ಎಸ್.ಸಿ, ಎಸ್.ಟಿ ಮೀಸಲಾತಿ ಕೂಡಲೇ ಹೆಚ್ಚಿಸಿ

ಸ್ವಾಮೀಜಿ ಹೋರಾಟ ಬೆಂಬಲಿಸಿ ತುಮಕೂರಿನಲ್ಲಿ ಪ್ರತಿಭಟನೆ

198

Get real time updates directly on you device, subscribe now.

ತುಮಕೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ರಾಜನಹಳ್ಳಿಯ ಶ್ರೀವಾಲ್ಮೀಕಿ ಮಹರ್ಷಿ ನಡೆಸುತ್ತಿರುವ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಖಂಡರು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಹೋರಾಟಗಾರರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಶಬರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶಾಂತಲಾ ರಾಜಣ್ಣ ಮಾತನಾಡಿ, ಮೀಸಲಾತಿ ಹೆಚ್ಚಳ ಮಾಡಿ ಎಂದು ನಮ್ಮ ಸಂವಿಧಾನ ಬದ್ದವಾದ ಹಕ್ಕನ್ನು ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆಯನ್ನಲ್ಲ, ಸಂವಿಧಾನದ ಪ್ರಕಾರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹಂಚಿಕೆಯಾಗಬೇಕು, ಈ ಮೊದಲು ನಾವು ಮೀಸಲಾತಿ ಹೆಚ್ಚಳ ಮಾಡಿ ಎಂದು ಕೇಳಿದರೆ ಅಂಕಿ ಅಂಶಗಳಿಲ್ಲ ಎಂದು ಹೇಳುತ್ತಿದ್ದರು, ಆದರೆ ಈಗ ಸರಕಾರದ ಮುಂದೆ ನ್ಯಾ.ನಾಗಮೋಹನ್ದಾಸ್ ಅವರ ವರದಿ ಇದೆ, ಆ ವರದಿ ಪ್ರಕಾರ ಪರಿಶಿಷ್ಟ ಜಾತಿಗೆ ಶೇ.17.5 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡಲು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ, ಆದರೆ ವರದಿ ಬಂದು 8 ತಿಂಗಳು ಕಳೆದರೂ ಸರಕಾರ ನಿರ್ಲಕ್ಷ ವಹಿಸಿರುವುದು ಸರಿಯಲ್ಲ, ಆದರೆ ಯಾವುದೇ ವರದಿ ಇಲ್ಲದೆ ಶೇ. 3 ರಷ್ಟು ಜನಕ್ಕೆ ಶೇ.10 ರ ಮೀಸಲಾತಿ ನೀಡಲು ಸಾಧ್ಯವಾಯಿತು ಎಂದು ಪ್ರಶ್ನಿಸಿದ ಅವರು, ಕೂಡಲೇ ನಾಗಮೋಹನ್ ದಾಸ್ ವರದಿ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಇಂದು ಸಾಂಕೇತಿಕವಾಗಿರುವ ಹೋರಾಟ ಮುಂದೊಂದು ದಿನ ಉಗ್ರ ಸ್ವರೂಪ ಪಡೆದುಕೊಳ್ಳಲಿದ್ದು, ಅಂದು ಆಗುವ ಅನಾಹುತಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ಆಶ್ರಮದ ಪ್ರಸನ್ನಾನಂದ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲವಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತಿದ್ದೇವೆ, ಈಗಲೂ ನೀವು ನಿರ್ಲಕ್ಷವಹಿಸಿದರೆ ಶೇ.25 ಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಎಸ್ಸಿ, ಎಸ್ಟಿ ಸಮುದಾಯಗಳು ಒಗ್ಗೂಡಿದರೆ ನಿಮ್ಮ ಸರಕಾರಕ್ಕೆ ಉಳಿಗಾಲವಿಲ್ಲ, ನಿಮ್ಮ ಧೋರಣೆ ಹೀಗೆಯೇ ಮುಂದುವರೆದರೆ ಇದನ್ನು ಮುಂದಿನ ಚುನಾವಣೆಯಲ್ಲಿ ಸಾಬೀತು ಮಾಡಿ ತೋರಿಸಲಿದ್ದೇವೆ ಎಂದು ಶಾಂತಲಾ ರಾಜಣ್ಣ ನುಡಿದರು.
ಬಿಎಸ್ಪಿಯ ರಾಜಸಿಂಹ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡೇ ಶೋಷಿತ ಸಮುದಾಯಗಳಿಗೆ ಇದುವರೆಗೂ ದೊರೆಯುತ್ತಿದ್ದ ಒಂದೊಂದೆ ಸವಲತ್ತು ಕಿತ್ತುಕೊಳ್ಳುತ್ತಿದೆ, ಆ ಮೂಲಕ ಪರೋಕ್ಷವಾಗಿ ಸಂವಿಧಾನದಲ್ಲಿ ಬದಲಾವಣೆ ತರುತ್ತಿದೆ, ಯಾವುದೇ ಹೋರಾಟ, ಪ್ರತಿಭಟನೆ, ಮನವಿಗಳಿಲ್ಲದೆ ಮುಂದುವರೆದ ವರ್ಗಗಳಿಗೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ, ಆದರೆ ವೈಜ್ಞಾನಿಕವಾಗಿ ಅಧ್ಯಯನಗೊಂಡು ವರದಿಯಿದ್ದರೂ, ತ್ರಿಸದಸ್ಯ ಸಮಿತಿ ಹೆಸರಿನಲ್ಲಿ ಅನಗತ್ಯ ವಿಳಂಬ ಮಾಡುವುದು ಸರಿಯಲ್ಲ ಎಂದರು.
ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಹತ್ತಾರು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಎಂಬ ಹೋರಾಟ ನಡೆಸುತ್ತಾ ಬಂದಿದ್ದರೂ ಸರಕಾರಗಳು ಹಿಂದೇಟು ಹಾಕುತ್ತಿವೆ, ಪ್ರಸುತ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯ ಈ ಹೋರಾಟ ಮಾಡು ಇಲ್ಲವೇ ಮಡಿ ಚಳವಳಿಯಾಗಿದೆ, ಹಾಗಾಗಿ ನಿಶ್ಚಿತ ಫಲಿತಾಂಶ ಬರುವವರೆಗೂ ಹೋರಾಟ ನಿಲ್ಲದು ಎಂದರು.
ಹೋರಾಟಗಾರ ಪ್ರತಾಪ ಮದಕರಿ ಮಾತನಾಡಿ, ಕಳೆದ 100 ದಿನಗಳಿಂದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸ್ವಾಮೀಜಿಯೊಬ್ಬರು ಹಗಲು ರಾತ್ರಿ ಎನ್ನದೆ ಹೋರಾಟ ನಡೆಸುತ್ತಿದ್ದರೂ ಸರಕಾರದ ಯಾವೊಬ್ಬ ಜನಪ್ರತಿನಿಧಿಯೂ ತಿರುಗಿ ನೋಡುತ್ತಿಲ್ಲ, ಈ ಧೋರಣೆ ಖಂಡನೀಯ, ಇದೇ ರೀತಿ ಸರಕಾರ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದರು.
ಪ್ರತಿಭಟನೆಗೂ ಮುನ್ನ ಟೌನ್ ಹಾಲ್ ವೃತ್ತದಲ್ಲಿ ಹೋರಾಟ ಬೆಂಬಲಿಸಿದ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದಕ್ಕೆ ನಮ್ಮ ಬೆಂಬಲವಿದೆ, ಈ ನಿಟ್ಟಿನಲ್ಲಿ ಸದನದಲ್ಲಿ ಪ್ರಸ್ತಾಪಿಸುವುದಲ್ಲದೆ, ಕೇಂದ್ರಕ್ಕೆ ಶಿಾರಸ್ಸು ಕಳುಹಿಸುವಂತೆ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪಿ.ಎನ್.ರಾಮಯ್ಯ, ಪ್ರತಾಪ್ ಮದಕರಿ, ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಪುರುಷೋತ್ತಮ್, ನಿವೃತ್ತ ಅಧಿಕಾರಿ ಪಿ.ಬಿ.ಬಸವರಾಜು, ದಲಿತ ಮುಖಂಡರಾದ ಆಟೋ ಶಿವರಾಜು, ಎಂ.ವಿ.ರಾಘವೇಂದ್ರಸ್ವಾಮಿ, ರಂಜನ್, ಬಂಡೆಕುಮಾರ್, ಕುಪ್ಪೂರು ರಂಗಪ್ಪನಾಯಕ, ಅರ್ಜುನ್ ಪಾಳೇಗಾರ್, ಕೊಟ್ಟ ಶಂಕರ್, ಕ್ಯಾತ್ಸಂದ್ರ ರವಿ, ರಾಜೇಂದ್ರ ನಾಯ್ಕ್, ಶ್ರೀನಿವಾಸ ಮೂರ್ತಿ, ಸಿ.ಜಯಣ್ಣ, ಎಂ.ರಾಮಯ್ಯ, ಹಾಗಲವಾಡಿ ಕೃಷ್ಣಮೂರ್ತಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!