ಮಠ ಮಾನ್ಯಗಳಿಗೆ ಸಿದ್ದಗಂಗ ಮಠ ಮಾದರಿ

ಶಿವಕುಮಾರ ಶ್ರೀ ಲಕ್ಷಾಂತರ ಮಕ್ಕಳಿಗೆ ಬದುಕು ನೀಡಿದ್ದಾರೆ: ಆರಗ ಜ್ಞಾನೇಂದ್ರ

130

Get real time updates directly on you device, subscribe now.

ತುಮಕೂರು: ಒಂದು ಮಠ ಧಾರ್ಮಿಕ ಕಾರ್ಯಗಳಿಗಷ್ಟೇ ಸಿಮೀತವಾಗದೆ ತನ್ನ ಸುತ್ತಮುತ್ತಲಿನ ಜನರ ದುಖಃ ದುಮ್ಮಾನಗಳಿಗೆ ಪರಿಹಾರ ಕಂಡು ಹಿಡಿಯಬಹುದು ಎಂಬುದಕ್ಕೆ ಸಿದ್ದಗಂಗ ಮಠದ ಸಾಕ್ಷಿಯಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಹಾಗು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹರಳೂರು ಗ್ರಾಮದಲ್ಲಿ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮ ಜಯಂತಿ ಹಾಗೂ ಶ್ರೀವೀರಭದ್ರ ಸ್ವಾಮಿ ದೇವಾಲಯದ ನಿತ್ಯ ದಾಸೋಹ ಪ್ರಾರಂಭ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಮತ್ತು ಹರಳೂರು ಶಿವಕುಮಾರ್ ವಿಚರಿತ ಅರಿವಿನ ಕಣ್ಣು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿಗಳು ಇರದಿದ್ದರೆ ಲಕ್ಷಾಂತರ ಮಕ್ಕಳು ವಿದ್ಯೆ ವಂಚಿತರಾಗುವುದಲ್ಲದೆ ಹಸಿವಿನಿಂದ ಸಾವನ್ನಪ್ಪುತಿದ್ದರು, ಹಾಗಾಗಿ ಮಠಗಳ ಕಾರ್ಯವೈಖರಿಗೆ ಶ್ರೀಸಿದ್ದಗಂಗಾ ಮಠ ಮಾದರಿ ಎಂದರು.
ನಾನು ಜಗತ್ತಿನಲ್ಲಿಯೇ ಭಕ್ತಿ ಮತ್ತು ಪ್ರೀತಿಯಿಂದ ಕಾಣುವ ಯಾವುದಾದರೂ ಸ್ವಾಮೀಜಿ ಇದ್ದರೆ ಅದು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ, ಅವರು ನಮಗೆ ನಾವು ಭೂಮಿಯ ಮೇಲೆ ಹೇಗೆ ಮನುಷ್ಯರಾಗಿ ಬದುಕುಬೇಕು ಎಂಬ ಮಾರ್ಗದರ್ಶನ ಮಾಡಿ ಹೋಗಿದ್ದಾರೆ, ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಅವರು ಬದುಕು ಕಟ್ಟಿಕೊಳ್ಳುವಂತೆ ಮಾಡಿದ್ದಾರೆ, ಹಾಗಾಗಿ ಅವರು ಸ್ವಾಮಿ, ಸನ್ಯಾಸಿಗಳಲ್ಲಿಯೇ ಅನುಕರಣೀಯರಾಗಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ನುಡಿದರು.
ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಿಸಿಕೊಂಡ ಡಾ.ಶಿವಕುಮಾರ ಸ್ವಾಮೀಜಿಗಳು ಎಂದು ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ, ಆದರೂ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ, ಅವರ ಹೆಸರನ್ನು ನೆನಸಿದರೆ ಸಾಲದು, ಅವರ ನಡೆದ ದಾರಿಯಲ್ಲಿ ಕಿಂಚಿತ್ತಾದರೂ ನಾವು ಸಾಗುವ ಮೂಲಕ, ಅನ್ನರ ಬದುಕಿಗೆ ನೆರವಾದರೆ ಅದು ನಾವು ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಸಲ್ಲಿಸುವ ಗೌರವ, ಆಗ ಮಾತ್ರ ಸ್ವಾಮೀಜಿಗಳ ಆತ್ಮ ಸಂತೋಷ ಪಡುತ್ತದೆ ಎಂದರು.
ಹರಳೂರಿನ ವೀರಭದ್ರಸ್ವಾಮಿ ದೇವಾಲಯ ಸಮತಿಯಿಂದ ನಿತ್ಯ ದಾಸೋಹಕ್ಕೆ ಇಂತು ಚಾಲನೆ ಸಿದ್ದಲಿಂಗ ಸ್ವಾಮೀಜಿಗಳು ನೀಡಿದ್ದಾರೆ, ಇದು ಮತ್ತಷ್ಟು ಹೆಮ್ಮರವಾಗಿ ಬೆಳೆದು ಭಕ್ತ ಹಸಿವು ತಣಿಸುವ ಕಾರ್ಯ ಮಾಡಲಿ ಎಂದು ಆಶಿಸುತ್ತೇನೆ, ಜಿಲ್ಲಾ ಉಸ್ತುವಾರಿ ಸಚಿವನಾಗಿ, ಗೃಹ ಸಚಿವನಾಗಿ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ಗುರುತರ ಜವಾಬ್ದಾರಿ ನನ್ನ ಮೇಲಿದೆ, ಅದು ನಿರಂತರವಾಗಿ ಸಾಗಿದೆ, ಜಿಲ್ಲೆಯ ಇಬ್ಬರು ಸಚಿವರು ಅಭಿವೃದ್ಧಿಯಲ್ಲಿ ನನಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಅವರ ಖಾತೆಗಳ ನಿರ್ವಹಣೆಯಲ್ಲಿಯೂ ಉತ್ತಮ ಹೆಸರು ಪಡೆದಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಸಹ ಜನತೆಗೆ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಜೂನ್ 01 ರಂದು ಪ್ರಗತಿ ಪರಿಶೀಲನಾ ಸಭೆಯಿಂದ ಮತ್ತಷ್ಟು ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾ ಸ್ವಾಮೀಜಿ ಮಾತನಾಡಿ, ಹರಳೂರು ಮತ್ತು ಸಿದ್ದಗಂಗಾ ಮಠಕ್ಕೆ ಅವಿನಾಭಾವ ಸಂಬಂಧವಿದೆ, ಶ್ರೀಉದ್ಯಾನ ಶಿವಯೋಗಿಗಳು ಇಲ್ಲಿ ಕೆರೆ ಕಟ್ಟಿಸುವುದರ ಜೊತೆಗೆ ಶಾಲೆ ಪ್ರಾರಂಭಿಸಬೇಕೆಂಬ ಕನಸು ಕಂಡಿದ್ದರು, ಅದನ್ನು ಶಿವಕುಮಾರ ಸ್ವಾಮೀಜಿಗಳು ಶಾಲೆ ತೆರೆಯುವ ಮೂಲಕ ನನಸು ಮಾಡಿದರು, ಇಡೀ ರಾಜ್ಯದಲ್ಲಿಯೇ ಮೊದಲಿಗೆ ಸ್ವಾಮೀಜಿಯವರ ಪುತ್ಥಳಿ ಅನಾವರಣ ಮಾಡಿದ ಗ್ರಾಮವೆಂದರೆ ಹರಳೂರು, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳನ್ನು ಈ ಗ್ರಾಮದ ಜನತೆ ತನ್ನ ಹೃದಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
ತುಮಕೂರು ನಗರದ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಹಲವು ವರ್ಷಗಳಿಂದ ಮಾಜಿ ಶಾಸಕ ಸುರೇಶಗೌಡ ಅವರು ಈ ಭಾಗದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಧಾರ್ಮಿಕವಾಗಿ, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ, ಅವರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ರಾಜ್ಯದಲ್ಲಿ ಬಿಎಸ್ವೈ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ರಾಜ್ಯದ ಕಲ್ಯಾಣ ಕುರಿತು ಪ್ರತಿ ಹಂತದಲ್ಲಿಯೂ ಮಾರ್ಗದರ್ಶನ ಮಾಡಿದವರು ಡಾ.ಶಿವಕುಮಾರ ಸ್ವಾಮೀಜಿಗಳು, ಅವರ ಮಾರ್ಗದರ್ಶನದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋದರು, ಹಾಗಾಗಿ ಶ್ರೀಗಳು ನಮಗೆಲ್ಲರಿಗೂ ಪ್ರಾಥಃಸ್ಮರಣಿಯರು, ನುಡಿದಂತೆ ನಡೆದು ತೋರಿಸಿದರು, ಹಾಗಾಗಿ ಅವರನ್ನು ಇಡೀ ವಿಶ್ವವೇ ಸ್ಮರಿಸುತ್ತಿದೆ, ನನ್ನ ಕ್ಷೇತ್ರದಲ್ಲಿ ಇಷ್ಟೊಂದು ಶಾಲೆಗಳ ಅಭಿವೃದ್ಧಿಗೆ ಸ್ಪೂರ್ತಿ ನೀಡಿದವರೆ ಸಿದ್ದಗಂಗಾ ಶ್ರೀಗಳು, ಹಿಮಾಲಯದ ಗಂಗೆಯಷ್ಟೇ ಪವಿತ್ರವಾದವರು, ಹಾಗಾಗಿ ಪ್ರತಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ, ನನಗೆ ಸಿದ್ದಗಂಗಾ ಶ್ರೀಗಳು ರಾಜಗುರುಗಳಾದರೆ, ಬಿ.ಎಸ್.ಯಡಿಯೂರಪ್ಪ ರಾಜಕೀಯ ಗುರುಗಳು, ಅವರ ಮಾರ್ಗದರ್ಶನದಂತೆ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ತಂದಿದ್ದೇನೆ, ಹಾಗೆಯೇ ಉದ್ದಾನ ಶಿವಯೋಗಿಗಳಿಂದ ನಿರ್ಮಾಣವಾಗಿರುವ ಕೆರೆ ತುಂಬಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ‘ರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹರಳೂರು ಜಂಗಮ ಮಠದ ಚನ್ನಬಸವ ಸ್ವಾಮೀಜಿ, ಕಂಬಾಳು ಶ್ರೀವೀರ ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ಡಾ.ಲಕ್ಷ್ಮಣದಾಸ್, ವೈ.ಹೆಚ್.ಹುಚ್ಚಯ್ಯ, ಕೆ.ಎಸ್.ಶಂಕರಯ್ಯ, ಹರಳೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಹೆಚ್.ಕುಮಾರಯ್ಯ, ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ನಿರ್ದೇಶಕ ಹೆಚ್.ಕೆ.ರೇಣುಕಾಪ್ರಸಾದ್, ಹರಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ರಸಾದ್.ಹೆಚ್.ಕೆ., ತುಮುಲ್ ಎಂ.ಡಿ. ಸುಬ್ರರಾಯ ಭಟ್, ವೀರಶೈವ ಸಮಾಜದ ಉಪಾಧ್ಯಕ್ಷ ಎಸ್.ಚಂದ್ರಮೌಳಿ, ಎಪಿಎಂಸಿ ಅಧ್ಯಕ್ಷ ಉಮೇಶ್ಗೌಡ, ಉಪಾಧ್ಯಕ್ಷ ಶಿವರಾಜು, ಸದಸ್ಯ ಎನ್.ಎಸ್.ಹೊನ್ನೇಶಕುಮಾರ್, ಉಮಾಶಂಕರ್, ಸಿದ್ದಗೌಡ, ಶ್ರೀವೀರಭದ್ರ ಸೇವಾ ಸಮಿತಿಯ ಗೌರವ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಮುತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!