ತುಮಕೂರು: ಎರಡು ವರ್ಷದ ನಂತರ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ, ಕೋವಿಡ್ನಿಂದಾಗಿ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳು ನಿರಂತರವಾಗಿ ನಡೆಯದ ಕಾರಣ ಪಠ್ಯ ಕ್ರಮ ಹಿಂದುಳಿದಿದ್ದು, ಇದನ್ನು ಸರಿದೂಗಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕಲಿಕಾ ಅಂತರವನ್ನು ಸರಿದೂಗಿಸಲೆಂದೇ 2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಏರ್ಪಡಿಸಲಾಗಿದ್ದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ ವಿತರಣೆ ಹಾಗೂ ಕಲಿಕಾ ಚೇತರಿಕೆ ವರ್ಷದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶಾಲಾ ಪ್ರಾರಂಭೋತ್ಸವ ಒಂದು ಮಹತ್ವದ ಕಾರ್ಯಕ್ರಮ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಕರುನಾಡ ಮಕ್ಕಳಿಗೆ ಗುಣಮಟ್ಟದ ಮೂಲಭೂತ ಶಿಕ್ಷಣ ಅತ್ಯವಶ್ಯಕ. ಮಕ್ಕಳಿಗೆ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನದ ಕೊರತೆ ಉಂಟಾಗಬಾರದು, ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ ಪಡೆದಂತಹ ಮಕ್ಕಳು ಭವಿಷ್ಯದಲ್ಲಿ ಯಾವುದೇ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಬಲ್ಲರು, ವಿಶೇಷ ಪಠ್ಯ ಕ್ರಮದ ಮೂಲಕ 2 ವರ್ಷದಿಂದ ಕಲಿಯದ್ದನ್ನು ಕಲಿಸಿ, ಭದ್ರ ಶೈಕ್ಷಣಿಕ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ವಿಶೇಷತೆಯಾಗಿರುತ್ತದೆ ಎಂದರು.
ರಾಜ್ಯದಲ್ಲಿ ಈ ವರ್ಷ ಅತಿ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು ಎಂದ ಅವರು, 15ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಜ್ಞಾನ ನೀಡುವ ಕಾಯಕ ಮಧ್ಯೆದಲ್ಲಿ ನಿಲ್ಲಬಾರದು, ಒಂದು ದೇಶ ಮುಂದೆ ಬರಬೇಕಾದರೆ, ಪ್ರಗತಿಯ ಹಾದಿಯಲ್ಲಿ ಸಾಗಬೇಕಾದರೆ ಆ ದೇಶದ ಸುಶಿಕ್ಷಿತ ಜನತೆ ಎಷ್ಟು ಕೌಶಲ್ಯಾಧಾರಿತ ಜ್ಞಾನ ಹೊಂದಿದ್ದಾರೆ, ತಂತ್ರಜ್ಞಾನಾಧಾರಿತ ಶಿಕ್ಷಣ ಪಡೆದಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ ಅಪಾರ ಭೂಮಿಯುಳ್ಳವನೇ, ವ್ಯಾಪಾರ ಬಂಡವಾಳ ಹೂಡುವವನೇ ಶಕ್ತಿಶಾಲಿ ಎಂಬ ಪ್ರತೀತಿ ಇತ್ತು, ಆದರೆ ಇಂದು 21ನೇ ಶತಮಾನದಲ್ಲಿ ಯಾರ ಹತ್ತಿರ ಜ್ಞಾನವಿದೆಯೋ ಅವರು ಜಗತ್ತನ್ನೇ ಆಳುತ್ತಾರೆ ಎಂದ ಮುಖ್ಯಮಂತ್ರಿಗಳು, ವಿದೇಶಿ ಮಕ್ಕಳಿಗಿಂತ ನಮ್ಮ ಹಳ್ಳಿಯ ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಿದೆ, ನಮ್ಮ ಹಳ್ಳಿಯ ಮಕ್ಕಳು 2ನೇ ತರಗತಿಯಿಂದಲೇ ಗುಣಾಕಾರ, ಭಾಗಾಕಾರ ಮಾಡಲು ಪ್ರಾರಂಭಿಸುತ್ತಾರೆ, ವಿದೇಶದಲ್ಲಿ ಈ ಪ್ರಕ್ರಿಯೆ 6ನೇ ತರಗತಿಯಿಂದ ಆರಂಭವಾಗುತ್ತದೆ, ನಮ್ಮ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸೂಕ್ತ ವೇದಿಕೆಯನ್ನು ನಾವುಗಳು ಕಲ್ಪಿಸಿಕೊಡಬೇಕಿದೆ, ನಮ್ಮ ಮಕ್ಕಳಲ್ಲಿ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ ಎಂದರು.
ನಮ್ಮಲ್ಲಿ ಶಿಶು ವಿಹಾರದಿಂದ ಶಿಕ್ಷಣ ನೀತಿ ಪ್ರಾರಂಭವಾಗುತ್ತದೆ. ಈ ಹಂತದಿಂದ ಮಕ್ಕಳ ಮನೋಜ್ಞಾನ ವಿಕಸನ ಮಾಡಲು ಪಠ್ಯಕ್ರಮ ಅಳವಡಿಸಿಕೊಳ್ಳಲಾಗುತ್ತದೆ, ಪ್ರಶ್ನೆ ಕೇಳುವ ಮಕ್ಕಳ ಕುತೂಹಲವನ್ನು ನಾವು ತಣಿಸಬೇಕಿದೆ, ಮಕ್ಕಳು ವಿಷಯಭರಿತವಾಗಿ ಎಲ್ಲಿ, ಏಕೆ, ಎಷ್ಟು, ಏನು ಎಂದು ಯೋಚಿಸಿದಾಗ ಮಾತ್ರ ಅವರಲ್ಲಿ ತಾಂತ್ರಿಕ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದರು.
ಜೀವನದಲ್ಲಿ ಒಮ್ಮೆ ವಿದ್ಯಾಭ್ಯಾಸ ಮುಗಿದರೆ ಕಲಿಕೆ ಮುಗಿಯಿತು ಎನ್ನುವ ಭಾವನೆ ಬೇಡ, ಕಲಿಕೆ ನಿರಂತರ, ಜೀವನ ಪೂರ್ತಿ ನಾವು ವಿದ್ಯಾರ್ಥಿಯಾಗಿ ಜ್ಞಾನದ ದಾಹ ಬೆಳೆಸಿಕೊಳ್ಳಬೇಕು, ನಮ್ಮೊಳಗಿನ ಜ್ಞಾನದ ಬಾಗಿಲು ತೆರೆದಾಗ ಮಾತ್ರ ಜ್ಞಾನದ ದಾಹ ತೀರುತ್ತದೆ, ಮಕ್ಕಳು ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ದೊಡ್ಡ ಗುರಿ ಇಟ್ಟುಕೊಳ್ಳಬೇಕೆಂದು ಮುಖ್ಯಮಂತ್ರಿ ಕರೆ ನೀಡಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮೀಕ್ಷೆಯ ಪ್ರಕಾರ ಕೋವಿಡ್- 19 ನಿಂದ ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೊಡೆತ ಬಿದ್ದಿರುತ್ತದೆ, ಈ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆಗೆ ಸರ್ವ ರೀತಿಯ ನೆರವು ನೀಡಲು ಮುಖ್ಯ ಮಂತ್ರಿಗಳು ಸಮ್ಮತಿಸಿರುತ್ತಾರೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು ಎಲ್ಲಾ ಅಧಿಕಾರಿಗಳು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅತೀವ ಶ್ರಮ ವಹಿಸಿದ್ದಾರೆ, ಈ ವರ್ಷ ರಜಾ ಅವಧಿ ಕಡಿಮೆಯಾಗಬೇಕು ಮತ್ತು ಕಲಿಕಾ ಚೇತರಿಕೆ ಹೆಚ್ಚಿಸಬೇಕು ಎಂಬ ಇಲಾಖೆಯ ಆಶಯಕ್ಕೆ ಎಲ್ಲಾ ಶಿಕ್ಷಕರು ಕೈ ಜೋಡಿಸಿರುವುದು ಸಂತಸದ ವಿಷಯವಾಗಿದ್ದು, ಕಲಿಕಾ ಚೇತರಿಕೆ ಕೇವಲ 15 ದಿನಗಳ ಕಾರ್ಯಕ್ರಮವಲ್ಲ, ಇದು ಇಡೀ ವರ್ಷದ ಕಾರ್ಯಕ್ರಮ, ಹತ್ತನೇ ತರಗತಿಯ ಮಕ್ಕಳಿಗೆ ಮತ್ತಷ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಪ್ರಾರಂಭೋತ್ಸವದ ಮಾರ್ಗದರ್ಶಿ ಬಿಡುಗಡೆ ಮಾಡಲಾಯಿತು, ಕಲಿಕಾ ಚೇತರಿಕೆ ಕೈಪಿಡಿ ಅನಾವರಣಗೊಳಿಸಲಾಯಿತು ಮತ್ತು ಸಾಂಕೇತಿಕವಾಗಿ 6-10ನೇ ತರಗತಿಯವರೆಗಿನ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಸಂಸದ ಜಿ.ಎಸ್. ಬಸವರಾಜು, ಸರ್ಕಾರಿ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ, ಚಿದಾನಂದ ಎಂ ಗೌಡ, ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಮಹಾಪೌರರಾದ ಬಿ.ಜಿ. ಕೃಷ್ಣಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಆರ್, ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಪಲ್ಲವಿ ಅಕುರಾತಿ, ಜಿಲ್ಲಾಧಿಕಾರಿ ಡಾ.ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್, ಸಾ.ಶಿ.ಇ. ಉಪ ನಿರ್ದೇಶಕ ಸಿ.ನಂಜಯ್ಯ ಮತ್ತು ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಮಕ್ಕಳಿಗೆ ಗುಣಮಟ್ಟದ ಮೂಲಭೂತ ಶಿಕ್ಷಣ ನೀಡಿ
ಎರಡು ವರ್ಷದ ನಂತರ ಶಾಲೆಗಳ ಆರಂಭ ಸಂತಸ ತಂದಿದೆ: ಸಿಎಂ ಬಸವರಾಜ ಬೊಮ್ಮಾಯಿ
Get real time updates directly on you device, subscribe now.
Prev Post
Next Post
Comments are closed.