ತುಮಕೂರು: ನಗರದಾದ್ಯಂತ ಮಂಗಳವಾರ ಇಡೀರಾತ್ರಿ ಹಾಗೂ ಬುಧವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಸಾಕಷ್ಟು ತೊಂದರೆ ಉಂಟಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ದೊಡ್ಡ ಆವಾಂತರ ಸೃಷ್ಟಿ ಆಗಿವೆ.
ತುಮಕೂರು ನಗರದ ಮುಖ್ಯರಸ್ತೆಯಲ್ಲಿ ಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ರಾಜ ಕಾಲುವೆಯಿಂದ ತುಂಬಿದ ನೀರು ರಸ್ತೆ ತುಂಬಾ ಹರಿದು ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ಪರದಾಡಿದರು. ಇನ್ನು ನಗರದ ಯಾವ ರಸ್ತೆಗೆ ಹೋದರೂ ನೀರು ತುಂಬಿ ರಸ್ತೆ ಕಾರಣದೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಕಳಂಕ ಎಂಬಂತೆ ರಾಜಕಾಲುವೆಗಳು ಒತ್ತುವರಿಯಾಗಿವೆ, ಮಳೆಯಿಂದ ಬರುವ ನೀರು ಸರಾಗವಾಗಿ ರಾಜಕಾಲುವೆಯಲ್ಲಿ ಹರಿಯದೆ ರಸ್ತೆ ತುಂಬಿ ಹರಿಯುತ್ತಿದ್ದು ಸ್ಮಾರ್ಟ್ಸಿಟಿಯ ಹಾಗೂ ಮಹಾನಗರ ಪಾಲಿಕೆಯ ಅವೈಜ್ಞಾನಿಕ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕಿದರು.
ತುಮಕೂರಿನ ಕುಣಿಗಲ್ ರಸ್ತೆಯ ಹೇಮಾವತಿ ಕಚೇರಿ ಮುಂಭಾಗದ ಇಸ್ರಾ ಕಲ್ಯಾಣ ಮಂಟಪದ ಪಕ್ಕದಲ್ಲಿ ಹಾದು ಹೋಗುವ ರಸ್ತೆ ಮಳೆ ನೀರಿನಿಂದ ತುಂಬಿ ಸಾರ್ವಜನಿಕರು ಓಡಾಡಲು ಹರಸಾಹಸ ಪಡುವಂತಾಯಿತು.
ಇನ್ನು ಕೋತಿ ತೋಪಿನ ಸರ್ವೋದಯ ಕಾಲೇಜು ಮುಂಭಾಗದ ಚರಂಡಿ ಮಳೆ ನೀರಿನಿಂದ ತುಂಬಿ ರಸ್ತೆಗೆ ಹರಿದು ವಾಹನ ಸವಾರರು ಪರದಾಡುವಂತಾಯಿತು, ವಿದ್ಯಾರ್ಥಿಗಳು ಮಳೆ ನೀರಿನಲ್ಲೇ ಸಾಗುವಂತಾಯಿತು. ಇನ್ನೇ ಇರುವ ಬೆಸ್ಕಾಂ ಕಚೇರಿ ಆವರಣ ಮಳೆ ನೀರಿನಿಂದ ತುಂಬಿ ಹೋಗಿತ್ತು.
ನಗರದ ಕುಣಿಗಲ್ ರಸ್ತೆಯಲ್ಲಿರುವ ಎಸ್ಐಟಿ ಕಾಲೇಜು ಮುಂಭಾಗ ಸುರಿದ ಭಾರಿ ಮಳೆಯಿಂದ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗಾಳಿ ಸಹಿತ ಮಳೆಯಿಂದ ಹಲವಡೆ ಗ್ರಾಮೀಣ ಭಾಗದಲ್ಲಿ ಮರಗಳು ಧರೆಗೆ ಉರುಳಿವೆ, ಬಿರುಗಾಳಿ ಸಹಿತ ಮಳೆಯಿಂದ ಅಡಿಕೆ, ತೆಂಗು, ಹಲಸು, ಹುಣಸೆ ಮರಗಳು ಧರೆಗುರುಳಿವೆ.
ಹತ್ತಾರು ವರ್ಷಗಳಿಂದ ಬೆಳೆಸಿದ್ದ ನೂರಾರು ಮರಗಳು ಧರೆಗೆ ಉರುಳಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಗುಬ್ಬಿ, ಕುಣಿಗಲ್, ಕೊರಟಗೆರೆ, ಶಿರಾ, ತುಮಕೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.
ಗುಬ್ಬಿಯಲ್ಲಿ ಜೋರು ಮಳೆ: ಗುಬ್ಬಿಯ ಚಂದ್ರಶೇಖರಪುರ ಭಾಗದಲ್ಲಿ ಮಳೆಯ ರಭಸಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ, ರಾ.ಹೆ.206 ರಸ್ತೆ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ವೈಜ್ಞಾನಿಕ ಚರಂಡಿಗಳು ಮಾಡದೇ ಇರುವುದರಿಂದ ರಸ್ತೆಯಲ್ಲಿ ನೀರು ನಿಂತಿದ್ದು, ದ್ವಿಚಕ್ರ ವಾಹನ ಸವಾರರು, ಆಟೋ, ಕಾರು, ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ.
ಇನ್ನು ಮಧುಗಿರಿ ತಾಲ್ಲೂಕಿನಲ್ಲಿ ಸುರಿದ ಮಳೆಗೆ ಕಸಬಾ ಹೋಬಳಿ ವ್ಯಾಪ್ತಿಯ ಆಚೇನಹಳ್ಳಿಗೆ ತೆರಳುವ ಸಂಪರ್ಕ ಸೇತುವೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ, ರಸ್ತೆ ಸಂಚಾರವಿಲ್ಲದೆ ಜನರು ಪರದಾಡುವಂತಾಗಿದೆ, ತಕ್ಷಣ ಸೇತುವೆ ದುರಸ್ತಿಗೊಳಿಸಿ, ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡುವಂತೆ ಜನರು ಒತ್ತಾಯಿಸಿದ್ದಾರೆ.
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ವ್ಯಾಪ್ತಿಯಲ್ಲಿ 6, ಮಾಯಸಂದ್ರ, ಶ್ರೀರಾಂಪುರ ಗ್ರಾಮದಲ್ಲಿ ತಲಾ ಒಂದು ವಾಸದ ಮನೆಯ ಗೋಡೆ ಕುಸಿದಿದೆ.
ಒಟ್ಟಾರೆ ತುಮಕೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಜನರು ಪರದಾಡುವಂತಾಗಿದೆ, ಈ ಮಳೆ ಯಾವಾಗ ನಿಲ್ಲುತ್ತೋ ಎಂದು ಜನರು ಕಾಯುವಂತಾಗಿದೆ.
Get real time updates directly on you device, subscribe now.
Prev Post
Comments are closed.