಣ್ಣ, ಪ್ರಜಾಪ್ರಗತಿ ಪತ್ರಿಕೆಯ ಪರವಾಗಿ ಮಧುಕರ್, ಏಕೇಶ್ ಪತ್ರಿಕೆಯ ಪರವಾಗಿ ಟಿ.ಇ.ರಘುರಾಂ ಹಾಗೂ ಪುರುಷೋತ್ತಮ್ ಮೊದಲಿಯಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವರು ಹಾಗೂ ಸೊಗಡು ಪತ್ರಿಕೆ ಸಂಪಾದಕ ಎಸ್.ಶಿವಣ್ಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ, ಮುಂದೆಯೂ ಇದೇ ರೀತಿ ಉತ್ತಮವಾಗಿ ಕೆಲಸ ನಿರ್ವಹಿಸಲಿ ಎಂದು ಶುಭಾ ಹಾರೈಸಿದರು.
ಅಮೃತವಾಣಿ ಪತ್ರಿಕೆ ಸಂಪಾದಕರು ಹಾಗೂ ಮಾಜಿ ಶಾಸಕರಾದ ಗಂಗಹನುಮಯ್ಯ ಮಾತನಾಡಿ, ನಮ್ಮ ಕಾಲದಲ್ಲಿ ಮೊಳೆ ಜೋಡಿಸಿ ಪತ್ರಿಕೆ ಪ್ರಿಂಟ್ ಮಾಡಲಾಗುತ್ತಿತ್ತು, ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನವೂ ಬದಲಾಗಿ ಅತ್ಯಂತ ವೇಗವಾಗಿ ಓದುಗರಿಗೆ ಪತ್ರಿಕೆ ತಲುಪುತ್ತಿರುವುದು ಅತ್ಯಂತ ಸಂತೋಷದಾಯಕ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಅರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶ್ಗೌಡ, ಚಿದಾನಂದ ಎಂ.ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಮಲ ಗಂಗನಹುಮಯ್ಯ, ತಿಪಟೂರು ಕೃಷ್ಣ, ಎಲ್.ಚಿಕ್ಕೀರಪ್ಪ, ಶ್ಯಾ.ನ.ಪ್ರಸನ್ನಮೂರ್ತಿ, ಹಾರೋಗೆರೆ ಸತೀಶ್, ದಶರಥ, ಸಿದ್ಧಲಿಂಗಸ್ವಾಮಿ, ದೇವಪ್ರಕಾಶ್, ಪರಮೇಶ್, ಟಿ.ಎಸ್.ಕೃಷ್ಣಮೂರ್ತಿ, ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಎಸ್.ಡಿ.ಚಿಕ್ಕಣ್ಣ, ಮಂಜುನಾಥ್ ನಾಯ್ಕ್ ತಾಳಮಕ್ಕಿ, ಗುಬ್ಬಿ ಪ್ರಸನ್ನ, ನಂದೀಶ್ ಬಿ.ಎಲ್., ಮಂಜುನಾಥ್ ಹಾಲ್ಕುರಿಕೆ, ಯಶಸ್, ಜಯಣ್ಣ, ಬೈರೇಶ್, ಹೆಚ್.ಕೆ.ನಾಗೇಂದ್ರಪ್ಪ, ಶಂಕರಪ್ಪ ಹೆಚ್.ಎನ್., ನಾಗರಾಜು ಎನ್, ಇತರರು ಇದ್ದರು.
ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ಧ: ಸಿಎಂ
Get real time updates directly on you device, subscribe now.
Comments are closed.