ಡೀಸಿ ನಡೆ ಹಳ್ಳಿ ಕಡೆ ಗ್ರಾಮೀಣರಿಗೆ ಅನುಕೂಲ

ಇಲಾಖೆಗಳ ಯೋಜನೆ ಪಡೆಯಲು ಕಾರ್ಯಕ್ರಮ ಸಹಕಾರಿ: ರಾಜೇಶ್ ಗೌಡ

171

Get real time updates directly on you device, subscribe now.

ಶಿರಾ: ಸರ್ಕಾರದ ಯೋಜನೆಗಳು, ಮೂಲಭೂತ ಸೌಕರ್ಯ ನೇರವಾಗಿ ಫಲಾನುಭವಿಗಳಿಗೆ, ನಾಗರಿಕರಿಗೆ ತಲುಪಬೇಕು ಎಂಬುದು ಸರ್ಕಾರದ ಆಶಯವಾಗಿದೆ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯಕಡೆ ಕಾರ್ಯಕ್ರಮ ಈ ದಿಸೆಯಲ್ಲಿ ಸರ್ಕಾರದ ವಿನೂತನ ಪರಿಕಲ್ಪನೆಯಾಗಿದ್ದು, ಸಂಧ್ಯಾ ಸುರಕ್ಷ, ಅಂಗವಿಕಲ, ವಿಧವಾ ವೇತನ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆ ಪಡೆಯಲು ಅರ್ಹ ಫಲಾನುಭವಿಗಳಿಗೆ ಇದೊಂದು ಸೂಕ್ತ ವೇದಿಕೆಯಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದರು.

ತಾಲ್ಲೂಕಿನ ಹುಲಿಕುಂಟೆ ಹೋಬಳಿ ತಡಕಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕನಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ತೆರಳಿ ಗ್ರಾಮೀಣ ಭಾಗದಲ್ಲಿ ಇರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲು ಕಾರ್ಯಕ್ರಮ ರೂಪಿಸಲಾಯಿತು, ಕಂದಾಯ ಇಲಾಖೆ ಸೇರಿ ಯಾವುದೇ ಇಲಾಖೆಯ ಸಮಸ್ಯೆಗಳಿದ್ದಲ್ಲಿ ಈ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ತ್ವರಿತಗತಿಯಲ್ಲಿ ಪಿಂಚಣಿ ವ್ಯವಸ್ಥೆ ಕಲ್ಪಿಸುವ, ಕಂದಾಯ ದಾಖಲೆಗಳಾದ ಸ್ಕೆಚ್, ನಕಾಶೆ ಒದಗಿಸುವ ಕೆಲಸವನ್ನು ಸರ್ಕಾರ ಶೀಘ್ರಗತಿಯಲ್ಲಿ ಮಾಡುತ್ತಿದೆ ಎಂದರಲ್ಲದೆ, ತಾಲ್ಲೂಕಿನಲ್ಲಿ ಮದಲೂರು ಕೆರೆಗೆ ನೀರು ಹರಿಸಿದ ಪರಿಣಾಮ ಅಂತರ್ಜಲ ವೃದ್ಧಿಯಾಗಿ ಎಲ್ಲೆಡೆ ಹಸಿರು ನಳನಳಿಸುತ್ತಿದೆ, ಬಗರ್ ಹುಕುಂ ಸಾಗುವಳಿ ಸಮಿತಿಯಲ್ಲಿ ಸಾಗುವಳಿ ಹಕ್ಕುಪತ್ರ ಅರ್ಜಿಗಳ ಕುರಿತು ಚರ್ಚಿಸಿ, ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ, ಶಿರಾ ತಾಲ್ಲೂಕಿಗೆ ಒಂದು ಸಾವಿರ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ವಸತಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಿರಾ- ಅಮರಾಪುರ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಸುಮಾರು 75 ಕೋಟಿ ರೂ. ಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರಲ್ಲದೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ತಾಲ್ಲೂಕು ಕೇಂದ್ರವಾದ ಶಿರಾದಲ್ಲಿ ವಿಭಾಗೀಯ ಕಚೇರಿ ತೆರೆಯಲು ಇಂಧನ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ, ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯಲ್ಲಿ ಶಿರಾ ತಾಲ್ಲೂಕು ಎರಡನೇ ಸ್ಥಾನದಲ್ಲಿದ್ದು, ತಾಲ್ಲೂಕಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರೇಷ್ಮೆ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ಈ ಹಿಂದೆ ಹಳ್ಳಿಯ ಜನ ಸಮಸ್ಯೆಗಳ ಇತ್ಯರ್ಥಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುತ್ತಿದ್ದರು, ಇಂದು ಜಿಲ್ಲಾಧಿಕಾರಿಗಳೇ ಹಳ್ಳಿಯ ಕಡೆ ಬಂದು ಸಮಸ್ಯೆ ಇತ್ಯರ್ಥ ಪಡಿಸಲು ಬಂದಿದ್ದಾರೆ, ರೈತರು, ನಾಗರಿಕರು ತಮ್ಮ ಗ್ರಾಮದ ಹಾಗೂ ತಮ್ಮ ವೈಯಕ್ತಿಕ ಸಮಸ್ಯೆ ಇತ್ಯರ್ಥಗೊಳಿಸಬಹುದು, ಇದು ಕೇವಲ ಕಂದಾಯ ಇಲಾಖೆಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಲ್ಲ ಎಂದ ಅವರು, ಅನ್ನದಾತ ರೈತನ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಮಾತೃ ಇಲಾಖೆಯಾದ ಕಂದಾಯ ಇಲಾಖೆಯ ಮೂಲಕ ಪರಿಹಾರ ಕಂಡು ಕೊಳ್ಳಬಹುದಾಗಿದೆ ಎಂದರು.
ತೆಂಗಿನ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ವೇದಿಕೆಯ ಮುಂಭಾಗದಲ್ಲಿ ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆದು ತಮ್ಮ ಇಲಾಖೆಗಳ ಯೋಜನೆ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಯೋಜನೆಗಳ ಪ್ರಯೋಜನ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳ ಬಗ್ಗೆ ಮಾಹಿತಿ ಫಲಕ ಅಳವಡಿಸಿ ಮಾಹಿತಿ ನೀಡಿದರು.
ಕಂದಾಯ ಇಲಾಖೆ ವತಿಯಿಂದ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಸೇರಿದಂತೆ ವಿವಿಧ ರೀತಿಯ ಮಾಸಾಶನ ಮಂಜೂರಾತಿ ಪತ್ರಗಳನ್ನು ಸಾಂಕೇತಿಕವಾಗಿ ಈ ಸಂದರ್ಭ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ವಿತರಿಸಿದರು. ಕಾರ್ಮಿಕ ಇಲಾಖೆಯಿಂದ 5 ಜನ ಫಲಾನುಭವಿ ಕಾರ್ಮಿಕರಿಗೆ ಮಷಿನ್ ಟೂಲ್ ಕಿಟ್ ಮತ್ತು ಮೆಡಿಸಿನ್ ಕಿಟ್ಗಳನ್ನು ನೀಡಲಾಯಿತು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 2021-22ನೇ ಸಾಲಿನ ಅಂಬೇಡ್ಕರ್, ಬಸವ ವಸತಿ ಯೋಜನೆಗಳ 10 ಫಲಾನುಭವಿಗಳಿಗೆ ಕಾಮಗಾರಿ ಆರಂಭಕ್ಕೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ರೈತರು, ನಾಗರಿಕರು ತಮ್ಮ ಅಹವಾಲುಗಳನ್ನು ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿಗಳ ಬಳಿ ತೆರಳಿ ಸಲ್ಲಿಸಿದರು, ಅಹವಾಲುಗಳನ್ನು ಸ್ವೀಕರಿಸಿ ಮನವಿ ಆಲಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಶೀಘ್ರವಾಗಿ ಜನರ ಸಮಸ್ಯೆ ಇತ್ಯರ್ಥಗೊಳಿಸುವಂತೆ ಸೂಚಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಿಮಿತ್ತ ಜಿಲ್ಲೆಯ ಗಡಿ ಗ್ರಾಮ ಲಕ್ಕನಹಳ್ಳಿಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಿದ ಗ್ರಾಮಸ್ಥರು ಎತ್ತಿನಗಾಡಿಯ ಮೇಲೆ ಮೆರವಣಿಗೆ ಮೂಲಕ ವೇದಿಕೆ ವರೆಗೂ ಕರೆದೊಯ್ದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಎಂ.ಮಮತ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!