ಯುವ ಜನಾಂಗದ ಆತ್ಮ ವಿಶ್ವಾಸ ಬೆಳೆಸಿಕೊಳ್ಳಲಿ: ಸಿಇಓ

141

Get real time updates directly on you device, subscribe now.

ತುಮಕೂರು: ಇಂದಿನ ಯುವ ಜನಾಂಗ ಆತ್ಮವಿಶ್ವಾಸದಿಂದ ಜೀವನ ನಿರ್ವಹಿಸುವಂತಹ ಅಂಶಗಳನ್ನು ಕರ್ನಾಟಕ ಯುವ ನೀತಿಯಲ್ಲಿ ಸೇರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಕರ್ನಾಟಕ ಯುವ ನೀತಿ, 2022 ಅಂತಿಮಗೊಳಿಸಲು ನಡೆಸಿದ ಸಭೆಯಲ್ಲಿ ಮಾತನಾಡಿ, ಇಂದಿನ ಯುವ ಜನಾಂಗ 19- 20ರ ಚಿಕ್ಕ ವಯಸ್ಸಿಗೆ ಆತ್ಮಹತ್ಯೆಯಂತಹ ದಾರಿ ತುಳಿಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ, ಅವರಿಗೆ ಮನೋಸ್ಥೈರ್ಯ ತುಂಬುವ ಅಂಶಗಳನ್ನು ಕರಡಿನಲ್ಲಿ ಸೇರಿಸುವುದು ಅತ್ಯಗತ್ಯ ಎಂದು ವಿವರಿಸಿದರು.
ಶಿಕ್ಷಣ ಮತ್ತು ತರಬೇತಿಯು ಯುವ ಜನರಿಗೆ ಜ್ಞಾನ ಮತ್ತು ಕೌಶಲ್ಯ ಹೊಂದಲು ಸಹಾಯ ಮಾಡುವ ಮೂಲಕ ಸುಸ್ಥಿರ ಜೀವನ ನಡೆಸಲು ಅವಕಾಶ ಒದಗಿಸುತ್ತದೆ ಎಂದರಲ್ಲದೇ ಇದರ ಜೊತೆಗೆ ಯುವಕ, ಯುವತಿಯರಿಗೆ ಕಾನೂನು ಅರಿವು ಮೂಡಿಸುವಂತಹ ಅಂಶಗಳು ಯುವ ನೀತಿಯಲ್ಲಿ ಇರಬೇಕು ಎಂದರು.
ಡಿಜಿಟಲ್ ವ್ಯಸನದಿಂದ ಮಕ್ಕಳು ಮತ್ತು ಯುವ ಜನರನ್ನು ಹೇಗೆ ಮುಕ್ತಗೊಳಿಸುವುದು ಎನ್ನುವ ಸೂಕ್ಷ್ಮ ವಿಚಾರಗಳನ್ನು ಕುರಿತು ಪೋಷಕರಲ್ಲಿ ಅರಿವು ಮೂಡಿಸಲು ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಬೇಕಲ್ಲದೆ ಡಿಜಿಟಲ್ ವ್ಯಸನ ಕುರಿತು ಅಧ್ಯಯನ ಮಾಡಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮದ್ಯ, ತಂಬಾಕು ಮತ್ತು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಮತ್ತು ಕ್ರಮ ಕೈಗೊಳ್ಳಲು ಸಮಿತಿ ರಚಿಸಲು ತಿಳಿಸಿದರು. ಶಾಲಾ- ಕಾಲೇಜುಗಳಲ್ಲಿ ಯೋಗ, ಪ್ರಾಣಾಯಾಮವನ್ನು ಪಠ್ಯದ ಭಾಗವಾಗಿ ಮಾಡಿದಾಗ ಯುವಕರಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಂಡು ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ಸಭೆಯಲ್ಲಿದ್ದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಜನರಿಗಾಗಿ ಶಿಕ್ಷಣ, ತರಬೇತಿ, ಉದ್ಯೋಗ ,ಉದ್ಯಮಶೀಲತೆ, ಆರೋಗ್ಯ ಮತ್ತು ಯೋಗ ಕ್ಷೇಮ, ಕ್ರೀಡೆ, ದೈಹಿಕ ಸಾಮರ್ಥ್ಯ, ಕಲೆ, ಸಂಸ್ಕೃತಿ ಮತ್ತು ಮೌಲ್ಯಾಧಾರಿತ ನಾಯಕತ್ವ ಬೆಳೆಸಲು ಅಗತ್ಯವಾದ ಪೂರಕ ಕ್ರಮಗಳನ್ನು ಅಳವಡಿಸಲು ಚರ್ಚಿಸಲಾಯಿತು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಸಂಜಯ್ ನಾಯಕ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರವಿಕುಮಾರ್, ಲೋಕೇಶ್, ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಸುಂದರಮ್ಮ, ಲೋಕೇಶ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಎಂ.ರಮೇಶ್, ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಪ್ರದೀಪ್ ಕುಮಾರ್, ಜಿಲ್ಲಾ ಎನ್.ಎಸ್.ಎಸ್ ಯೋಜನಾಧಿಕಾರಿ ಡಾ.ಮೌನೇಶ್ವರ ಶ್ರೀನಿವಾಸ್ ರಾವ್, ಅಶ್ವಿನಿ ಆಯುರ್ವೇದ ಆಸ್ಪತ್ರೆಯ ಡಾ.ಪ್ರಕಾಶ್ ಪಾಲ್ಟೈ, ಯೂತ್ ಅರ್ಬನ್ ಅಂಡ್ ವಿಲೇಜ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪ್ರಸಾದ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!