ಗ್ರಾಮ ಲೆಕ್ಕಾಧಿಕಾರಿ ಕಾರ್ಯ ವೈಖರಿಗೆ ಡಿಕೆ ಆಕ್ರೋಶ

171

Get real time updates directly on you device, subscribe now.

ಕುಣಿಗಲ್: ಗ್ರಾಮ ಲೆಕ್ಕಾಧಿಕಾರಿಯ ಅಸಮರ್ಪಕ ಕಾರ್ಯ ವೈಖರಿಗೆ ಬಿಜೆಪಿ ಮುಖಂಡ, ಪಿ.ಎಲ್.ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಅವರು ನಡೆಸಿದ ಜನಸಂಪರ್ಕ ಸಭೆಗೆ ಕಂದಾಯ ಇಲಾಖೆಯ ಸಮಸ್ಯೆಗೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ಬಂದವು, ಹುಲಿಯೂರುದುರ್ಗ ಮಾದಪ್ಪನಹಳ್ಳಿಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಗಿರಿಯಪ್ಪ ಎಂಬ ಅರ್ಜಿದಾರ ತಮ್ಮ ಜಮೀನಿಗೆ ಸಂಬಂಧಿಸಿದಂತೆ ಜಂಟಿ ಹಕ್ಕನ್ನು ನಿವೃತ್ತಿಗೊಳಿಸುವಂತೆ ಸಂಬಂಧಪಟ್ಟ ದಾಖಲೆ ಸಮೇತ ಅರ್ಜಿ ನೀಡಿ ವರ್ಷಗಳೆ ಕಳೆಯುತ್ತಾ ಬಂದಿದ್ದು, ಆ ಭಾಗದ ಗ್ರಾಮಲೆಕ್ಕಿಗ ನಿಯಮಾನುಸಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿ ಕೊನೆಗೆ ಅರ್ಜಿದಾರನ ಒತ್ತಾಯಕ್ಕೆ ವರದಿ ಸಿದ್ಧಪಡಿಸಿದ್ದು ಇದರಲ್ಲಿ ದಿನಾಂಕ ನಮೂದು ಮಾಡಿಲ್ಲ, ಇದರಿಂದ ಅರ್ಜಿದಾರರಿಗೆ ತೊಂದರೆಯಾಗಿ ಸರ್ಕಾರದ ಸವಲತ್ತು ಪಡೆಯಲಾಗಿಲ್ಲದ ಕಾರಣ ಡಿ.ಕೃಷ್ಣಕುಮಾರ್ ಗಮನಕ್ಕೆ ತಂದರು, ಸಂಬಂಧಿಸಿದ ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡು, ರೈತರಿಗೆ ಗ್ರಾಮ ಲೆಕ್ಕಿಗರು ವಿನಾಕಾರಣ ತೊಂದರೆ ನೀಡುತ್ತಾ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ, ಕೂಡಲೆ ಸಮಸ್ಯೆ ಬಗೆಹರಿಸಿ ಇಲ್ಲವಾದಲ್ಲಿ ಈ ನಿಟ್ಟಿನಲ್ಲಿ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಮನವಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಡೆಯೂರು ಹೋಬಳಿಯ ಕಂಠನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಆದಾಯ, ಜಾತಿ ಪ್ರಮಾಣ ಪತ್ರ ಬೇಕಾಗಿದ್ದು, ಅಧಿಕಾರಿಗಳು ಅರ್ಜಿದಾರನು ಅವಿದ್ಯಾವಂತನಾದ್ದರಿಂದ ಆತನ ತಂದೆ, ತಾಯಿಯ ವ್ಯಾಸಂಗ ಪ್ರಮಾಣ ಪತ್ರ ತರುವಂತೆ ಸೂಚಿಸಿದ್ದರು. ಈ ಬಗ್ಗೆ ಸಂಬಂ‘ಪಟ್ಟ ಉಪ ತಹಶೀಲ್ದಾರ್ ಅವರಿಗೆ ಮಾತನಾಡಿ ಗ್ರಾಮಾಂತರ ಪ್ರದೇಶದ ಜನತೆ ಓದಿಲ್ಲ ಅಂದರೆ ಅವರಿಗೆ ಸವಲತ್ತು ನೀಡುವುದಿಲ್ಲವೆ, ವಿನಾಕಾರಣ ಇಲ್ಲದ ಸಬೂಬು ಹೇಳುವುದನ್ನು ಬಿಟ್ಟು ಲಭ್ಯದಾಖಲೆ ಆಧಾರದ ಮೇಲೆ ದಾಖಲೆ ನೀಡುವಂತೆ ಹೇಳಿದರು.
ಹೇರೂರು ಗ್ರಾಮದ ಮಹಿಳೆ ಅನಿತಾ ಎಂಬಾಕೆ, ಚುನಾವಣೆಯಲ್ಲಿ ಅವರ ಬ್ಲಾಕ್ ನ ಸದಸ್ಯೆಗೆ ಮತ ಹಾಕಿಲ್ಲ ಎಂದು ವಸತಿ ಯೋಜನೆಗೆ ಅರ್ಹತೆ ಇದ್ದರೂ ಪರಿಗಣಿಸದೆ ತೊಂದರೆ ನೀಡುತ್ತಿದ್ದಾರೆಂದು ದೂರಿದ ಮೇರೆಗೆ ಈ ನಿಟ್ಟಿನಲ್ಲಿ ಆಕೆಗೆ ಸೂಕ್ತ ಸಹಾಯ ಮಾಡುವಂತೆ ತಾಪಂ ಇಒಗೆ ಸೂಚಿಸಿದರು. ಹಣ ಕಟ್ಟಿ ಎರಡು ವರ್ಷ ಕಳೆಯುತ್ತಾ ಬಂದಿದ್ದರೂ ಇನ್ನು ಟಿಸಿ, ವಿದ್ಯುತ್ ಲೈನ್ ಹಾಕಿಲ್ಲ ಎಂದು ಶೆಟ್ಟಿಕೆರೆ ಗ್ರಾಮದ ರಂಗಯ್ಯ ದೂರಿದ ಮೇರೆಗೆ ಬೆಸ್ಕಾಂ ಅಧಿಕಾರಿಗಳಿಗೆ ಕೂಡಲೆ ಅಗತ್ಯ ಕ್ರಮಕ್ಕೆ ಒತ್ತಾಯಿಸಿದರು. ಜನಸಂಪರ್ಕ ಸಭೆಯ ನಂತರ ಮಾತನಾಡಿ ಕಂದಾಯ, ಪೊಲೀಸ್, ಬೆಸ್ಕಾಂ ಗೆ ಸಂಬಂಧಿಸಿದಂತೆ ಜನರು ಸಮಸ್ಯೆ ಹೊತ್ತು ಅರ್ಜಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆ ತಲುಪಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯತೊರಿದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮರ್ಪಕ ಕೆಲಸ ಮಾಡಿಸಲು ಶ್ರಮಿಸಲಾಗುವುದು, ತಾಲೂಕಿನ ಶಾಸಕರು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ್, ಯುವ ಅಧ್ಯಕ್ಷ ಧನುಶ್, ಪ್ರಮುಖರಾದ ಲಕ್ಕಣ್ಣ, ಅಮರ್, ಸಂದೀಪ್, ಸುನಿಲ್, ಶ್ರೀನಿವಾಸ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!