ಕುಣಿಗಲ್ ಪುರಸಭೆ ದಿವಾಳಿ- ಸದಸ್ಯರ ಆಕ್ರೋಶ

151

Get real time updates directly on you device, subscribe now.

ಕುಣಿಗಲ್: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಸದಸ್ಯರೆ ಸ್ವಪಕ್ಷೀಯ ಅಧ್ಯಕ್ಷರ ಮೇಲೆ ತೀವ್ರ ವಾಗ್ವಾದ ನಡೆಸಿ, ಪುರಸಭೆ ದಿವಾಳಿಯಾಗಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದೆ, ಯಾವುದೇ ಕೆಲಸವಾಗುತ್ತಿಲ್ಲ ಎಂದು ಆರೋಪಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಬುಧವಾರ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆ ಕರೆಯಲಾಗಿತ್ತು, ಸಭೆಯ ಆರಂಭದಲ್ಲೆ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಲೀಕೇಜ್ ವಿಭಾಗದ ಕಾರ್ಮಿಕರಿಗೆ ರಜೆ ಭತ್ಯ ನೀಡುವ ನಿಟ್ಟಿನಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಬಿಜೆಪಿ ಸದಸ್ಯ ಕೃಷ್ಣ ಆರೋಪಿಸಿದರೆ, ಕಾಂಗ್ರೆಸ್ ಸದಸ್ಯರಾದ ಅರುಣಕುಮಾರ್, ನಾಗೇಂದ್ರ, ಉದಯ ಬೆಂಬಲಿಸಿ ಅಕ್ರಮ ನಡೆದಿದೆ, ಇಡೀ ಕಡತ ತರಬೇಕು, ದಿನಗೂಲಿ ನೌಕರರ ಹಣ ನೀಡಲು ಜಿಎಸ್ಟಿ ನಮೂದು ಮಾಡಿರುವುದು ನೋಡಿದರೆ ವ್ಯಾಪಕ ಭ್ರಷ್ಟಾಚಾರವಾಗಿದ್ದು ಅಧ್ಯಕ್ಷರು ಸೇರಿದಂತೆ ಅಧಿಕಾರಿಗಳು ಸಮರ್ಪಕವಾಗಿ ವರ್ತಿಸಿಲ್ಲ ಎಂದು ದೂರಿದರು.
ಅಧ್ಯಕ್ಷ ರಂಗಸ್ವಾಮಿ ನಿಯಮಾನುಸಾರ ಮಾಡಲಾಗಿದೆ, ಕಡತ ತರಿಸುತ್ತೇನೆ ಎಂದಾಗ, 2014ರಲ್ಲಿ ನಡೆದ ಪ್ರಕ್ರಿಯೆಗೆ 2022ರಲ್ಲಿ ಬಿಲ್ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದಾಗ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಸದಸ್ಯರಾದ ಅರುಣಕುಮಾರ್, ನಾಗೇಂದ್ರ ನಡುವೆ ಕಾವೇರಿದ ಚರ್ಚೆ ನಡೆಯಿತು.
ಕಾಂಗ್ರೆಸ್ ಸದಸ್ಯರಾಮು, ಪಟ್ಟಣದ ಎಲ್ಲಾ ವಾರ್ಡ್ಗಳಲ್ಲೂ ಕಸ ತುಂಬಿ ತುಳುಕುತ್ತಿದೆ. ಚರಂಡಿ ನೀರು ಕುಡಿಸುತ್ತಿದ್ದಾರೆ ಜನಕ್ಕೆ, ಪುರಸಭೆ ಯಾವುದೇ ಅಧಿಕಾರಿಗಳು ಸದಸ್ಯರ ಕರೆಗೆ ಉತ್ತರಿಸೊಲ್ಲ, ಪುರಸಭೆಯಿಂದ ಯಾವುದೇ ಖಾತೆ ದಾಖಲೆ ನೀಡುತ್ತಿಲ್ಲ, ಪುರಸಭೆ ದಿವಾಳಿಯಾಗಿದೆ ಎಂದು ಹೇಳಿ ಬೋರ್ಡ್ಹಾಕಿ ಬಾಗಿಲು ಮುಚ್ಚಿ, ಸುಮ್ಮನೆ ಸರ್ಕಾರದ, ಜನರ ತೆರಿಗೆ ಹಣ ಕಟ್ಟಿಸಿಕೊಂಡು ಅಧಿಕಾರಿಗಳು ಮೆರೆಯುತ್ತಿದ್ದಾರೆ. ಅಧ್ಯಕ್ಷರಿಗೆ ಅಧಿಕಾರಿಗಳು, ಸಿಬ್ಬಂದಿ ಮೇಲೆ ಹಿಡಿತ ಇಲ್ಲ, ಪುರಸಭೆ ಸಂಪೂರ್ಣ ದಿವಾಳಿ ಅಂಚಿನತ್ತ ಸಾಗಿದೆ ಎಂದು ಝಾಡಿಸಿದರು.
ಕಾಂಗ್ರೆಸ್ ಸದಸ್ಯ ನಾಗೇಂದ್ರ, ಘಟನೋತ್ತರ ಮಂಜೂರಾತಿ ಬಳಸಿ ಪುರಸಭೆ ಅನುದಾನ ಲೂಟಿ ಹೊಡೆಯಲಾಗುತ್ತಿದೆ. ನಾಚಿಕೆಗೇಡು, ಜನರ ಯಾವುದೇ ಕೆಲಸವಾಗುತ್ತಿಲ್ಲ, ಸರ್ಕಾರದ ನಿಯಮಗಳ ಮೀರಿ ಮನಬಂದಂತೆ ಬಿಲ್ ಹರಿದು ಹಣ ವ್ಯರ್ಥ ಮಾಡುತ್ತಿದ್ದಾರೆ. ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ ಎಂದು ನೇರವಾಗಿ ಸ್ವಪಕ್ಷಿಯ ಅಧ್ಯಕ್ಷರನ್ನೆ ತರಾಟೆಗೆ ತೆಗೆದುಕೊಂಡರು, ಇದಕ್ಕೆ ಆಕ್ಷೇಪಿಸಿದ ಅಧ್ಯಕ್ಷ ರಂಗಸ್ವಾಮಿ, ನಾಗೇಂದ್ರ ಅವರು ಸಹ ಹಿಂದೆ ಅಧ್ಯಕ್ಷರಾಗಿದ್ದರು, ಅವರಿಗೆ ಅಧಿಕಾರ ನಡೆಸಲು ಬರಲಿಲ್ಲ, ನಾನು ನಡೆಸುತ್ತಿದ್ದೇನೆ, ಇಡೀ ಊರಿನ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದೇನೆ, ಅವರು ಮಾಡಲಾಗದ ಕೆಲಸ ನಾನು ಮಾಡಿ ತೋರಿಸುತ್ತಿದ್ದೇನೆ ಎಂದು ಮಾಡಿದ ಕೆಲಸದ ಪಟ್ಟಿ ಮುಂದಿಟ್ಟರು.
ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯ ಅರುಣಕುಮಾರ್, ಇ-ಖಾತೆ ಸರಿಯಾಗಿ ಆಗುತ್ತಿಲ್ಲ, ಅಧ್ಯಕ್ಷರ ಕೃಪೆ ಇದ್ದರೆ ಮಾತ್ರ, ಸಾಮಾನ್ಯ ಜನರು ಯಾವುದೇ ಪ್ರಭಾವ ಇಲ್ಲದೆ ಇ-ಖಾತೆ ಮಾಡಿಸಲು ಆಗುತ್ತಿಲ್ಲ, ಅಧ್ಯಕ್ಷರು ಸದಸ್ಯರು ಸೇರಿದಂತೆ ನಮ್ಮನ್ನು ದಾರಿ ತಪ್ಪಿಸುವುದು ಬಿಡಬೇಕು ಎಂದರು.
ಸದಸ್ಯ ಕೃಷ್ಣ ಬೆಂಬಲಿಸಿ ಪುರಸಭೆಯಲ್ಲಿ ಇ- ಖಾತೆ ಕೆಲಸವಾಗುತ್ತಿಲ್ಲ, ಇ- ಖಾತೆ ಅರ್ಜಿ ಎಷ್ಟು ಪೆಂಡಿಂಗ್ ಇದೆ, ಅಧ್ಯಕ್ಷರು ಏನು ಮಾಡುತ್ತಿದ್ದಾರೆ, ನಾಚಿಕೆಯಾಗಬೇಕು, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದ್ದು ಬಿಜೆಪಿ ಸದಸ್ಯ ನಾಗಣ್ಣ ಬೆಂಬಲಿಸಿದರು.
ಸಭೆ ಆರಂಭವಾಗಿ ಸ್ವಪಕ್ಷೀಯ ಹಾಗೂ ಬಿಜೆಪಿ ಸದಸ್ಯರ ಆಕ್ರೋಷಕ್ಕೆ ಅಧ್ಯಕ್ಷರು ಪ್ರತಿ ಉತ್ತರ ನೀಡುವ ಮೂಲಕ ಕಾವೇರಿದ ವಾಗ್ವಾದಕ್ಕೆ ಕಾರಣವಾಗಿ ಸಭೆ ಗೊಂದಲದಲ್ಲೆ ಮುಳುಗಿತು, ಜೆಡಿಎಸ್ ಸದಸ್ಯ ಶ್ರೀನಿವಾಸಮೂರ್ತಿ, ಸ್ವಚ್ಛತೆ ಕಾಪಾಡುವ ಬಗ್ಗೆ ವಿಷಯ ಮಂಡಿಸಿದರೂ ಸೂಕ್ತ ಉತ್ತರ ಸಿಗಲಿಲ್ಲ. ಕಾಮಗಾರಿ ಪೂರ್ಣಗೊಂಡರು ಬಿಲ್ ಪಾವತಿಸದ ಬಗ್ಗೆ, ಇತರೆ ಕೆಲಸಗಳಿಗೆ ಟೆಂಡರ್ ಆಗಿದ್ದರೂ ಕೆಲಸ ಪ್ರಾರಂಭಿಸದ ಬಗ್ಗೆ ಚರ್ಚೆ ನಡೆದರೂ ತೀರ್ಮಾನಕ್ಕೆ ಬರಲಾಗಲಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಶಬನಾ ತಬಸ್ಸುಮ್, ಮುಖ್ಯಾಧಿಕಾರಿ ಶಿವಪ್ರಸಾದ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!