ಮಡಿವಾಳ ಸಮಾವೇಶಕ್ಕೆ ಮಡಿವಾಳರಲ್ಲೇ ಅಪಸ್ವರ

ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ ಒಂದು ಗುಂಪು- ಕಾಂಗ್ರೆಸ್ ಸಮಾವೇಶ ಎನ್ನುತ್ತಿದೆ ಮತ್ತೊಂದು ಗುಂಪು

200

Get real time updates directly on you device, subscribe now.

ತುಮಕೂರು: ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂಬ ಮಹತ್ವದ ಬೇಡಿಕೆ ಮುಂದಿಟ್ಟುಕೊಂಡು ಮೇ 22 ರಂದು ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಮಡಿವಾಳ ಸಮಾಜದ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಮೈಸೂರು, ಕೂಡಲಸಂಗಮ, ಬೆಂಗಳೂರುಗಳಲ್ಲಿ ಸಮಾವೇಶ ನಡೆಸಿದ ಸಂದರ್ಭದಲ್ಲಿ ಅಂದಿನ ಸರಕಾರಗಳು ಸ್ಪಂದಿಸಿ ಹಲವಾರು ಸವಲತ್ತುಗಳನ್ನು ಸಮುದಾಯಕ್ಕೆ ನೀಡಿದ್ದಾರೆ, ಹಾಗಾಗಿ ಈ ಬಾರಿಯೂ ತುಮಕೂರಿನಲ್ಲಿ ಪ್ರಮುಖ ಬೇಡಿಕೆಯೊಂದನ್ನು ಮುಂದಿಟ್ಟು ಸಮಾವೇಶ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಪರಿಪಾಲಿಸುತ್ತಾ ಬಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಐದು ನಿಗಮ ಮಂಡಳಿಗೆ ನಮ್ಮ ಸಮುದಾಯದವರನ್ನು ಗುರುತಿಸಿ ಅಧ್ಯಕ್ಷರು, ಸದಸ್ಯರುಗಳನ್ನಾಗಿ ಮಾಡಿರುವುದಲ್ಲದೆ, ಕುಲಪತಿಗಳಾಗಿ ಮಾಡಿದ್ದರು, ಅಲ್ಲದೆ ಬಜೆಟ್ನಲ್ಲಿ ಮಡಿವಾಳ ಸಮುದಾಯದ ಏಳಿಗೆಗೆ 60 ಕೋಟಿ ಹಣ ಮೀಸಲಿಟ್ಟು, ಖರ್ಚು ಮಾಡಿದ್ದಾರೆ, ಅಲ್ಲದೆ ಮಡಿವಾಳ ಮಾಚಿದೇವ ಜಯಂತಿ ಘೋಷಿಸಿ ಸರಕಾರದ ಕಾರ್ಯಕ್ರಮವಾಗಿ ನಡೆಸಿದ್ದಾರೆ, ಆ ನಂತರ ಹೆಚ್ಡಿಕೆ ಅವರು ಮಾಚಿದೇವ ಅಭಿವೃದ್ಧಿ ನಿಗಮ ಸ್ಥಾಪಿಸಿ 25 ಕೋಟಿ ರೂ. ಅನುದಾನ ನೀಡಿದ್ದರು, ಹಾಗಾಗಿ ಸಮುದಾಯಕ್ಕೆ ಹೆಚ್ಚು ಸಹಾಯ ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಕರೆಯಿಸಿ ಸಮಾವೇಶ ನಡೆಸುತ್ತಿದ್ದೇವೆ ಎಂದು ಸಿ.ನಂಜಪ್ಪ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಒಂದು ನಯಾ ಪೈಸೆ ಅನುದಾನ ನೀಡಿಲ್ಲ, ನಿಗಮದ ಅಧ್ಯಕ್ಷರನ್ನು ಸೇಮಿಸಿಲ್ಲ, ಈ ಹಿಂದೆ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನಮ್ಮ ಸಮುದಾಯದ ಬಡವರು ಒಂದಿಷ್ಟು ಸರಕಾರಿ ಸೌಲಭ್ಯ ಪಡೆಯುತ್ತಿದ್ದರು, ಈಗ ಅದಕ್ಕೂ ಕತ್ತರಿ ಬಿದ್ದಿದೆ, ಬಿಎಸ್ವೈ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಕನಿಷ್ಠವೆಂದರೂ 15 ಬಾರಿ ಮನವಿ ನೀಡಲಾಗಿದೆ, ಆದರೆ ಇದುವರೆಗೂ ಒಂದು ಬೇಡಿಕೆಯನ್ನು ಈಡೇರಿಸಿಲ್ಲ, ಹಾಗಾಗಿ ವಿರೋಧ ಪಕ್ಷದ ಮುಖಂಡರ ಜೊತೆ ಸೇರಿದ ಸಮಾವೇಶ ನಡೆಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ನಮ್ಮ ಮಡಿವಾಳ ಸಮಾಜದ ಜನರು ಇಂದಿಗೂ ಉತ್ತರ ಕರ್ನಾಟಕದಲ್ಲಿ ಒಂದು ರೋಟಿಗಾಗಿ ಶ್ರೀಮಂತರ ಮನೆ ಬಟ್ಟೆಗಳನ್ನು ಇಸ್ತ್ರಿ ಮಾಡಬೇಕಾದ ಪರಿಸ್ಥಿತಿ ಇದೆ, ಮಡಿವಾಳ ಲಿಂಗಾಯಿತ ಎಂದು ಲಿಂಗ ಕಟ್ಟಿದ್ದಾರೆ, ಆದರೆ ಇಂದಿಗೂ ಕರಟದಲ್ಲಿಯೇ ಕಾಫಿ, ಟೀ ನೀಡುತ್ತಾರೆ, ಈ ಸಮಸ್ಯೆ ಬಗೆಹರಿಯಬೇಕೆಂದರೆ ನ್ಯಾಯವಾದಿ ಕಾಂತರಾಜು ಅವರ ವರದಿ ಬಹಿರಂಗಗೊಳ್ಳಬೇಕು, ಆದರೆ ಯಾವುದೇ ಸರಕಾರಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಡಿವಾಳ ಸಮಾಜದ ಮುಖಂಡರ ಅಮರನಾಥ್ ಮಾತನಾಡಿ, ರಾಜ್ಯದ ಸುಮಾರು 26 ಕ್ಷೇತ್ರಗಳಲ್ಲಿ ಮಡಿವಾಳ ಸಮುದಾಯದ ಸುಮಾರು 10 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ, 85 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 4500- 5000 ಮತದಾರರಿದ್ದಾರೆ, ನಮ್ಮನ್ನು ನಿರ್ಲಕ್ಷಿಸಿರುವ ಬಿಜೆಪಿ ಪಕ್ಷಕ್ಕೆ ಈ ಬಾರಿ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ, ಇದೊಂದು ರಾಜಕೀಯ ಸಮಾವೇಶವಾಗಿರುವ ಹಿನ್ನೆಲೆಯಲ್ಲಿ ಸಮುದಾಯದ ಸ್ವಾಮೀಜಿ ಅವರನ್ನು ಈ ಸಮಾರಂಭಕ್ಕೆ ಕರೆದಿಲ್ಲ ಎಂದರು.
ಮೇ 22ರ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಬೃಹತ್ ಜನಜಾಗೃತಿ ಸಮಾವೇಶದಲ್ಲಿ 75 ಸಾವಿರಕ್ಕೂ ಅಧಿಕ ಮಡಿವಾಳ ಸಮುದಾಯದ ಜನರು ಸೇರಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್,ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ್,ಜಯಚಂದ್ರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಮಡಿವಾಳ ಸಂಘದ ಎಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅಮರನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗೋಪಿಕೃಷ್ಣ, ಜಿಲ್ಲಾಧ್ಯಕ್ಷ ಲಕ್ಷ್ಮಣ್, ರಾಜಣ್ಣ, ಸುಜಾತ ಮಯೂರಿ, ವೀರಣ್ಣ, ಶಾಂತಕುಮಾರ್, ದೇವೇಂದ್ರ, ವೆಂಕಟರಾಮಯ್ಯ, ಡಾ.ಕೆ.ಪಿ.ಅಶ್ವಥ್ ನಾರಾಯಣ್, ರಂಗಸ್ವಾಮಯ್ಯ, ಕೆಂಪನರಸಯ್ಯ ಇತರರು ಇದ್ದರು.

ಕಾಂಗ್ರೆಸ್ ಸಮಾವೇಶ ಮಾಡ್ತಿದ್ದಾರೆ: ಪ್ರಿಯಾ

ತುಮಕೂರು: ತುಮಕೂರಿನಲ್ಲಿ ಮೇ 22 ರಂದು ನಡೆಯುತ್ತಿರುವ ಮಡಿವಾಳ ಜಾಗೃತಿ ಸಮಾವೇಶ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿದ್ದು ಮಡಿವಾಳ ಸಮಾಜದ ಬಾಂಧವರು ಯಾರೂ ಭಾಗವಹಿಸದಂತೆ ಕರ್ನಾಟಕ ರಾಜ್ಯ ಮಡಿವಾಳ ಪರ ಸಂಘಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಪ್ರಿಯಾ ರಮೇಶ್ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಡೆಯಲಿರುವ ಸಮಾವೇಶದಲ್ಲಿ ಕೆಲವರು ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ ಸೇರ್ಪಡೆಗೊಂಡು ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟನ್ನು ತೋರಿಸುವ ವೇದಿಕೆಯನ್ನಾಗಿಸಿ ಮಡಿವಾಳ ಸಮಾಜವನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಸುಮಾರು 25 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಮಡಿವಾಳ ಸಮುದಾಯದ ಹಿತ ಕಾಯುವಲ್ಲಿ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಅವರ ಕೊಡುಗೆ ಶೂನ್ಯ ಎಂದು ಆಪಾದಿಸಿದರು.
ಹಿಂದುಳಿದ ತಳ ಸಮುದಾಯದ ಮಡಿವಾಳರನ್ನು ರಾಜ್ಯಾಧ್ಯಕ್ಷರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದು, ಸಮಾವೇಶದ ಹೆಸರಿನಲ್ಲಿ ಹಣ ವಸೂಲಿ ಮಾಡಿ ಐಷಾರಾಮಿ ಜೀವನ ನಡೆಸುತ್ತಾ, ನಮ್ಮ ಸಮುದಾಯದ ಅಭಿವೃದ್ಧಿಗೆ, ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಲವಾಗಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರ ಮತ್ತು ಪಕ್ಷದ ವಿರುದ್ಧ ಸಮಾವೇಶ ಮಾಡಿ ತಮಗೆ ಬೇಕಾದವರಿಗೆ ಎಂಎಲ್ಎ ಮತ್ತು ಎಂಎಲ್ಸಿ ಸೀಟ್ ಗಿಟ್ಟಿಸಲು ಹುನ್ನಾರ ನಡೆಸಿದ್ದು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರಲ್ಲೂ ನಮ್ಮ ಸಮುದಾಯ ಗುರುತಿಸಿಕೊಂಡಿದ್ದು, ಮಡಿವಾಳ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಸೀಮಿತ ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದರು.
ರಾಜ್ಯಘಟಕದ ಅಧ್ಯಕ್ಷರ ವಿರುದ್ಧ ಯಾರೆ ಮಾತನಾಡಿದರೂ ಅಂತಹವರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದ್ದು, ಈ ಸುದ್ದಿಗೋಷ್ಠಿಗೆ ಬರಬೇಕಾಗಿದ್ದ ಸುಮಾರು 20 ಜನ ಮುಖಂಡರನ್ನು ತಡೆದಿದ್ದಾರೆ ಎಂದು ಟೀಕಿಸಿದರು.

Get real time updates directly on you device, subscribe now.

Comments are closed.

error: Content is protected !!