ಕೋಡಿಹಳ್ಳಿ ಚಂದ್ರಶೇಖರ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

170

Get real time updates directly on you device, subscribe now.

ತುಮಕೂರು: ರೈತ ಸಂಘದ ಹೆಸರಿನಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರ ಹೋರಾಟ ನಿಲ್ಲಿಸಲು ಕಿಕ್ಬ್ಯಾಕ್ ಪಡೆದು, ಚಳವಳಿಯ ಹೆಸರಿಗೆ ಮಸಿ ಬಳಿದಿರುವ ಸ್ವಯಂ ಘೋಷಿತ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿಸಬೇಕು ಹಾಗೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಗರದ ಸ್ವಾತಂತ್ರ ಚೌಕದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಫೋಟೋ ಸುಟ್ಟು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯಕರ್ತರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸುವಂತೆ, ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಈ ಸಂಬಂಧ ಮನವಿಯನ್ನು ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಸಲ್ಲಿಸಿದರು.
ಈ ವೇಳೆ ಕೆ.ಎಸ್.ಆರ್.ಎಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ, ಹಲವಾರು ರೈತರು, ಹೋರಾಟ ಗಾರರು, ಪ್ರಗತಿಪರ ಚಿಂತಕರ ತ್ಯಾಗ ಬಲಿದಾನದಿಂದ ರೈತ ಸಂಘ ಉದಯವಾಗಿದೆ, ಇದಕ್ಕಾಗಿ ಪ್ರೊ.ನಂಜುಂಡಸ್ವಾಮಿ, ಎಂ.ಡಿ.ಸುಂದರೇಶ್, ಹೆಚ್.ಎಸ್.ರುದ್ರಪ್ಪ, ಕೆ.ಎಸ್.ಪುಟ್ಟಣ್ಣಯ್ಯ, ಕಡಿದಾಳ ಶಾಮಣ್ಣ, ಸುರೇಶಬಾಬು ಸೇರಿದಂತೆ ಹಲವಾರು ನಾಯಕರ ಬದ್ದತೆಯಿಂದ ನೂರಾರು ಹೋರಾಟ ಮಾಡಿ, ಸರಕಾರದಿಂದ ಜನರಿಗೆ ನ್ಯಾಯ ಒದಗಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಇಂತಹ ಸಂಘಟನೆಗೆ ಬಂದು ಸೇರಿಕೊಂಡ ಕೋಡಿಹಳ್ಳಿ ಚಂದ್ರಶೇಖರ್ ಎಂಬ ಸ್ವಾರ್ಥಿಯ ನಡೆ ನುಡಿ ಗಮನಿಸಿದ ಸಂಘ 2011ರಲ್ಲಿ ಅವರನ್ನು ರೈತ ಸಂಘದಿಂದ ಉಚ್ಚಾಟಿಸಿತ್ತು, ಆ ನಂತರ ನಾನೇ ರೈತ ಸಂಘದ ರಾಜ್ಯಾಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತಿದ್ದಾರೆ ಎಂದು ದೂರಿದರು.
ಕೋವಿಡ್ ಸಂದರ್ಭದಲ್ಲಿ ವೇತನವಿಲ್ಲದ ಪ್ರತಿಭಟನೆಗೆ ಇಳಿದ ಕೆ.ಎಸ್.ಆರ್.ಟಿ.ಸಿ ನೌಕರರ ಪ್ರತಿಭಟನೆ ಪ್ರವೇಶಿಸಿ, ಸಂಘಟನೆಯ ಗೌರವಾಧ್ಯಕ್ಷನಾಗಿ 2 ತಿಂಗಳ ಕಾಲ ಪ್ರತಿಭಟನೆ ನಡೆಸಿ, ಹಲವಾರು ನೌಕರರು ವಜಾಗೊಳ್ಳಲು, ಹಲವಾರು ಶಿಕ್ಷಾತ್ಮಕ ವರ್ಗಾವಣೆಗೆ ಕಾರಣನಾಗಿದ್ದಾನೆ, ಅಲ್ಲದೆ 30 ಕೋಟಿ ರೂ. ಡೀಲ್ ನಡೆಸಿ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾನೆ, ಹಾಗಾಗಿ ಸದರಿ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಇದು ರೈತ ಸಂಘದ ಸ್ವಾಭಿಮಾನದ ಹೋರಾಟ, ರೈತರು ಸರಕಾರ, ಸಂಘ ಸಂಸ್ಥೆಗಳ ವಿರುದ್ಧ ಹೋರಾಟ, ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ, ಆದರೆ ರೈತ ಸಂಘವೇ ರೈತರ ಹೆಸರಿನಲ್ಲಿ ಹಸಿರು ಶಾಲು ಹಾಕಿ, ಜನರಿಗೆ ಮೋಸ ಮಾಡಿರುವ ಕೋಡಿಹಳ್ಳಿ ಚಂದ್ರಶೇಖರ್ ಎಂಬ ವ್ಯಕ್ತಿಯ ವಿರುದ್ಧ ಹೋರಾಟ ನಡೆಸಬೇಕಾಗಿರುವುದು ದುರಂತ, ಸರಕಾರ ಕೂಡಲೇ ಅವರನ್ನು ಬಂಧಿಸಬೇಕು ಹಾಗೂ ಆತನ ಹೆಗಲ ಮೇಲಿರುವ ಹಸಿರು ಟವಲ್ ತೆಗೆಸಬೇಕೆಂಬುದು ನಮ್ಮ ಹೋರಾಟವಾಗಿದೆ, ಸರಕಾರ ಕೂಡಲೇ ಆತನನ್ನ ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, 1980 ರಲ್ಲಿ ಹಲವಾರು ಮಹನೀಯರ ಒಮ್ಮತದ ತೀರ್ಮಾನದಂತೆ ಆರಂಭವಾದ ರೈತ ಸಂಘ, ತನ್ನ 42 ವರ್ಷಗಳ ಇತಿಹಾಸದಲ್ಲಿಯೇ ಬಡವರ ಪರ ಹೋರಾಟ ನಡೆಸುತ್ತಾ, ಅವರಿಗೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಿದೆ. ಕೆ.ಎಸ್.ಆರ್.ಟಿ.ಸಿ ನೌಕರರ ಹೋರಾಟದ ಮುಂದಾಳತ್ವ ವಹಿಸಿಕೊಂಡ ಕೋಡಿಹಳ್ಳಿ ಚಂದ್ರಶೇಖರ್, ಡೀಲ್ ಗೆ ಒಳಗಾಗುವ ಮೂಲಕ ಹೋರಾಟಗಾರರಿಗೆ ಮಸಿ ಬಳಿದಿದ್ದಾರೆ, ಇದು ಖಂಡನೀಯ, ಸರಕಾರ ಕೂಡಲೇ ಇವರ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಬೇಕು, ಹಾಗೆಯೇ ಕೋಡಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಮೇಲಿರುವ ಆರೋಪದಿಂದ ಮುಕ್ತರಾಗುವವರೆಗೆ ಹೆಗಲ ಮೇಲಿರುವ ಹಸಿರು ಟವಲ್ ತೆಗೆಯಬೇಕೆಂಬುದು ನಮ್ಮ ಒತ್ತಾಯವಾಗಿದೆ, ಕಳೆದ 42 ವರ್ಷಗಳಲ್ಲಿ ಸುಮಾರು 142 ಕ್ಕೂ ಹೆಚ್ಚು ರೈತ ನಾಯಕರು ಹುತಾತ್ಮರಾಗಿದ್ದಾರೆ, ಅವರ ತ್ಯಾಗವನ್ನು ಅಣಕಿಸಿದಂತಾಗುತ್ತದೆ, ಹಾಗಾಗಿ ಸರಕಾರ ಕೂಡಲೇ ಇವರು ವಿರುದ್ಧ ತನಿಖೆ ನಡೆಸಿ, ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ವಿವಿಧ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜು ಮಧುಗಿರಿ, ಚಿಕ್ಕಬೋರೇಗೌಡ ತುಮಕೂರು, ಸಿ.ಜೆ.ಲೋಕೇಶ್ ಗುಬ್ಬಿ, ಪಾವಗಡ ತಾಲೂಕು ಅಧ್ಯಕ್ಷ ಪೂಜಾರಪ್ಪ, ಪ್ರಧಾನ ಕಾರ್ಯದರ್ಶಿ ನರಸಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!