ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಎರಡು ತಿಂಗಳಿನಿಂದ ಎರಡು ಬಾರಿ ಕರೆಯಲಾಗಿದ್ದ, ಲೆಕ್ಕಪತ್ರ ತಾಳೆಯಾಗದೆ ಗದ್ದಲ ಗೌಜಿನಿಂದ ಮುಂದೂಡಿಕೊಂಡು ಬರಲಾಗಿದ್ದ ಪ್ರಥಮ ಸಾಮಾನ್ಯ ಸಭೆ ಸೋಮವಾರ ಸಚಿವ ಮಾಧುಸ್ವಾಮಿ ಉಪಸ್ಥಿತಿಯಲ್ಲಿ ಯಾವುದೇ ಗದ್ದಲಕ್ಕೆ ಅವಕಾಶವಿಲ್ಲದಂತೆ ಯಶಸ್ವಿಯಾಗಿ ಜರುಗಿತು.
ಪಟ್ಟಣ ಪಂಚಾಯಿತಿಗೆ ಹೊಸದಾಗಿ ಬಂದಿರುವ ಅಭಿವೃದ್ಧಿ ಅಧಿಕಾರಿ ಡಿ.ಭೂತಪ್ಪ ತಮ್ಮ ಪರಿಚಯ ಮಾಡಿಕೊಳ್ಳುವುದರ ಮೂಲಕ ಸಭೆ ಆರಂಭವಾಯಿತು. ವಾರ್ಡ್ವಾರು ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಅಬ್ಬುಬಕ್ಕರ್ ಸಿದ್ದಿಕ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿವೃದ್ಧಿ ಎಂದರೆ ಏನು ಎಂಬುದರ ಬಗ್ಗೆ ಸದಸ್ಯರಿಗೆ ತಮ್ಮ ಅನುಭವದ ಕಿವಿಮಾತು ಹೇಳಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಲು ಸಲಹೆ ನೀಡಿದರು.
ಬಂದಿರುವ ಅನುದಾನವನ್ನು ಎಲ್ಲಾ ವಾರ್ಡ್ಗಳಿಗೂ ಸಮವಾಗಿ ಹಂಚಿಕೆ ಮಾಡಬೇಕು ಎಂಬುದು ಸರಿಯಲ್ಲ, ಹೊಸದಾಗಿ ಮಾಡಲಾಗಿರುವ ವಾರ್ಡ್ಗಳಲ್ಲಿ ಸೌಲಭ್ಯಗಳ ಕೊರತೆ ಇದ್ದಲ್ಲಿ ಅವುಗಳಿಗೆ ಮೊದಲು ಆದ್ಯತೆ ನೀಡಿ ಅಭಿವೃದ್ಧಿ ಪಡಿಸಲಾಗುವುದು, ಹುಳಿಯಾರು ಪಟ್ಟಣದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ವೈಯಕ್ತಿಕ ಪ್ರತಿಷ್ಠೆ ಕೈಬಿಟ್ಟು, ಆಗಬೇಕಾಗಿರುವ ಕಾಮಗಾರಿ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಂಡು ಸಹಕರಿಸಬೇಕು, ಎಲ್ಲರ ಸಹಕಾರದೊಂದಿಗೆ ಪಟ್ಟಣಕ್ಕೆ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಪಟ್ಟಣ ಪಂಚಾಯಿತಿಯ ಕಸ ನಿರ್ವಹಣೆಗೆ ತಂದಿರುವ ಟ್ರ್ಯಾಕ್ಟರ್ಗೆ ಬಳಸಿರುವ ಡೀಸೆಲ್ಗೆ ತಿಂಗಳಿಗೆ 70 ರಿಂದ 80 ಸಾವಿರ ರೂಪಾಯಿ ಖರ್ಚಾಗಿರುವ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. ಪ್ರತಿನಿತ್ಯ ಹತ್ತು ಲೀಟರ್ ಡೀಸೆಲ್ ಎಂದಿಟ್ಟುಕೊಂಡರೂ 25 ರಿಂದ 30 ಸಾವಿರ ರೂಪಾಯಿ ಒಳಗೆ ಮುಗಿಬೇಕು, ಅದರ ಬದಲು ಇಷ್ಟೊಂದು ಖರ್ಚು ಏಕೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ಕಡೆಗೆ ಪ್ರತಿ ತಿಂಗಳ ಕೊನೆಯಲ್ಲಿ ಆಯಾ ತಿಂಗಳ ಖರ್ಚನ್ನು ಬಿಲ್ ಮಾಡಿ ಚುಕ್ತಾ ಮಾಡಿ, ಅದನ್ನು ಮುಂದುವರೆಸಿದಲ್ಲಿ ಈ ರೀತಿಯ ಗೊಂದಲ ಉಂಟಾಗುತ್ತದೆ ಎಂದು ಸಚಿವರು ಹೇಳಿದ್ದರಿಂದ ಪ್ರತಿ ತಿಂಗಳು ಡೀಸೆಲ್ ಖರ್ಚನ್ನು ಆಯಾ ತಿಂಗಳ ಕೊನೆಯಲ್ಲಿ ಕೊಡುವುದು ಎಂದು ತೀರ್ಮಾನಿಸಲಾಯಿತು.
ಮಳಿಗೆಗಳ ಬಾಡಿಗೆ: ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಯ ವಾಣಿಜ್ಯ ಮಳಿಗೆಗಳನ್ನು ಇ-ಹರಾಜು ಮೂಲಕ ವಿಲೆ ಮಾಡಲು ಈ ಹಿಂದೆ ತೀರ್ಮಾನಿಸಲಾಗಿತ್ತು, ಕೆಲವರು ಕೋರ್ಟ್ ಮೇಟ್ಟಿಲೇರಿದ್ದಾರೆ, ಹಾಗಾಗಿ ಹಾಲಿ ಇರುವ ಬಾಡಿಗೆದಾರರಿಗೆ ಮುಂದಿನ 5 ವರ್ಷ ರಿನಿವಲ್ ಮಾಡಿ ಮಾರುಕಟ್ಟೆ ದರದಂತೆ ಬಾಡಿಗೆ ನಿಗದಿ ಮಾಡುವ, ಒಪ್ಪದಿದ್ದವರನ್ನು ನಿರ್ಧಾಕ್ಷಿಣ್ಯವಾಗಿ ಖಾಲಿ ಮಾಡಿಸುವ ಹಾಗೂ ಮೂಲ ಬಾಡಿಗೆದಾರರಲ್ಲದವರನ್ನು ಮಳಿಗೆಗಳಿಂದ ಖುಲ್ಲಾ ಮಾಡಿಸಿ ಮರು ಹರಾಜು ಮೂಲಕ ವಿಲೆ ಮಾಡಲು ಸರ್ಕಾರದ ಚಿಂತನೆಯಿದೆ ಎಂದು ಸಚಿವರು ತಿಳಿಸಿದರು.
ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ: ಜಲಜೀವನ್ ಯೋಜನೆಯಡಿ ಬೀದಿ ಬೀದಿಗಳಲ್ಲಿ ಅಳವಡಿಸಿರುವ ಸಾರ್ವಜನಿಕ ನಲ್ಲಿಗೆ ಕೊನೆ ಹಾಡಿ ಮುಂದಿನ ಎರಡು ವರ್ಷಗಳಲ್ಲಿ ಹುಳಿಯಾರಿನ ಪ್ರತಿಮನೆಗೂ ನಲ್ಲಿ ನೀರಿನ ಸಂಪರ್ಕ ಕೊಡಲಾಗುವುದು. ನೀರಿನ ಮೀಟರ್ ಅಳವಡಿಸಿ ಬಳಕೆಯಾಗುವ ನೀರಿಗೆ ಶುಲ್ಕ ನಿಗದಿ ಮಾಡಲಾಗುವುದು ಎಂದು ಜೆಸಿಎಂ ತಿಳಿಸಿದರು.
ಆಸ್ತಿ ತೆರಿಗೆ ಹೆಚ್ಚಳ :ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ನಡೆದ ಚರ್ಚೆಯಲ್ಲಿ ಹಾಲಿ ಇರುವ ತೆರಿಗೆಯೇ ಹೆಚ್ಚಿದ್ದು ಸದ್ಯಕ್ಕೆ ದರ ಹೆಚ್ಚಳ ಮಾಡುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಸರ್ಕಾರದಿಂದ ಇಂತಿಷ್ಟು ಪರ್ಸೆಂಟ್ ಹೆಚ್ಚಿಸಬೇಕು ಎಂಬ ಸುತ್ತೋಲೆ ಇರುವುದರಿಂದ ಸದ್ಯ 3 ಪರ್ಸೆಂಟ್ ದರ ಹೆಚ್ಚಳ ಮಾಡುವುದರ ಬಗ್ಗೆ ಒಪ್ಪಿಗೆ ನೀಡಲಾಯಿತು.
ಸಮುದಾಯ ಆರೋಗ್ಯ ಕೇಂದ್ರ: ಹುಳಿಯಾರಿಗೆ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲು ಒಪ್ಪಿಗೆ ಪಡೆಯಲಾಗಿದ್ದು, ಇದರಿಂದ 50 ಹಾಸಿಗೆಯ ಸುಸ್ಸಜಿತ ಆಸ್ಪತ್ರೆ ಹಾಗೂ ಅದಕ್ಕೆ 11 ಜನ ಡಾಕ್ಟರ್ ಬರುವುದರಿಂದ, ಹುಳಿಯಾರು ಪಟ್ಟಣದ ಬಹುದಿನದ ಸಮಸ್ಯೆ ಬಗೆಹರಿಯಲಿದೆ. ಹಾಲಿ ಇರುವ ಆಸ್ಪತ್ರೆ ಆವರಣದಲ್ಲೇ ಸೊಸೈಟಿ ಸ್ಥಳಾಂತರಿಸಿ ಆಸ್ಪತ್ರೆ ನಿರ್ಮಿಸುವ ಚಿಂತನೆಯಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಹೆಚ್.ಎಂ.ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಬಿ.ಜಿ.ಶೃತಿ, ಮುಖ್ಯಾಧಿಕಾರಿ ಭೂತಪ್ಪ, ಇಂಜಿನಿಯರ್ ಮಂಜುನಾಥ್, ಸದಸ್ಯರಾದ ದಯಾನಂದ್, ಚಂದ್ರಶೇಖರ್, ಹೇಮಂತ್ ಕುಮಾರ್, ರಾಜುಬಡಿಗಿ, ಮಹಮ್ಮದ್ ಜುಬೇರ್, ಕಾವ್ಯ ರಾಣಿ, ಮಂಜಾನಾಯ್ಕ, ಸಂಧ್ಯಾ, ಸೈಯದ್ ಜಹೀರ್, ಪ್ರೀತಿ ರಾಘವೇಂದ್ರ, ರತ್ನಮ್ಮ, ಅಬೂಬಕ್ಕರ್ ಸಿದ್ದೀಕ್, ಬೇಬಿಫಾತಿಮ, ನಾಮಿನಿ ಸದಸ್ಯರಾದ ಗೀತಾ ಅಶೋಕ್ ಬಾಬು, ಬಡ್ಡಿಪುಟ್ಟರಾಜು, ಬಳೆ ದಾಸಪ್ಪ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
Comments are closed.