ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತರಲ್ಲ

ದಲಿತರ ಹೆಸರಿನಲ್ಲಿ ದೇಶ ಇಬ್ಬಾಗವಾಗುವುದನ್ನು ತಡೆದದ್ದು ಅಂಬೇಡ್ಕರ್

131

Get real time updates directly on you device, subscribe now.

ತುಮಕೂರು: ದಲಿತರ ಹೆಸರಿನಲ್ಲಿ ದೇಶ ಇಬ್ಬಾಗವಾಗುವುದನ್ನು ತಡೆದ ಅಂಬೇಡ್ಕರ್ ಒಬ್ಬ ಅಪ್ರತಿಮ ದೇಶಭಕ್ತ, ಆದರೆ ಆಂತಹವರನ್ನು ಒಂದು ವರ್ಗಕ್ಕೆ ಸಿಮೀತಗೊಳಿಸಿರುವುದು ದುರಾದೃಷ್ಟಕರ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ನಗರದ ಬಾಲಭವನದಲ್ಲಿ ಅಂಬೇಡ್ಕರ್ ಯುವ ಸೇನೆವತಿಯಿಂದ ಆಯೋಜಿಸಿದ್ದ ಭಗವಾನ್ ಬುದ್ದ, ಬಸವಣ್ಣ, ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರನ್ನು ಕೆಲವರು ಬ್ರಿಟಿಷರ ಏಜೆಂಟರು ಎಂದು ಕರೆಯುತ್ತಿದ್ದರು, ಇನ್ನೂ ಕೆಲವರು ಗಾಂಧಿಯ ವಿರೋಧಿ ಪಟ್ಟ ಕಟ್ಟಿದರು, ಆದರೂ ಎದೆಗುಂದದೆ ಈ ದೇಶದ ಉಳಿಗಾಗಿ ಹಲವಾರು ಹೋರಾಟ ನಡೆಸಿ, ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು ಎಂದರು.
ಜಯಂತಿಗಳಿಗೆ ಅರ್ಥ ಬರಬೇಕೆಂದರೆ ನಾವು ಬಾಬಾ ಸಾಹೇಬರ ಅಭಿಮಾನಿಗಳಾದರೆ ಸಾಲದು, ಅವರ ತತ್ವಾದರ್ಶಗಳನ್ನು ಪಾಲಿಸುವ ಅನುಯಾಯಿಗಳಾದಾಗ ಮಾತ್ರ ಸಾಧ್ಯ, ಇಂದು ದೇಶದ ಬಗ್ಗೆ ಚರ್ಚೆ ನಡೆಯುತ್ತಿಲ್ಲ.ಒಂದು ಇಲಾಖೆಯ ಅಧಿಕಾರಿಗಳು ಬದ್ಧತೆಯಿಲ್ಲದೆ ನಡೆದುಕೊಂಡಾಗ, ಸರ್ವಾಧಿಕಾರಿಯಂತೆ ವರ್ತಿಸಬೇಕಾಗುತ್ತದೆ ಎಂದು ತಾವು ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದ ಸಮಯವನ್ನು ನೆನಪು ಮಾಡಿಕೊಂಡು ಸಚಿವರು, ಇಂದಿಗೂ ದೇಶದ ಹಲವು ರಾಜ್ಯಗಳಲ್ಲಿ ಸಪಾಯಿ ಕರ್ಮಚಾರಿ ಆಯೋಗವಿಲ್ಲ, ಪರಿಶಿಷ್ಟ ಜಾತಿ ವರ್ಗಗಳ ಕಾರ್ಪೋರೇಷನ್ ಇಲ್ಲ, ಇಂದಿಗೂ ಸ್ವಾತಂತ್ರ ಪೂರ್ವದಲ್ಲಿ ದಲಿತರಿಗಾಗಿ ನಡೆಯುತ್ತಿದ್ದ ಪ್ರತ್ಯೇಕ ಶಾಲೆ, ಹಾಸ್ಟೆಲ್ಗಳು ಮುಂದುವರೆದಿವೆ, ಇದು ಬಸವಣ್ಣ, ಅಂಬೇಡ್ಕರ್ ಅವರ ಪರಿಕಲ್ಪನೆಯ ಭಾರತವೇ ಎಂದು ಸಚಿವರು ಪ್ರಶ್ನಿಸಿದರು.
ಶೋಷಿತರ ಅಂತರಾಳದ ನೋವುಗಳಿಗೆ ಇಂದಿನ ಮಾಧ್ಯಮಗಳಲ್ಲಿ ಬೆಲೆ ಇಲ್ಲದಂತಾಗಿದೆ, ದೇಶದ ಭವಿಷ್ಯ ಕುರಿತು ಯಾರು ಯೋಚಿಸುತ್ತಿಲ್ಲ, ಸ್ವಾರ್ಥ ತುಂಬಿದೆ, ಎಲ್ಲಿಯವರೆಗೆ ಹಣ, ಹೆಂಡ ಇನ್ನಿತರ ಆಮಿಷಗಳಿಗೆ ಯುವ ಜನರು ಬಲಿಯಾಗುತ್ತಾರೋ ಅಲ್ಲಿಯವರೆಗೆ ಇಂತಹ ಜಯಂತಿಗಳು ಅರ್ಥಪೂರ್ಣವೆನಿಸುವುದಿಲ್ಲ, ಹಾಗಾಗಿ ಯುವಜನತೆ ಭ್ರಷ್ಟಾಚಾರ ತಿರಸ್ಕರಿಸ ಬೇಕೆಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕರೆ ನೀಡಿದರು.
ಮಾಜಿ ಶಾಸಕ ಡಾ.ರಫಿಕ್ ಅಹಮದ್ ಮಾತನಾಡಿ, ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಅದ್ಭುತ ಕೊಡುಗೆ ಸಂವಿಧಾನ, ಆದರೆ ಇದುವರೆಗೂ ಅದು ಸಂಪೂರ್ಣ ಜಾರಿಯಾಗಿಲ್ಲ, ಈ ನಿಟ್ಟಿನಲ್ಲಿ ನಾವುಗಳೆಲ್ಲರೂ ಒಗ್ಗೂಡಬೇಕಿದೆ, ಎಲ್ಲಾ ಜನರಿಗೆ ಒಳಿತನ್ನು ಬಯಸುವ ಸಂವಿಧಾನದ ಉಳಿವಿಗೆ ಪಣ ತೊಡಬೇಕಾಗಿದೆ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ದೇಶದ ಶೋಷಿತ ಸಮುದಾಯಗಳು ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಹಲವಾರು ಕಷ್ಟಗಳ ನಡುವೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದರು, ಆದರೆ ಅವರು ಯಾವ ಸಮುದಾಯ ಅಭಿವೃದ್ಧಿ ಹೊಂದಬೇಕೆಂದು ಬಯಸಿದ್ದರೋ ಅದೇ ಸಮುದಾಯ ತದ್ವಿರುದ್ಧ ನಡವಳಿಕೆಯಲ್ಲಿ ತೊಡಗಿರುವುದು ವಿಪರ್ಯಾಸ, ಈಗಲಾದರೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬುದು ನಮ್ಮೆಲ್ಲರ ಆಶಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಾಮರಾಜ ನಗರದ ನಳಂದ ವಿಶ್ವವಿದ್ಯಾಲಯದ ಬೋದಿದತ್ತ ಮಹಾಥೆರಾ ಭಂತೇಜಿ ಮಾತನಾಡಿ, ಬುದ್ದ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಸಂದೇಶಗಳು ಇಡೀ ಜಗತ್ತಿಗೆ ಇಂದು ಅಗತ್ಯವಿದೆ, ಹಾಗಾಗಿ ಅಂಬೇಡ್ಕರ್ ಮತ್ತು ಬಸಣ್ಣನವರನ್ನು ಇಂಗ್ಲೆಂಡ್ ಜನತೆ ಗೌರವಿಸುತಿದ್ದಾರೆ, ಸಂವಿಧಾನವೆಂಬುದು ನಮ್ಮಲ್ಲರ ಪರಮಶ್ರೇಷ್ಠ ಗ್ರಂಥ, ಇದನ್ನು ಕೆಲವರು ಅರ್ಥ ಮಾಡಿಕೊಳ್ಳದೆ ಮೂರ್ಖರಂತೆ ಮಾತನಾಡುತ್ತಾರೆ,ಅಸ್ಪೃಷ್ಯತೆ ಎಂಬುದು ಜಾತಿಯ ಮೇಲೆ ನಿಂತಿಲ್ಲ, ಜಾತಿ, ಕುಲದಿಂದ ಅಸ್ಪೃಷ್ಯತೆ ಇಲ್ಲ, ನಡೆಯಿಂದ ಅಸ್ಪೃಷ್ಯತೆ ಇದೆ ಎಂಬುದು ಬುದ್ದ ಭಗವಾನರ ಸಂದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಾಹಾಪುರವಾಡ್, ಮಾಜಿ ಶಾಸಕ ಗಂಗಹನುಮಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್, ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಜಿ.ಗಣೇಶ್, ತುಮಕೂರು ವಿವಿ ಪ್ರಭಾರ ಕುಲಪತಿ ಡಾ.ಕೇಶವ್, ಸ್ಪೂರ್ತಿ ಡೆವಲಪ್ಪರ್ಸ್ನ ಚಿದಾನಂದ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮದ್, ಅಂಬೇಡ್ಕರ್ ಯುವ ಸೇನೆಯ ರಾಜ್ಯಾಧ್ಯಕ್ಷ ಕೌಶಲ್ಯಾ ಕೋದಂಡರಾಮ್, ವೈ.ಹೆಚ್.ಹುಚ್ಚಯ್ಯ, ಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಅಂಬೇಡ್ಕರ್ ಯುವಸೇನೆಯ ಉಪಾಧ್ಯಕ್ಷ ಡಾ.ಎನ್.ವಿಜಯ್, ಗೌರವಾಧ್ಯಕ್ಷ ಶಂಕರಪ್ಪ ಕೆ., ನನಸು ಪತ್ತಿನ ಸಹಕಾರ ಸಂಘದ ನಾಗಮಣಿ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!