ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಬಿ.ಆರ್.ಸಿ ಕಚೇರಿ

156

Get real time updates directly on you device, subscribe now.

ಗುಬ್ಬಿ: ಕಳೆದ 2 ವರ್ಷದ ಹಿಂದೆ ಕೊರೊನಾ ಸಂದರ್ಭದಲ್ಲಿ ಎಲ್ಲಾ ಶಾಲೆಗಳು ಮುಚ್ಚಿದ್ದವು, ವಿದ್ಯಾರ್ಥಿಗಳು ಮನೆಯಿಂದ ಹೊರಬರಲಿಲ್ಲ, ಆದರೆ ಗುಬ್ಬಿ ಪಟ್ಟಣದ ಬಿಆರ್ಸಿ ಕಚೇರಿ ಮಾತ್ರ ಕೊರೊನಾ ಸಮಯದಲ್ಲಿ ವಿಶೇಷವಾಗಿ ನವೀಕರಣಗೊಂಡು ಸಾರ್ವಜನಿಕರನ್ನು, ಶಿಕ್ಷಕರನ್ನು ಕೈಬೀಸಿ ಕರೆಯುತ್ತಿದೆ.

ಗುಬ್ಬಿ ಪಟ್ಟಣದ ಬಿ.ಆರ್.ಸಿ ಕಚೇರಿ ಸಂಪೂರ್ಣವಾಗಿ ನವೀಕರಣಗೊಂಡು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ, ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರಗಳು ಎಲ್ಲರನ್ನು ಆಕರ್ಷಿಸುತ್ತಿವೆ.
ಸುಮಾರು 3 ಲಕ್ಷ ವೆಚ್ಚದಲ್ಲಿ ಬಿಆರ್ಸಿ ಕಚೇರಿ ನವೀಕರಣಗೊಂಡಿದ್ದು ಸರಕಾರಿ ಶಾಲೆಗಳು, ಸರಕಾರಿ ಕಚೇರಿಗಳು ಎಂದರೆ ಮೂಗು ಮುರಿಯುವಂತಹ ಸಂದ‘ರ್ದಲ್ಲಿ ಇಲ್ಲಿನ ಬಿಆರ್ಸಿ, ಸಿಆರ್ಪಿಗಳು ಒಂದಿಷ್ಟು ಆಸಕ್ತಿ ತೋರಿ ತಮ್ಮ ಸ್ವಂತ ಹಣವನ್ನೇ ಹಾಕಿ ತಾಲ್ಲೂಕಿನ ವಿವಿಧ ಶಾಲೆಗಳಿಂದ ಬರುವಂತಹ ಶಿಕ್ಷಕರಿಗೆ ತರಬೇತಿ ನೀಡುವ ಜಾಗವು ಸ್ವಚ್ಛಂದವಾಗಿ ಕೂಡಿರಬೇಕು ಎಂದು ಯೋಜನೆ ರೂಪಿಸಿ ಆಧುನಿಕವಾಗಿ ಇಡೀ ಕಚೇರಿಯ ಆವರಣ ಬದಲಾವಣೆ ಮಾಡಿದ್ದಾರೆ.
ಸುಂದರವಾದ ಉದ್ಯಾನ ಉದ್ಯಾನದೆಲ್ಲೆಡೆ ನೂರಾರು ವಿವಿಧ ರೀತಿಯ ತಳಿಯ ಸಸಿಗಳು ಹಸಿರಿನಿಂದ ಕಂಗೊಳಿಸುತ್ತಿವೆ, ಉದ್ಯಾನವನಕ್ಕೆ ಸಂಪೂರ್ಣವಾಗಿ ಪೈಪ್ ಲೈನ್ ಮಾಡಿ ಹನಿ ನೀರಾವರಿ ಮೂಲಕ ಹಾಗೂ ಸ್ಪಿಂಕ್ಲರ್ ಉಪಯೋಗಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ ಹಾಗೂ ವಿಶೇಷ ವಾಕಿಂಗ್ ಪಾತ್ ನಿರ್ಮಾಣ ಮಾಡಿದ್ದು ಹಸಿರಿನಿಂದ ಕಂಗೊಳಿಸುತ್ತದೆ, ಇನ್ನೂ 500 ಕ್ಕೂ ಹೆಚ್ಚು ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ಶಿಕ್ಷಕರಿಗೆ ಆಧುನಿಕವಾಗಿ ಬೇಕಾಗಿರುವ ಇಂಟರ್ನೆಟ್ ಸೌಲಭ್ಯ, ನಿರಂತರ ವಿದ್ಯುತ್, ಪ್ರೊಜೆಕ್ಟರ್, ಗಣಕಯಂತ್ರಗಳು, ಪ್ರಯೋಗಾಲಯ ಸೇರಿದಂತೆ ಶಿಕ್ಷಕರಿಗೆ ಅನುಕೂಲವಾಗುವ ಎಲ್ಲಾ ರೀತಿಯ ಸೌಲಭ್ಯಯವನ್ನು ಇಲ್ಲಿ ಒದಗಿಸಲಾಗುತ್ತಿದೆ.
ಹಿಂದೆ ಇಡೀ ಕಚೇರಿಯೇ ಸಾಕಷ್ಟು ಕಸದ ಗುಂಡಿ, ಕಲ್ಲು ಬಂಡೆಗಳಿಂದ ಕೊಳಚೆ ಪ್ರದೇಶದಂತಾಗಿತ್ತು, ಈ ಸ್ಥಳ ಈಗ ಪ್ರಾಕೃತಿಕ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ.
ಕಚೇರಿಯ ಗೋಡೆಗಳ ಮೇಲೆ ತಾಲ್ಲೂಕಿನ ಚಿತ್ರಕಲಾ ಶಿಕ್ಷಕರು ವಿಶೇಷವಾಗಿ ಚಿತ್ರಪಟಗಳನ್ನು ಬರೆದು ಇಡಿ ಗೋಡೆಗಳನ್ನು ಆಕರ್ಷಕವಾಗಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡಲು ಬೇಕಾಗಿರುವಂತಹ ಪ್ರಯೋಗಾಲಯ ಚಿತ್ರಗಳು, ಸರಕಾರದ ಶೈಕ್ಷಣಿಕ ಯೋಜನೆಗಳು ಸೇರಿದಂತೆ ನೂರಾರು ಚಿತ್ರ ಪಟಗಳನ್ನು ಗೋಡೆಯ ಮೇಲೆ ಬಿಡಿಸಲಾಗಿದೆ.
ಇಡೀ ಜಿಲ್ಲೆಯಲ್ಲಿಯೇ ಬಹಳ ವಿಶೇಷವಾಗಿ ಬಿಆರ್ಸಿ ಕಚೇರಿ ನವೀಕರಣ ಮಾಡಿದ್ದು ಇದಕ್ಕೆ ಶಿಕ್ಷಣ ಇಲಾಖೆ, ಬಿಇಒ, ಸಿಆರ್ಪಿ ಕಚೇರಿ ಸಿಬ್ಬಂದಿ ಹಲವು ಶಾಲೆಯ ಶಿಕ್ಷಕರು ಕೈಜೋಡಿಸಿದ್ದಾರೆ, ಇಲ್ಲಿ ವಿಶೇಷ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಬಿಆರ್ಸಿ ಸಿದ್ದಲಿಂಗ ಸ್ವಾಮಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!