ತುಮಕೂರು: ಗುಬ್ಬಿ ತಾಲ್ಲೂಕಿನ ದಲಿತ ಯುವಕರ ಜೋಡಿ ಕೊಲೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತುಮಕೂರು ಚಲೋ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಮಂಗಳವಾರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ಕೊಲೆಯಾಗಿರುವ ಯುವಕರ ಕುಟುಂಬಗಳಿಗೆ ರಕ್ಷಣೆ ನೀಡಿ ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಪ್ರತಿ‘ಟನಾಕಾರರನ್ನು ಉದ್ದೇಶಿಸಿ ದಸಂಸ ಮುಖಂಡ ಗುಬ್ಬಿ ಮಂಜೇಶ್ ಮಾತನಾಡಿ, ಕೊಲೆಯಾಗಿರುವ ಯುವಕರ ಕುಟುಂಬಗಳು ಕಣ್ಣೀರಲ್ಲಿ ಮುಳುಗಿವೆ, ಯಾರೂ ಸಹ ಬಂದು ಸಹಾಯ ಮಾಡುತ್ತಿಲ್ಲ, ಬದಲಾಗಿ ಆ ಕುಟುಂಬಗಳಿಗೆ ಬಹಿಷ್ಕಾರ, ದೂಷಣೆ ಮಾಡುವ ಕೆಲಸ ನಡೆಯುತ್ತಿದೆ, ಈ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೋ ಬಂಧಿಸಿರುವುದು ಮುಖ್ಯವಲ್ಲ, ಈ ಕೊಲೆಗೆ ಮುಖ್ಯ ಕಾರಣವಾಗಿರುವ ಹಿನ್ನೆಲೆ ಪತ್ತೆ ಹಚ್ಚಬೇಕು, ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಕೊಲೆಗೀಡಾಗಿರುವ ದಲಿತ ಯುವಕರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು, ಈ ಯುವಕರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಚಿತ್ರ ಹಿಂಸೆ ನೀಡಿ ಅಮಾನುಷವಾಗಿ ಕೊಲೆಗೈದ ಸವರ್ಣೀಯರ ನಂದೀಶ ಮತ್ತು ಅವರ ಸಹಚರರಿಗೆ ಜೀವಾವಧಿ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು, ಕೊಲೆಯಾಗಿರುವ ಇಬ್ಬರು ಯುವಕರ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕು ಹಾಗೂ ಈ ಕುಟುಂಬಗಳಿಗೆ ಸರ್ಕಾರದ ವತಿಯಿಂದಲೇ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಅಂಬೇಡ್ಕರ್ ನೀಡಿರುವ ಸಂವಿಧಾನ ಸುಟ್ಟರೆ ಬೂದಿಯಾಗುವ ಗ್ರಂಥವಲ್ಲ, ಸುಡುವ ಮನಸ್ಸುಗಳ ಬದಲಿಸುವ ಪವಿತ್ರ ಗ್ರಂಥ, ಹಸಿವಿನ ಜಠರ ಗುಟುರು ಹಾಕಿದರೆ ಯಾವ ಸಾಮ್ರಾಜ್ಯವೂ ಉಳಿಯುವುದಿಲ್ಲ, ಇದನ್ನು ಅರ್ಥೈಸಿಕೊಂಡು ದಲಿತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಅವರು, ಇತ್ತೀಚೆಗೆ ಗುಬ್ಬಿ ತಾಲ್ಲೂಕಿನ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚಾಗುತ್ತಿವೆ, ಇದನ್ನು ತಡೆಗಟ್ಟುವ ಕೆಲಸ ಆಗಬೇಕು ಎಂದರು.
ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಪೆದ್ದನಹಳ್ಳಿಯ ಎರಡು ಅಮಾಯಕ ಜೀವಗಳನ್ನು ಸವರ್ಣೀಯರು ಬಲಿ ಪಡೆದಿದ್ದಾರೆ. ಕೂಡಲೆ ಹತ್ಯೆಯಾಗಿರುವ ಯುವಕರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ಒದಗಿಸುವುದರೊಂದಿಗೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಾಯಿಸಿದರು.
ಪ್ರಗತಿಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿ ಅಮಾಯಕ ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿವೆ, ಈ ಹೋರಾಟ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿಕೊಡುವುದಾಗಿದೆ ಎಂದರು.
ಎರಡು ಅಮಾಯಕ ಜೀವಗಳ ಹತ್ಯೆಯಾಗಿದೆ, ಇದನ್ನು ನೋಡಿದರೆ ನಮ್ಮಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆ ಇದೆಯೇ, ಸರ್ಕಾರ ಇದೆಯೇ, ಪೊಲೀಸ್ ಇಲಾಖೆ ಇದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ, ಗುಂಪು ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಇಡೀ ದೇಶದಲ್ಲಿ ರೈತರು, ದಲಿತರ ಮೇಲೆ ನಡೆದಿರುವ ಹತ್ಯೆ, ದೌರ್ಜನ್ಯಗಳಿಗೆ ಶಿಕ್ಷೆಯಾಗಿಲ್ಲ, ದೌರ್ಜನ್ಯ ಮಾಡುತ್ತಿರುವವರಿಗೆ ಕಾನೂನಿನ ಭಯ ಇಲ್ಲ, ಈ ದೇಶದಲ್ಲಿ ಎಲ್ಲಾ ಮಹಾನ್ ನಾಯಕರು ಇಲಿ ಬಿಲ ಸೇರಿಕೊಂಡಿದ್ದಾರೆ ಎಂದು ದೂರಿದ ಅವರು, ಬಲಿಷ್ಠ ಜನರ ಅಹಂಕಾರವನ್ನು ಇಡೀ ನಾಗರಿಕ ಸಮಾಜ ಖಂಡಿಸುತ್ತದೆ, ಇಂತಹವರಿಗೆ ಬುದ್ಧಿ ಹೇಳುವ ಅಗತ್ಯವಿದೆ, ಬಡವರನ್ನು ಹತ್ಯೆ, ಅತ್ಯಾಚಾರ ಮಾಡುವಂತಹ ಹೀನ ಕೃತ್ಯ ಮಾಡಬಾರದು, ಕೊಲೆಯಾಗಿರುವ ಯುವಕರ ಕುಟುಂಬದವರಿಗೆ ಭಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ, ಇದನ್ನು ಹೋಗಲಾಡಿಸಿ ನ್ಯಾಯ ಒದಗಿಸಬೇಕು, ಈಗ ಪ್ರಾರಂಭವಾಗಿರುವ ಹೋರಾಟ ನ್ಯಾಯ ಸಿಗುವವರೆಗೂ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಲ್ನಡಿಗೆ ಜಾಥಾದಲ್ಲಿ ಕೊಲೆಗೀಡಾಗಿರುವ ಯುವಕನ ತಾಯಿ ನರಸಮ್ಮ, ಶ್ರೀಧರ್, ಗುಬ್ಬಿ ಮಂಜೇಶ್, ರವಿಕುಮಾರ್ ಕಲ್ಲೂರು, ನಿಟ್ಟೂರು ರಂಗಸ್ವಾಮಿ, ಸೂಲಿಕುಂಟೆ ರಮೇಶ್, ಶಿವನಂಜಯ್ಯ, ಮಂಜುನಾಥ್, ಸ್ವಾಮಿ ತೊಗರಿಘಟ್ಟ, ಸ್ಲಂ ಹಿತರಕ್ಷಣಾ ಸಮಿತಿಯ ನರಸಿಂಹಮೂರ್ತಿ, ವಾಲೆಚಂದ್ರು, ಕೊಟ್ಟ ಶಂಕರ್, ಕೇಬಲ್ ರಘು, ಪಾಂಡುರಂಗಯ್ಯ, ಬಂಡೆ ಕುಮಾರ್, ಸುಬ್ರಹ್ಮಣ್ಯ, ನಟರಾಜು, ಉಮೇಶ್, ನರಸಿಂಹಯ್ಯ, ಹೆಗ್ಗೆರೆ ಕೃಷ್ಣಪ್ಪ, ಮರಳೂರು ಕೃಷ್ಣಮೂರ್ತಿ, ಗಾಂಧಿರಾಜ್, ಲಕ್ಷ್ಮೀಕಾಂತ್, ದೊರೈರಾಜ್, ಸಿ.ಕೆ.ತಿಪ್ಪೇಸ್ವಾಮಿ, ಪೆದ್ದಣ್ಣ, ಶಿವಶಂಕರ್, ದೊಡ್ಡೇರಿ ಕಣಿಮಯ್ಯ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ದಲಿತ ಯುವಕರ ಜೋಡಿ ಕೊಲೆ ಖಂಡಿಸಿ ಹೋರಾಟ
Get real time updates directly on you device, subscribe now.
Prev Post
Next Post
Comments are closed.