ತುಮಕೂರು: ಜಾತಿ ನಾಯಕರಿಗೆ ಇರುವಂತಹ ಒಂದು ಸಿದ್ಧಾಂತಕ್ಕೆ ಜೋತು ಬೀಳುವ ಪದ್ಧತಿ ಸೈದ್ಧಾಂತಿಕ ವಲಯದಲ್ಲೂ ಇದ್ದು, ಸೈದ್ಧಾಂತಿಕ ದರ್ಶನಗಳನ್ನೇ ಹಿಡಿದುಕೊಂಡು ತಮ್ಮೊಳಗಿನ ಸ್ವಾರ್ಥಕ್ಕಾಗಿ ಪ್ರಕ್ರಿಯೆ ನಡೆಯುತ್ತಿರುವುದರಿಂದ, ವರ್ತಮಾನವನ್ನು ಅರ್ಥಮಾಡಿಕೊಂಡು ಒಂದು ಭವಿಷ್ಯವನ್ನು ಕಟ್ಟುವುದರ ಕಡೆ ಇವರ ನಿಲುವಿಲ್ಲ ಎಂದು ಚಿಂತಕ ಕೆ.ದೊರೈರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಟೌನ್ ಹಾಲ್ ವೃತ್ತದ ಐಎಂಎ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಗಾಂಧಿಕಥನ ಪುಸ್ತಕದ ಲೇಖಕರು ಹಾಗೂ ಸಮಾಜವಾದಿ ಡಿ.ಎಸ್.ನಾಗಭೂಷಣ ಅವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ಮನುಷ್ಯನು ಮಾನವೀಯತೆಯಿಂದ ಬದುಕುಲು ಆಗುವುದಿಲ್ಲ ಎಂದರೆ ವಿಚಾರವಾದ- ಸಮಾಜವಾದ ಎಲ್ಲಾ ಏಕೆ ಬೇಕು, ಅದನ್ನು ತಿಪ್ಪೆಗೆಸೆದು ತಲೆ ದಿಂಬಿಗೆ ಕೈಜೋಡಿಸಿಕೊಂಡು ಮಲಗಬಹುದಲ್ಲ, ಜಾತಿ ನಾಯಕರು ಇದ್ದಂತೆ ಈ ಸೈದ್ಧಾಂತಿಕ ನಾಯಕರು ನಾವು ತಿಳಿದಿರುವುದೇ ಸತ್ಯ ಎಂದು ಕೊಂಡರೆ ಒಂದು ಗಿಡದ ಎಲೆ ಹಿಡಿದುಕೊಂಡು ಈ ಎಲೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಬಿಟ್ಟರೆ, ಇಡೀ ಮರವನ್ನೇ ಅರ್ಥ ಮಾಡಿಕೊಂಡಂತೆ ಎಂಬ ವರ್ತನೆ ಮತ್ತು ಬದ್ಧತೆಗೆ ಸಮಗ್ರ ವಿಧಾನವಿರುವುದಿಲ್ಲ, ಅಲ್ಲದೆ ವಾಸ್ತವವನ್ನು ಒಪ್ಪಿಕೊಳ್ಳುವಾಗ ವಿಮರ್ಶೆಗೆ ಒಳಪಡಬೇಕು, ಬಸವಣ್ಣ, ಅಂಬೇಡ್ಕರ್ ಹೇಳಿದರು ಎಂದು ಅಪ್ಪಿಕೊಳ್ಳುವ ಮೊದಲು ವಿಮರ್ಶೆಗೆ ಒಳ ಪಡಿಸಿಕೊಂಡು ಹೊಸ ಅಲೋಚನೆಗಳನ್ನು ಕಟ್ಟುವ ಕಡೆ ಮಾರ್ಪಾಡು ಮಾಡಬೇಕೆಂದರು.
ಇಂದು ನಮ್ಮೆದುರಿಗೆ ನಮ್ಮೆಲ್ಲಾ ಚಿಂತನೆಗಳನ್ನು ಸುಡುತ್ತಿರುವ ಕಾಲಘಟ್ಟದಲ್ಲಿ ಇದನ್ನು ಹೇಗೆ ಬಗ್ಗು ಬಡಿಯಬೇಕು, ಇದನ್ನು ಏಕೀಕರಿಸಿ ನಮ್ಮ ಚಿಂತನೆಗಳನ್ನು, ಹೊಸ ಮನುಷ್ಯನನ್ನು ಹೇಗೆ ಕಟ್ಟ ಬಹುದು ಎಂಬುದರ ಬಗ್ಗೆ ಯೋಚಿಸಬೇಕಿದೆ, ಡಿ.ಎಸ್.ನಾಗಭೂಷಣ ಅವರು ನಡೆ- ನಡವಳಿಕೆ, ನುಡಿ ಮತ್ತು ಬದ್ಧತೆ ಯಡಿಯಲ್ಲೇ ಬದುಕಿದವರು, ನಾಗಭೂಷಣ ಅವರು ಎಂದೂ ನಿರಾಶವಾದಿಗಳಾಗದೆ ಬೀಜಗಳನ್ನು ನಾಟಿ ಮಾಡಿ ಹೋಗಿದ್ದಾರೆ, ಆ ನಿಟ್ಟಿನಲ್ಲಿ ನಾವು ಆ ಬೀಜಗಳನ್ನು ಮರವಾಗಿ ಬೆಳಸಬೇಕಿದೆ ಎಂದರು.
ಒಬ್ಬ ಲೋಹಿಯಾವಾದಿ ಗಾಂಧಿನ್ನು ಇಷ್ಟು ಆಪ್ತವಾಗಿ ಅಪ್ಪಿಕೊಳ್ಳಲು ಹೇಗೆ ಸಾಧ್ಯವಾಯಿತೆಂದರೆ ಲೋಹಿಯಾ ವಾದದಲ್ಲಿದ್ದ ಸಿಟ್ಟು, ಕ್ರೋಧ ಗಾಂಧಿವಾದದಲ್ಲಿರಲಿಲ್ಲ, ಆದ್ದರಿಂದ ಗಾಂಧಿ ನನಗೆ ಆಪ್ತವಾದರು ಎಂದು ನಾಗಭೂಷಣ ಅವರು ಹೇಳಿದ್ದಾರೆ, ನಾಗಭೂಷಣ ಅವರು ಇದ್ದದ್ದನ್ನು ಇದ್ದಂತೆ ಹೇಳುವವರು ಆಗಿದ್ದರೂ ತಬ್ಬಿಕೊಳ್ಳುವ ಮನುಷ್ಯ ಪ್ರೀತಿ ಅವರಲ್ಲಿತ್ತು ಎಂದು ದೊರೆರಾಜು ನುಡಿದರು.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗೀತಾವಸಂತ ಮಾತನಾಡಿ, ಡಿ.ಎಸ್.ನಾಗಭೂಷಣ ಅವರು ಕರ್ನಾಟಕದ ಭೌದ್ಧಿಕತೆಯನ್ನು ಕಟ್ಟಿದವರು, ಅವರಲ್ಲಿ ನಿಷ್ಠೂರತೆ, ಪ್ರಾಮಾಣಿಕತೆ, ಧೈರ್ಯ ಇತ್ತು, ಯಾರಿಗೂ ಅವರು ಹೆದರೆದೆ ಸಾಮಾಜಿಕ ಪ್ರಜ್ಞೆಯಿಂದ ಹರಿತವಾದ ಮಾತಿನ ಮೂಲಕವೆ ತಾಯ್ತನವನ್ನು ತೋರಿಸುತ್ತಿದ್ದರು, ನಾಗಭೂಷಣ ಅವರು ಪದ್ಯ, ಗದ್ಯ, ವಿಮರ್ಶೆಗಳನ್ನು ವಸ್ತುನಿಷ್ಠವಾಗಿ ಬರೆಯುತ್ತಿದ್ದರು ಎಂದರು.
ನುಡಿ ನಮನದಲ್ಲಿ ನರಸೀಯಪ್ಪ, ಕತೆಗಾರರಾದ ಮಿರ್ಜಾ ಬಶೀರ್, ಡಾ.ಅರುಂಧತಿ, ನಟರಾಜಪ್ಪ, ಎನ್.ನಾಗಪ್ಪ, ಗಂಗರಾಜಕ್ಕ, ಮಲ್ಲಿಕಾ ಬಸವರಾಜು, ಹೆಚ್.ವಿ.ಮಂಜುನಾಥ, ವೈ.ಕೆ.ಬಾಲಕೃಷ್ಣಪ್ಪ, ಬಿ.ಸಿ.ಶೈಲಾನಾಗರಾಜು, ಡಾ.ಹೆಚ್.ವಿ.ರಂಸ್ವಾಮಿ, ಡಾ.ಬಸವರಾಜು ಮಾತನಾಡಿದರು.
ಮಲ್ಲಿಕಾರ್ಜುನ ಹೊಸಪಾಳ್ಯ, ಹೆಚ್.ವಿ.ವೆಂಕಟಾಚಲ ಡಿ.ಎಸ್.ನಾಗಭೂಷಣ ಅವರ ಬಗ್ಗೆ ಡಾ.ವಡ್ಡಗೆರೆ ನಾಗರಾಜು ಬರೆದಿರುವ ಕವನ ವಾಚಿಸಿದರು. ವಿರೂಪಾಕ್ಷ ಡ್ಯಾಗೇರಹಳ್ಳಿ ವಂದಿಸಿದರು.
ಜಾತಿ ನಾಯಕರಿಗೆ ವರ್ತಮಾನ ಅರ್ಥವಾಗಲ್ಲ
Get real time updates directly on you device, subscribe now.
Comments are closed.