ತುಮಕೂರು: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಹಿತರಕ್ಷಣೆಗೆ ಸಂಬಂಧಿಸಿದ ಅಹವಾಲುಗಳನ್ನು ಆಯಾ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಂತದಲ್ಲಿ, ನಂತರ ಉಪವಿಭಾಗ ಮಟ್ಟದಲ್ಲಿ ಸಭೆ ಕರೆದು ಚರ್ಚಿಸಿದ ನಂತರವಷ್ಟೇ ಜಿಲ್ಲಾ ಮಟ್ಟದ ಹಿತರಕ್ಷಣಾ ಸಮಿತಿಗೆ ಆಯಾ ವರದಿಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಬಾಲಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ.ಜಾತಿ, ಪ.ಪಂಗಡದ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು ಮತ್ತು ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಈ ಮೇಲಿನಂತೆ ಕರೆ ನೀಡಿದರು.
ಪೆದ್ದನಹಳ್ಳಿ, ಮಂಚಲದೊರೆ ದಲಿತ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿ ಮತ್ತು ತಳಮಟ್ಟದ ಪೊಲೀಸರನ್ನು ಬದಲಾಯಿಸಬೇಕು, ಕೊಲೆಯಾದವರ ಕುಟುಂಬದವರಿಗೆ ತಲಾ 25ಲಕ್ಷ ಪರಿಹಾರ ನೀಡಬೇಕು. ಸತ್ತಿರುವ ಯುವಕರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರ ಆಗ್ರಹಕ್ಕೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿ, ಈಗಾಗಲೇ ನೊಂದ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ ನೀಡಲಾಗಿದೆ, 25 ಲಕ್ಷ ರೂ. ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಎರಡೂ ನೊಂದ ಕುಟುಂಬಗಳ ತಾಯಂದಿರಿಗೆ ಮಾಸಾಶನ ಕೊಡಿಸುವ ಕೆಲಸ ಆಗುತ್ತಿದೆ, ಜಿಲ್ಲಾಧಿಕಾರಿಗಳ ಹಂತದಲ್ಲಿ ನಿಯಮಾನುಸಾರ ಯಾವ ರೀತಿಯ ನೆರವು ಒದಗಬೇಕು ಎಲ್ಲವನ್ನೂ ಸಹ ನೊಂದ ಕುಟುಂಬಗಳಿಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪ. ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಪ್ಲಾಗಿಂಗ್ ಮಾಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಬೆಂಗಳೂರಿನ ಭೂಮಿ ಮಾನಿಟರಿಂಗ್ ಸೆಲ್ನಲ್ಲಿ ಈ ಕುರಿತು ಪರಿಶೀಲಿಸಿ ಪ್ಲಾಗಿಂಗ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸರ್ಕಾರಿ ಜಮೀನು ಲಭ್ಯವಿರುವ ಜಾಗದಲ್ಲಿ ಮಂಜೂರು ಮಾಡಲಾಗಿದೆ, ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಾಗ ಖರೀದಿಸಲು ಕ್ರಮ ವಹಿಸಲು ತಿಳಿಸಲಾಗಿದೆ, ಜಿಲ್ಲೆಯ 8 ಗ್ರಾಮ ಹೊರತುಪಡಿಸಿ ಉಳಿದ 2565 ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಿದೆ ಎಂದು ತಿಳಿಸಿದರು.
ಪೆದ್ದನಹಳ್ಳಿ, ಮಂಚಲದೊರೆ ದಲಿತ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಮಾತನಾಡಿ, ತನಿಖಾಧಿಕಾರಿ ಎಸ್ಐ, ಅಡಿಷನಲ್ ಎಸ್ಪಿ, ಎಸ್ಪಿ ಹಂತದಲ್ಲಿ ಪ್ರಕರಣವನ್ನು ಪ್ರತಿ ಹಂತದಲ್ಲಿಯೂ ಸೂಕ್ಷ್ಮವಾಗಿ ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
1989 ಅಟ್ರಾಸಿಟಿ ಪ್ರಕರಣದ ಸೆಕ್ಷನ್ 4ರಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊದಲಿಗೆ ಆಯಾ ಇಲಾಖಾ ಮುಖ್ಯಸ್ಥರು ತನಿಖೆ ನಡೆಸಿ ನಂತರ ಪೊಲೀಸ್ ಠಾಣೆಗೆ ಸೆಕ್ಷನ್ 4ರಡಿ ಪ್ರಕರಣ ದಾಖಲಿಸುವಂತೆ ವರದಿ ನೀಡಿದ ನಂತರ ದಾಖಲು ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಪೆದ್ದನಹಳ್ಳಿ, ಮಂಚಲದೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕುಟುಂಬಗಳಿಗೆ 3 ತಿಂಗಳಿಗಾಗುವಷ್ಟು ಆಹಾರ ಪದಾರ್ಥ ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಸಭೆಗೆ ತಿಳಿಸಿದರು.
ಕುಣಿಗಲ್ ತಾಲ್ಲೂಕು ಅಮೃತೂರು ಗ್ರಾಮ ಪಂಚಾಯತಿಯಲ್ಲಿ 2018 ರಿಂದ 2020ರ ವರೆಗೆ ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕ್ಗೆ ಜಮೆ ಮಾಡದೆ ವಂಚಿಸಿದ್ದು, ಇದರಿಂದ ದಲಿತರ ಕಲ್ಯಾಣಕ್ಕೆ ಮೀಸಲಿಡುವ ಶೇ.25 ರಷ್ಟು ಅನುದಾನದ ಕೊರತೆ ಉಂಟಾಗಿದ್ದು, ಈ ಕುರಿತಂತೆ ಯಾವ ಕ್ರಮ ವಹಿಸಲಾಗಿದೆ ಎಂಬ ಪ್ರಶ್ನೆಗೆ ಮಾತನಾಡಿದ ಜಿಪಂ ಸಿಇಓ ವಿದ್ಯಾಕುಮಾರಿ ಅವರು, ಆಡಿಟ್ ವರದಿ ಪರಿಶೀಲಿಸಿ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆದು ಪ.ಜಾತಿ, ಪಂಗಡದವರ ಶೇಕಡ 25 ಅನುದಾನ ಇಡಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ದಲಿತ ಮುಖಂಡರು ಮತ್ತು ಸಾರ್ವಜನಿಕರು ಇದ್ದರು.
ದಲಿತ ಯುವಕ ಕೊಲೆ- ಡೀಸಿಯಿಂದ ಕುಟುಂಬಕ್ಕೆ ನೆರವಿನ ಭರವಸೆ
Get real time updates directly on you device, subscribe now.
Prev Post
Next Post
Comments are closed.