ತುಮಕೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗೆ ಭಡ್ತಿ ನೀಡಲು ಅಗತ್ಯ ಕ್ರಮ ವಹಿಸುವುದು ಹಾಗೂ ಈ ಹಿಂದೆ ನರೇಗಾ ಯೋಜನೆಯಲ್ಲಿ ಮಾಡಿದ ಕಾಮಗಾರಿಗಳ ಲೋಕಾಯುಕ್ತ ತನಿಖೆ ಹಿಂಪಡೆಯುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘನ ತುಮಕೂರು ಜಿಲ್ಲಾಧ್ಯಕ್ಷ ಆರ್.ನಾಗರಾಜು, ನಾವು ಸರಕಾರಕ್ಕೆ ಹಲವಾರು ದಿನಗಳಿಂದ ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಹಾಲಿ ಕೆಲಸ ಮಾಡುತ್ತಿರುವ ಪಿಡಿಓಗಳಿಗೆ ಮುಂಬಡ್ತಿ ನೀಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದೇವೆ, ಅಲ್ಲದೆ 2006- 07 ಮತ್ತು 2011- 12ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ನರೇಗಾ ಯೋಜನೆ ಕಾಮಗಾರಿಗಳ ತನಿಖೆಗಾಗಿ ಲೋಕಾಯುಕ್ತಕ್ಕೆ ಹಲವಾರು ಪ್ರಕರಣ ವಹಿಸಲಾಗಿದೆ, ಇದರಿಂದ ಪಿಡಿಓಗಳು ಸ್ಪೂರ್ತಿಯಿಂದ ಕೆಲಸ ಮಾಡಲು ಹಿಂದೇಟು ಹಾಕುವಂತಾಗಿದೆ, ಹಾಗಾಗಿ ಕೂಡಲೇ ಲೋಕಾಯುಕ್ತಕ್ಕೆ ವಹಿಸಿರುವ ಎಲ್ಲಾ ಪ್ರಕರಣ ಹಿಂಪಡೆಯಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಕಳೆದ 8 ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗ್ರೂಪ್ ಬಿ ಗೆ ಮೇಲ್ದರ್ಜೆಗೇರಿಸಲು ಒತ್ತಾಯ ಮಾಡುತ್ತಾ ಬರಲಾಗುತ್ತಿದೆ, ಆದರೆ ಸರಕಾರ ಇದುವರೆಗು ಯಾವುದೇ ತೀರ್ಮಾನ ಕೈಗೊಳ್ಳದೆ ನಿರ್ಲಕ್ಷ ಮಾಡಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಗ್ರಹವಾಗಿದೆ, ಹಾಗೆಯೇ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ನಿಯಮ ಜಾರಿಗೊಳಿಸಲು ಅಗತ್ಯ ಕ್ರಮವನ್ನು ಇಲಾಖೆ ಕೈಗೊಳ್ಳಬೇಕೆಂದರು, ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇವಾ ವಿಷಯವನ್ನು ಸಕಾಲ ವ್ಯಾಪ್ತಿಗೆ ತರಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಆರ್.ನಾಗರಾಜು ತಿಳಿಸಿದರು.
ಸರಕಾರ ಕೋವಿಡ್ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಕೊರೊನ ವಾರಿಯರ್ ಎಂಬ ಘೋಷಿಸಿದೆ, ಆದರೆ ಕಾರ್ಯ ನಿರ್ವಹಿಸುವಾಗ ಸೋಂಕು ತಗುಲಿ ಮೃತಪಟ್ಟ ಸಿಬ್ಬಂದಿಗೆ ಸರಕಾರ ಘೋಷಿಸಿದಂತೆ ಇದುವರೆಗೂ 30 ಲಕ್ಷ ರೂ. ಪರಿಹಾರ ನೀಡಿಲ್ಲ, ಕೂಡಲೇ ಸರಕಾರ ಕೊರೊನ ಸಂದರ್ಭದಲ್ಲಿ ಮೃತಪಟ್ಟ ಸಿಬ್ಬಂದಿಗೆ ಕೋವಿಡ್ ಪರಿಹಾರ ವಿತರಿಸಬೇಕೆಂಬುದು ನಮ್ಮ ಒಕ್ಕೋರಲ ಆಗ್ರಹವಾಗಿದೆ ಎಂದರು.
ಪಂಚಾಯತ್ ರಾಜ್ ಇಲಾಖೆಯಲ್ಲಿ ಅನ್ಯ ಇಲಾಖೆಗಳ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವುದರ ಜೊತೆಗೆ ಇಲಾಖೆಯಲ್ಲಿ ಖಾಲಿ ಇರುವ ಎಡಿ ಮತ್ತು ಇಓ ಹುದ್ದೆಗಳ ಪ್ರಭಾರವನ್ನು ಪಿಡಿಓಗಳಿಗೆ ವಹಿಸಬೇಕೆಂಬುದು ಪಿಓಡಿಗಳ ಒತ್ತಾಯವಾಗಿದೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವೇತನ ಶ್ರೇಣಿ ನಿಗದಿ ಹಾಗೂ ಪಂಚಾಯತ್ ರಾಜ್ಯ ವ್ಯವಸ್ಥೆ ಸುಗಮವಾಗಿ ಸಾಗಲು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಎಸ್ಡಿಎಎ ಹುದ್ದೆ ನೇಮಕ ಮಾಡಬೇಕೆಂಬುದು ರಾಜ್ಯದ ಪಿಡಿಓಗಳ ಒತ್ತಾಯವಾಗಿದೆ. ಸರಕಾರ ಈ ನಿಟ್ಟಿನಲ್ಲಿ ಮುಂದಿನ 15 ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಎಲ್ಲಾ ಪಿಡಿಓಗಳು ಒಗ್ಗೂಡಿ, ಪಂಚಾಯತ್ ರಾಜ್ ಸಿಬ್ಬಂದಿಯೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆರ್.ನಾಗರಾಜು ತಿಳಿಸಿದರು.
ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಮೇಲೆ ಬಾಕಿ ಇರುವ ಇಲಾಖಾ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸುವುದು ಹಾಗೂ ಬಿಲ್ ಕಲೆಕ್ಟರ್, ಡಿಇಓ ಹುದ್ದೆಯಿಂದ ಗ್ರೇಡ್ -2 ಕಾರ್ಯದರ್ಶಿ ಮತ್ತು ಎಸ್ಡಿಎಎ ಹುದ್ದೆ ಹಾಗೂ ಗ್ರೇಡ್ -2 ಕಾರ್ಯದರ್ಶಿ, ಎಸ್ಡಿಎಎ ಹುದ್ದೆಯಿಂದ ಗ್ರೇಡ್ -1 ಕಾರ್ಯದರ್ಶಿ ಹುದ್ದೆಗೆ , ಕಾರ್ಯದರ್ಶಿ- ಗ್ರೇಡ್ 1 ನಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆಳಿಗೆ ಭಡ್ತಿ ನೀಡುವ ಸಂಬಂಧ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಿಇಓ ಅವರಿಗೆ ಸಲ್ಲಿಸಲು, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ರಾಘವೇಂದ್ರ.ಕೆ.ಆರ್, ಉಪಾಧ್ಯಕ್ಷರಾದ ಧನಂಜಯ.ಹೆಚ್, ಪ್ರಭಾವತಿ.ಆರ್, ಸಂಘಟನಾ ಕಾರ್ಯದರ್ಶಿ ಗುರುಮೂರ್ತಿ.ಎಂ.ಬಿ, ಕೋಕಿಲ, ಸಾಂಸ್ಕೃತಿಕ ಕಾರ್ಯದರ್ಶಿ ಲತಾ, ಖಜಾಂಚಿ ಲೋಕೇಶ್.ಜಿ. ಮತ್ತು ರಾಜ್ಯ ಪರಿಷತ್ ಸದಸ್ಯ ಮಂಜುನಾಥ್.ಹೆಚ್.ಎಸ್. ಇನ್ನಿತರರು ಇದ್ದರು.
Get real time updates directly on you device, subscribe now.
Next Post
Comments are closed.