ಕುಣಿಗಲ್: ಗ್ರಾಮ ಪಂಚಾಯಿತಿಯ ಅಸಮರ್ಪಕ ಕಾರ್ಯನಿರ್ವಹಣೆ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯರೆ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆದಿದೆ.
ತಾಲೂಕಿನ ಬಾಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಕಾರ್ಯಗಳಾಗುತ್ತಿಲ್ಲ, ಅಧಿಕಾರಿಗಳು ಹಾಜರಿಲ್ಲ ಎಂದು ಆರೋಪಿಸಿದ ಗ್ರಾಪಂ ಸದಸ್ಯರಾದ ಸುರೇಶ್, ನವೀನ್ಕುಮಾರ್, ಪಿಡಿಒ ಸೇರಿದಂತೆ ಅಧಿಕಾರಿಗಳು ಬರುವಂತೆ ಆಗ್ರಹಿಸಿದರು. ಯಾವುದೇ ಅಧಿಕಾರಿಗಳು ಸಕಾಲಕ್ಕೆ ಬಾರದ ಕಾರಣ ಬೇಸತ್ತ ಸದಸ್ಯರು ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ತಾಪಂ ಕಾರ್ಯ ನಿರ್ವಹಣಾಧಿಕಾರಿ, ನರೇಗಾ ಸಹಾಯಕ ನಿರ್ದೇಶಕ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸದಸ್ಯ ನವೀನ್ ಕುಮಾರ್ ಮಾತನಾಡಿ, ನರೇಗಾ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಸದಸ್ಯರ ನಡುವೆಯೆ ತಾರತಮ್ಯ ಮಾಡುತ್ತಾರೆ, 12 ಮಂದಿ ಸದಸ್ಯರ ಪೈಕಿ ಕೆಲವೆ ಮಂದಿ ಸದಸ್ಯರಿಗೆ ಮಾತ್ರ ಯಾವುದೇ ದಾಖಲೆ ಇಲ್ಲದೆ ಇದ್ದರೂ ನರೇಗಾ ಕೆಲಸ ಹಾಕಿ ಕೊಡುತ್ತಾರೆ. ವೆಂಡರ್ ಹಣ ನೀಡಲು ಶೇ. 60 ರಿಂದ 70 ಕಮಿಷನ್ ಪಡೆಯುತ್ತಾರೆ. ನೀಡಲು ನಿರಾಕರಿಸಿದರೆ ಕೆಲಸ ನೀಡುವುದಿಲ್ಲ, ಕಳೆದ ಡಿಸೆಂಬರ್ನಿಂದಲೂ ಮಾಸಿಕ ಸಭೆ ಕರೆದಿಲ್ಲ, ಗ್ರಾಮ ಸಭೆ ಕರೆದಿಲ್ಲ, ಸಭೆ ಕರೆಯುವಂತೆ ಅಧ್ಯಕ್ಷರಿಗೆ ಹೇಳಿದರೆ ಸಭೆ ಕರೆಯುತ್ತಿಲ್ಲ, ಫಲಾನುಭವಿ ಆಯ್ಕೆಗೆ ಗ್ರಾಮಸಭೆ ನಡೆಸಿಲ್ಲ, ಹಾಲಿ ಇರುವ ಪಿಡಿಒ ಬದಲಾಯಿಸಿ ಬೇರೆ ಪಿಡಿಒ ಬಂದಿದ್ದರೂ ಅವರಿಗೆ ಅಧಿಕಾರ ನೀಡುತ್ತಿಲ್ಲ, ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸಮಸ್ಯೆ ಪರಿಶೀಲನೆ ಮುಂದಾಗುತ್ತಿಲ್ಲ, ಗ್ರಾಮ ಪಂಚಾಯಿತಿ ಆಸ್ತಿಯನ್ನು ಕೆಲ ಪ್ರಭಾವಿಗಳು ಅತಿಕ್ರಮಿಸಿದ್ದರೂ ಅದರ ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ, ಪಂಚಾಯಿತಿಯಿಂದ ಯಾವುದೇ ಸೇವೆಗಳು ಸಮರ್ಪಕವಾಗಿ ದೊರಕುತ್ತಿಲ್ಲ ಎಂದು ಆರೋಪಿಸಿದರು.
ಸದಸ್ಯ ಸುರೇಶ್ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಿಗೆ ತಾರತಮ್ಯ ಧೋರಣೆ ಮಾಡಲಾಗುತ್ತಿದೆ, ನರೇಗಾ ಕೆಲಸ ಮಾಡಲು ನಮಗೆ ಒಂದು ನಿಯಮ, ಆಯ್ದ ಕೆಲ ಸದಸ್ಯರಿಗೆ ಒಂದು ನಿಯಮ, ಈ ರೀತಿ ಆದರೆ ನರೇಗ ಯೋಜನೆಯ ಅನುಷ್ಠಾನ ಹೇಗೆ ಆಗುತ್ತದೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು. ಮಧ್ಯಾಹ್ನವಾದರೂ ಯಾವುದೇ ಅಧಿಕಾರಿಗಳು ಆಗಮಿಸದ ಕಾರಣ ಪ್ರತಿಭಟನೆ ಮುಂದುವರೆಸಿದರು.
ಗ್ರಾಪಂ ಕಾರ್ಯ ವೈಖರಿಗೆ ಸದಸ್ಯರ ಖಂಡನೆ
Get real time updates directly on you device, subscribe now.
Comments are closed.