ಕುಣಿಗಲ್: ರಾಗಿ ಖರೀದಿ ಕೇಂದ್ರದ ಅಸಮರ್ಪಕ ವ್ಯವಸ್ಥೆ ಖಂಡಿಸಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಆರ್ಎಂಸಿ ಯಾರ್ಡ್ ಮುಂಭಾಗದ ಮುಖ್ಯರಸ್ತೆಯಲ್ಲಿ ದಿಡೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಎರಡನೆ ಹಂತದಲ್ಲಿ ತಾಲೂಕಿನ ಐದು ಸಾವಿರಕ್ಕೂ ಹೆಚ್ಚು ರೈತರಿಂದ ರಾಗಿ ನೋಂದಣಿಗೆ ಅಗತ್ಯ ಪ್ರಕ್ರಿಯೆ ನಡೆಸಿದ್ದರು, ನೋಂದಣಿ ಪ್ರಕ್ರಿಯೆ ಮುಗಿಸಿ ಸೋಮವಾರದಿಂದ ರಾಗಿ ಕೇಂದ್ರದಲ್ಲಿ ರಾಗಿ ಎತ್ತುವಳಿ ಮಾಡಬೇಕಿತ್ತು, ಈ ಹಿನ್ನೆಲೆಯಲ್ಲಿ ನೂರಾ ಇಪ್ಪತ್ತು ರೈತರು ರಾಗಿ ಮೂಟೆಗಳೊಂದಿಗೆ ಕೇಂದ್ರಕ್ಕೆ ಬಂದು ಖರೀದಿಗೆ ಆಗ್ರಹಿಸಿದರೆ, ನೂರಾರು ರೈತರು ರಾಗಿ ಕೇಂದ್ರಕ್ಕೆ ರಾಗಿ ಯಾವಾಗ ತರಬೇಕು ಎಂದು ವಿಚಾರಿಸಲು ಆಗಮಿಸಿದರು. ರಾಗಿ ಕೇಂದ್ರದ ಅಧಿಕಾರಿಗಳು ಸಮರ್ಪಕ ಉತ್ತರ ನೀಡದಿದ್ದಕ್ಕೆ ಬೇಸತ್ತ ರೈತರು ಆರ್ಎಂಸಿ ಯಾರ್ಡ್ಮುಂಭಾಗದ ಮುಖ್ಯರಸ್ತೆಯಲ್ಲಿ ಕಲ್ಲು, ಮರದ ದಿಮ್ಮಿ ಇಟ್ಟು ಸಮರ್ಪಕ ವ್ಯವಸ್ಥೆಗೆ ಒತ್ತಾಯಿಸಿ ರಸ್ತೆತಡೆ ನಡೆಸಿದರು, ಇದರಿಂದ ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಯಿತು.
ಸ್ಥಳಕ್ಕೆ ಬಂದ ಸಿಪಿಐ ಗುರುಪ್ರಸಾದ್ ರೈತರ ಮನ ಒಲಿಸಲು ಯತ್ನಿಸಿದರು, ರೈತರು ಪಟ್ಟು ಬಿಡದ ಕಾರಣ ವಾಹನಗಳನ್ನು ಬೈಪಾಸ್ ನಲ್ಲಿ ಕಳಿಸಲು ವ್ಯವಸ್ಥೆ ಮಾಡಿದರು. ಈ ವೇಳೆ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬಿ.ಎನ್.ಲೋಕೇಶ್ ಆಗಮಿಸಿ ಖರೀದಿ ಕೇಂದ್ರದ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಕೃಷ್ಣಪ್ಪ ಇತರರನ್ನು ತರಾಟೆಗೆ ತೆಗದುಕೊಂಡು ರೈತರ ಶೋಷಣೆ ಮಾಡದಂತೆ ಎಚ್ಚರಿಕೆ ನೀಡಿದರಲ್ಲದೆ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿದರು. ಅಧಿಕಾರಿಗಳು ತಾಲೂಕಿನಾದ್ಯಂತ ಒಟ್ಟಾರೆ 5100 ರೈತರು ರಾಗಿ ಖರೀದಿಗೆ ನೋಂದಾಯಿಸಿದ್ದಾರೆ. ಈ ಪೈಕಿ ಸರ್ಕಾರದ ನಿಯಮಾವಳಿ ಪ್ರಕಾರ ಈ ತಿಂಗಳ 31ಕ್ಕೆ ಹೇಗೆ ಖರೀದಿ ಮಾಡಿದರೂ ಕೇವಲ ಎರಡು ಸಾವಿರ ರೈತರ ರಾಗಿ ಖರೀದಿ ಮಾಡಬಹುದು, ಬಾಕಿ ರೈತರ ಖರೀದಿಗೆ ಅಡಚಣೆ ಆಗಲಿದೆ, ಇದು ಇಡೀ ರಾಜ್ಯದ ಸಮಸ್ಯೆ ಆಗಿದ್ದು ಮೇಲಾಧಿಕಾರಿಗಳಿಂದ ಸೂಕ್ತ ಆದೇಶ ಬಂದಲ್ಲಿ ಸಮರ್ಪಕ ಖರೀದಿಗೆ ಮುಂದಾಗುತ್ತೇವೆ ಎಂದರು.
ರೈತರ ಪ್ರತಿಭಟನೆ ವಿಷಯ ತಿಳಿದು ತಹಶೀಲ್ದಾರ್ ಮಹಾಬಲೇಶ್ವರ್ ಆಗಮಿಸಿ, ರೈತರ ಸಮಾಧಾನ ಪಡಿಸಲು ಯತ್ನಿಸಿದರು. ರೈತರು ಖರೀದಿ ಮಾಡದೆ ಇದ್ದ ಮೇಲೆ 5100 ರೈತರ ನೋಂದಣಿ ಏಕೆ ಮಾಡಿದ್ದೀರಿ ಎಂದು ತರಾಟೆಗೆ ತೆಗದುಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಪುರಸಭೆ ಅಧ್ಯಕ್ಷ ರಂಗಸ್ವಾಮಿ ಆಗಮಿಸಿ ಶಾಸಕರು ರಾಗಿ ಖರೀದಿ ನಿಟ್ಟಿನಲ್ಲಿ ಸಂಬಂಧಪಟ್ಟ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಮಧ್ಯೆ ತಹಶೀಲ್ದಾರ್ ಎರಡು ದಿನದೊಳಗೆ ಸಮಸ್ಯೆ ಬಗೆಹರಿಯಲಿದ್ದು ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದ ಮೇರೆಗೆ ರೈತರು ಎರಡು ದಿನದ ಸಮಯವಕಾಶ ನೀಡಿ ಪ್ರತಿಭಟನೆ ಹಿಂಪಡೆದರು.
ಸೋಮವಾರವೆ ರಾಗಿ ಖರೀದಿ ಮಾಡುತ್ತಾರೆ ಎಂದು ನೂರಾ ಇಪ್ಪತ್ತಕ್ಕೂ ಹೆಚ್ಚು ರೈತರು ಆರ್ಎಂಸಿ ಯಾರ್ಡ್ನ ಕಟ್ಟೆಯಲ್ಲಿ ರಾಗಿ ಮೂಟೆ ಸಂಗ್ರಹಿಸಿ, ನಾವು ಬೆಳಗಿನಿಂದ ಮನೆ, ಮಕ್ಕಳು, ದನ ಕರು ಬಿಟ್ಟು ರಾಗಿ ಹಾಕಲು ಬಾಡಿಗೆ ಟ್ರಾಕ್ಟರ್ ಮಾಡಿಕೊಂಡು ಬಂದಿದ್ದೇವೆ, ಮಳೆ ಬಂದಲ್ಲಿ ರಾಗಿಗೆ ಹಾನಿಯಾಗಲಿದೆ, ತಂದಿರುವ ರಾಗಿ ಎತ್ತುವಳಿ ಮಾಡುವಂತೆ ಒತ್ತಾಯಿಸಿದರು. ರೈತರ ಪರವಾಗಿ ಮಾತನಾಡಿದ ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್.ಲೋಕೇಶ್ ಹಾಲಿ ತಂದಿರುವ ರೈತರ ರಾಗಿ ಎತ್ತುವಳಿ ಮಾಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ರಾಗಿ ಎತ್ತುವಳಿಗೆ ಅಧಿಕಾರಿಗಳು ಮುಂದಾದರು.
ರಾಗಿ ಖರೀದಿ ಕೇಂದ್ರದಲ್ಲಿ ಅಧ್ವಾನ- ರೈತರ ಆಕ್ರೋಶ
Get real time updates directly on you device, subscribe now.
Prev Post
Next Post
Comments are closed.