ತುಮಕೂರು: ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಆಲದಮರ ಪಾರ್ಕ್ ನಿರ್ವಹಣೆ ಜವಾಬ್ದಾರಿಯನ್ನು ಪ್ರೆಸ್ ಕ್ಲಬ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸ್ತಾಂತರಿಸಿದರು.
ನಗರದ ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ ಆಲದಮರದ ಪಾರ್ಕ್ ನಲ್ಲಿ ಆಲದ ಸಸಿ ನೆಟ್ಟು ನೀರೆರೆಯುವ ಮೂಲಕ ಪ್ರೆಸ್ ಕ್ಲಬ್ ಕಾರ್ಯ ಚಟುವಟಿಕೆಗೆ ವಿದ್ಯುಕ್ತ ಚಾಲನೆ ನೀಡಿದರು.
ಆಲದಮರದ ಪಾರ್ಕ್ ನಲ್ಲಿ ಸಿದ್ಧಗೊಳಿಸಿದ್ದ ವೇದಿಕೆಯಲ್ಲಿ ಪ್ರೆಸ್ ಕ್ಲಬ್ ನ ಉಪಾಧ್ಯಕ್ಷರಾದ ಶ್ರೀನಿವಾಸರೆಡ್ಡಿ, ಕರುಣಾಕರ್, ಮಾರುತಿ ಗಂಗಹನುಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಯೋಗೀಶ್ ಅವರಿಗೆ ಆಲದ ಮರದ ಪಾರ್ಕ್ ನಿರ್ವಹಣೆ ಹೊಣೆಯ ದಾಖಲಾತಿಯನ್ನು ಮುಖ್ಯಮಂತ್ರಿಗಳು ಹಸ್ತಾಂತರಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಮಾರ್ಟ್ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಆಲದ ಮರದ ಪಾರ್ಕ್ ನ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೆಸ್ ಕ್ಲಬ್ ಗೆ ವಹಿಸುತ್ತಿರುವುದು ಉತ್ತಮ ಕಾರ್ಯವಾಗಿದೆ, ಇದರಿಂದ ಪ್ರೆಸ್ ಕ್ಲಪ್ ನವರಿಗೆ ಸಾಮಾಜಿಕ ಹೊಣೆಗಾರಿಕೆ, ಪರಿಸರ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಸಾಮಾಜಿಕ ಹೊಣೆಗಾರಿಕೆ ಎಂಬುದು ಬಹಳ ಮುಖ್ಯ, ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳು ಸಹ ಪ್ರಯತ್ನಗಳನ್ನು ನಡೆಸಲಿ ಎಂದು ಹೇಳಿದರು.
ಸರ್ಕಾರದ ಆಯವ್ಯಯದಲ್ಲಿ ಪ್ರಥಮ ಬಾರಿಗೆ ಎಕೋ ಬಜೆಟ್ ಮಾಡಿದ್ದೇವೆ, ಈ ಮೂಲಕ ಪರಿಸರ ಸಂರಕ್ಷಣೆ, ಅರಣ್ಯ, ಸಸ್ಯೋದ್ಯಾನ ವನಗಳನ್ನು ಬೆಳೆಸುವುದಕ್ಕೂ ಒತ್ತು ನೀಡಲಾಗುತ್ತಿದೆ, ಪ್ರತಿ ವರ್ಷವೂ ಗಾಳಿ, ನೀರು, ಭೂಮಿ, ಗಿಡ, ಅರಣ್ಯ ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ಹೋದಾಗ ಮಾತ್ರ ಕರ್ನಾಟಕ ಒಳ್ಳೆಯ ಪರಿಸರ ಯುಕ್ತ ನಾಡಾಗಲಿದೆ ಎಂದು ತಿಳಿಸಿದರು.
ಮನುಕುಲಕ್ಕೆ ನಿಸರ್ಗ ದೊಡ್ಡ ಕೊಡುಗೆ ನೀಡುತ್ತಿದೆ, ನಾವು ಸಹ ಪರಿಸರ ಸಂರಕ್ಷಣೆ ಮಾಡುವ ಕೆಲಸವನ್ನು ಚಾಚೂತಪ್ಪದೇ ನಿರ್ವಹಿಸಬೇಕಾಗಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್, ಆರಗ ಜ್ಞಾನೇಂದ್ರ, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ವೈಎ.ನಾರಾಯಣಸ್ವಾಮಿ, ಚಿದಾನಂದಗೌಡ ಹಾಗೂ ಪ್ರೆಸ್ ಕ್ಲಬ್ ನ ಪದಾಧಿಕಾರಿಗಳಾದ ವಿಜಯ್, ರಂಗನಾಥ್, ಮಹೇಶ್, ಈಶ್ವರ್, ಮಧು, ರಾಜ್ ಟಿವಿ ಮಹೇಶ್, ಚಂದನ್, ಸಂಗಮೇಶ್, ದಾದಾಪೀರ್, ರಮೇಶ್, ವಿನಯ್, ವೆಂಕಟೇಶ್ ಇತರರು ಹಾಜರಿದ್ದರು.
ಆಲದಮರ ಪಾರ್ಕ್ ಜವಾಬ್ದಾರಿ ಪ್ರೆಸ್ ಕ್ಲಬ್ ಗೆ ಹಸ್ತಾಂತರಿಸಿದ ಸಿಎಂ
Get real time updates directly on you device, subscribe now.
Prev Post
Next Post
Comments are closed.