ಗುರಿ ಮುಟ್ಟಲು ನಿರಂತರ ಪರಿಶ್ರಮ ಅತ್ಯಗತ್ಯ

ಬಡವರೆಂಬ ಕೀಳರಿಮೆ ಬಿಟ್ಟು ಚೆನ್ನಾಗಿ ಓದಿ: ನ್ಯಾ.ರಾಘವೇಂದ್ರ ಶೆಟ್ಟಿಗಾರ್

193

Get real time updates directly on you device, subscribe now.

ತುಮಕೂರು: ಶಿಕ್ಷಣದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಇವುಗಳಲ್ಲಿ ಯಾವುದು ಕೀಳಲ್ಲ, ನಿರಂತರ ಪರಿಶ್ರಮದಿಂದ ನಿಗದಿತ ಗುರಿ ತಲುಪಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.

ನಗರದ ಬಾಲಭವನದಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲಾ ವಿಭಾಗದಲ್ಲಿ ಓದುವವರು ದಡ್ಡರು, ಬಡವರು ಎಂಬ ಕೀಳಿರಿಮೆ ಬೇಡ, ಆರ್ಟ್ಸ್ ವಿಷಯ ಓದಿಯೇ ಇಂದು ನ್ಯಾಯಾಧೀಶನಾಗಿದ್ದೇನೆ, ಹಾಗಾಗಿ ಯಾವುದು ಕೀಳಲ್ಲ, ಮೇಲಲ್ಲ, ಗುರಿ ತಲುಪಲು ನಾವು ಅಡ್ಡದಾರಿ ಹಿಡಿಯದೆ ಸರಿಯಾದ ದಾರಿಯಲ್ಲಿ ಮುನ್ನೆಡೆದರೆ ಮಾತ್ರ ಸಾಧನೆಯ ಶಿಖರ ಹೇರಲು ಸಾಧ್ಯ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಸರಕಾರದ ಜೊತೆಗೆ, ಶ್ರೀರಾಮ್ ಫೈನಾನ್ಸ್ ನಂತಹ ಹಲವಾರು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಉತ್ತೇಜನ ನೀಡಲು ಕೈಜೋಡಿವೆ, ನಾವುಗಳು ಸಿಕ್ಕ ಅವಕಾಶ ಬಳಸಿಕೊಂಡು ಮುನ್ನೆಡೆಯಬೇಕು, ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ರಾಘವೇಂದ್ರ ಶೆಟ್ಟಿಗಾರ್ ಸಲಹೆ ನೀಡಿದರು.
ಚಾಲನ ಹುದ್ದೆ ನಾನು ಹೆಚ್ಚು ಗೌರವ ಕೊಡುವಂತಹ ಕೆಲಸ, ನನ್ನಂತಹ ಹತ್ತಾರು ಜನರು ಅವರ ಮೇಲೆ ನಂಬಿಕೆ ಇಟ್ಟು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ವಾಹನ ಹತ್ತಿರುತ್ತೇವೆ, ಚಾಲಕ ತನ್ನ ಕರ್ತವ್ಯ ನಿರ್ವಹಿಸಿದರೆ ಸಾಕು, ಹಾಗೆಯೇ ಬೇರೆಯವರು ಸಹ ತಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ಮಾಡಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಹಾಗಾಗಿ ಯುವಜನರು ಹಕ್ಕುಗಳ ಜೊತೆಗೆ ಕರ್ತವ್ಯದ ಜವಾಬ್ದಾರಿ ಅರಿತು ದೇಶ ಮುನ್ನಡೆಸುವ ಗುಣ ಬೆಳೆಸಿಕೊಳ್ಳಬೇಕೆಂದರು.
ನಗರ ಠಾಣೆಯ ಪಿಎಸ್ಐ ನವೀನ್ ಹೆಚ್.ಎಸ್. ಮಾತನಾಡಿ, ವಿದ್ಯಾರ್ಥಿ ಜೀವನವೆಂಬುದು ಅಮೂಲ್ಯ, ಸಾಧನೆಗೆ ಅಡ್ಡದಾರಿ ಹಿಡಿಯುವ ಬದಲು ಯಾವುದರಲ್ಲಿಯೂ ಕೀಳಿರಿಮೆ ಬೆಳೆಸಿಕೊಳ್ಳದೆ ಮುನ್ನಡೆದರೆ ಒಂದಿಲ್ಲೊಂದು ಗೌರವಾನ್ವಿತ ಹುದ್ದೆಗಳನ್ನು ಪಡೆಯಬಹುದು, ನಾವು ಮಾಡುವ ತಪ್ಪುಗಳನ್ನು ಹಣೆಬರಹದ ಮೇಲೆ ಹಾಕದೆ ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳುವಂಹತ ಸ್ಥಿತಿಗೆ ತಲುಪುವಂತಾಗಬೇಕು, ಪ್ರತಿಷ್ಠಿತ ಶಾಲೆಯಲ್ಲಿ ಓದಿದರೆ ಮಾತ್ರ ಬುದ್ಧಿವಂತರು ಎಂಬುದು ತಪ್ಪು ಅಭಿಪ್ರಾಯ, ಶಿಕ್ಷಣಕ್ಕಾಗಿ ಸರಕಾರ ಹಲವಾರು ಸವಲತ್ತು ನೀಡಿದೆ, ಅದೇ ರೀತಿ ಶ್ರೀರಾಮ ಫೈನಾನ್ಸ್ ನಂತಹ ಹಲವಾರು ಸಂಸ್ಥೆಗಳು ಸಹ ಸಹಾಯ ಹಸ್ತ ಚಾಚಿವೆ, ಇವುಗಳ ಸದುಪಯೋಗ ಪಡಿಸಿಕೊಳ್ಳಿ, ವಿದ್ಯಾರ್ಥಿ ಜೀವನದಲ್ಲಿ ಎಂದಿಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬೇಡಿ, ಇದು ನಿಮ್ಮ ಜೀವನವನ್ನೇ ನಾಶಗೊಳಿಸುತ್ತದೆ, ಜೀವನ ಪರ್ಯಂತ ನಿಮ್ಮ ತಂದೆ ತಾಯಿಗಳಿಗೆ ಹೊರೆಯಾಗಿ ಬದುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಇಓ ಹನುಮಾನಾಯ್ಕ್ ಮಾತನಾಡಿ, ವಿದ್ಯಾಭ್ಯಾಸಕ್ಕೆ ಬಡತನ ಎಂದಿಗೂ ಅಡ್ಡಿಬರುವುದಿಲ್ಲ, ಸರಕಾರ ಹಲವು ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿದೆ, ಇವುಗಳನ್ನು ಬಳಸಿಕೊಂಡು ಉನ್ನತವಾದುದ್ದನ್ನು ಸಾಧಿಸಲು ಮುಂದಾಗಬೇಕು, ಹಕ್ಕು ಮತ್ತು ಕರ್ತವ್ಯ ಪಾಲಿಸೊಣ ಎಂದು ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ದೇವರಾಜು ಮಾತನಾಡಿ, ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಚಿಕ್ಕವಯಸ್ಸಿನ ಮಕ್ಕಳ ಕೈಗೆ ವಾಹನಗಳನ್ನು ನೀಡುತ್ತಾರೆ, ಇದು ಅಪರಾಧ ಒಂದು ವೇಳೆ ಅಪಘಾತವಾದರೆ ಪೋಷಕರ ವಿರುದ್ಧ ಕೇಸು ಮತ್ತು ದಂಡ ಹಾಕಲಾಗುತ್ತದೆ, ಶಾಲೆಗೆ ಹೋಗುವ ಮಕ್ಕಳು ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿ ಮನೆ ಬಿಡಿ, ಇದರಿಂದ ಅಪಘಾತ ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗೀಯ ಬಿಸಿನೆಸ್ ಹೆಡ್ ಶ್ರೀಧರ್ ಮಠಮ್, 1974 ಆರಂಭವಾದ ಶ್ರೀರಾಮ್ ಫೈನಾನ್ಸ್ ಕಂಪನಿ ಇಂದು 2.10 ಕೋಟಿ ಗ್ರಾಹಕರನ್ನು ಹೊಂದಿದೆ, ಲಾರಿ ಚಾಲಕರು, ಮಾಲೀಕರಾಗಬೇಕೆಂಬ ಉದ್ದೇಶ ಕಂಪನಿಯದ್ದು, ಟ್ರಕ್ ಚಾಲಕರು ಹತ್ತಾರು ದಿನಗಳ ಕಾಲ ಮನೆ ಬಿಟ್ಟು ಹೊರಗಡೆಯೇ ಇರುವುದರಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂಬ ಆಸೆಯಿಂದ 2013ರಲ್ಲಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಜಾರಿಗೆ ತರಲಾಯಿತು, ಪ್ರತಿವರ್ಷ ದೇಶದಲ್ಲಿ 25- 30 ಸಾವಿರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ, ಇದರ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸುವಂತೆ ಸಲಹೆ ನೀಡಿದರು.
ಶ್ರೀರಾಮ ಟ್ರಾನ್ಸ್ ಪೋರ್ಟ್ನ ರಾಜ್ಯ ಬಿಸಿನೆಸ್ ಹೆಡ್ ಹೆಚ್.ಚನ್ನೇಗೌಡ, ಡಿಫಾಸಿಟ್ ಹೆಡ್ ವಿಜಯ ಕುಮಾರ್, ರೀಜಿನಲ್ ಬಿಸಿನೆಸ್ ಹೆಡ್ ರಾಘವೇಂದ್ರ, ಸ್ಥಳೀಯ ಮ್ಯಾನೇಜರ್ ಪ್ರಸನ್ನಕುಮಾರ್, ಯಧುಕುಮಾರ್, ಹುಸೇನಪ್ಪ, ಶಿವಕುಮಾರ್, ದಯಾನಂದ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!