ತುಮಕೂರು: ಸ್ಮಾರ್ಟ್ಸಿಟಿ ಯೋಜನೆಯಡಿ ಭೀಮಸಂದ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರ ಕಟ್ಟಡವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಉದ್ಘಾಟಿಸಿದರು.
ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಕ್ಕಳಿಗೆ ಸಿಹಿ ಹಂಚಿದ ಬಳಿಕ ಮಾತನಾಡಿ, ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆ ಕೇವಲ ನಗರ ಮತ್ತು ದೊಡ್ಡ ದೊಡ್ಡ ಬಿಲ್ಡಿಂಗ್ ಗೆ ಮಾತ್ರ ಸೀಮಿತ ಎಂದು ಕೆಲವರು ಹೇಳುತ್ತಿದ್ದರು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭೀಮಸಂದ್ರ ಗ್ರಾಮದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕವಾಗಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಿರುವುದು ಗ್ರಾಮದ ಜನತೆ ಮತ್ತು ತಮಗೂ ಖುಷಿ ತಂದಿದೆ, ಈ ಗ್ರಾಮಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 12 ರಿಂದ 15 ಲಕ್ಷ ರೂ. ವಿನಿಯೋಗಿಸಲಾಗಿದೆ. ಹಾಗೆಯೇ ತುಮಕೂರು ನಗರದಲ್ಲೂ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ 5 ರಿಂದ 6 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ತುಮಕೂರು ನಗರ ಸೇರಿದಂತೆ ವಿವಿಧೆಡೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿವೆ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಆಟವಾಡಲು ಸಹ ಜಾಗವಿಲ್ಲ, ಆಟ, ಪಾಠ ಎಲ್ಲವೂ ಒಂದೇ ಕಡೆ ನಡೆಯುತ್ತಿರುವುದರಿಂದ ಅಂಗನವಾಡಿ ಶಿಕ್ಷಕರು ಹಾಗೂ ಮಕ್ಕಳಿಗೂ ತೀವ್ರ ತೊಂದರೆಯಾಗುತ್ತಿದೆ, ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂಗನವಾಡಿ ನಿರ್ಮಾಣ ಮಾಡಿರುವುದು ತುಂಬಾ ಅನುಕೂಲವಾಗಿದೆ ಎಂದರು.
ಎಷ್ಟೋ ಜನ ಕೆಲಸಕ್ಕೆ ಹೋಗುವುದರಿಂದ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ, ದೊಡ್ಡ ದೊಡ್ಡ ಶ್ರೀಮಂತರು ಸಹ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವಂತಾಗಬೇಕಾದರೆ ಇಂತಹ ಅತ್ಯಾಧುನಿಕ ಅಂಗನವಾಡಿ ಕೇಂದ್ರಗಳ ನಿರ್ಮಾಣ ಅಗತ್ಯವಾಗಿದೆ ಎಂದರು.
ಅಂಗನವಾಡಿ ಕೇಂದ್ರಗಳ ನಿರ್ಮಾಣದ ಕ್ರೆಡಿಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ಸಿಂಗ್ ಅವರಿಗೆ ಸಲ್ಲಬೇಕು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಅಂಗನವಾಡಿ ಕೇಂದ್ರವನ್ನು ಉತ್ತಮವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ವೀಣಾ ಮನೋಹರಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹಾಗೂ ಭೀಮಸಂದ್ರ ಗ್ರಾಮಸ್ಥರು ಹಾಜರಿದ್ದರು.
ಭೀಮಸಂದ್ರದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ
Get real time updates directly on you device, subscribe now.
Prev Post
Next Post
Comments are closed.