ಕುಣಿಗಲ್: ತಮ್ಮೂರಿನ ಯುವಕನ ಸಮಸ್ಯೆ ಕುರಿತು ಠಾಣೆಗೆ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯನಿಗೆ ಪಿ.ಎಸ್.ಐ ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯಶಬ್ದಗಳಿಂದ ನಿಂದಿಸಿ ಠಾಣೆಯಿಂದ ಹೊರ ಹಾಕಿದ್ದಾರೆಂದು ಆರೋಪಿಸಿ ಗ್ರಾಪಂ ಸದಸ್ಯರು, ಬೆಂಬಲಿಗರು, ಬಿಜೆಪಿ ಮುಖಂಡರು ಕುಣಿಗಲ್ ಪೊಲೀಸ್ ಠಾಣೆ ಮುಂದೆ ದಿಡೀರ್ ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಪಿ.ಎಸ್.ಐ ಮೇಲೆ ಕ್ರಮಕ್ಕೆ ಆಗ್ರಹಿಸಿದರು.
ಶನಿವಾರ ಬೆಳಗ್ಗೆ ಹನ್ನೊಂದು ಗಂಟೆ ವೇಳೆಯಲ್ಲಿ ಬೇಗೂರು ಗ್ರಾಮ ಪಂಚಾಯಿತಿ ಸದಸ್ಯ ನಾಗಾನಂದ ತಮ್ಮೂರಿನ ಯುವಕನ ಸಮಸ್ಯೆ ಬಗ್ಗೆ ದೂರು ನೀಡಲು ಕುಣಿಗಲ್ ಠಾಣೆಗೆ ಆಗಮಿಸಿದಾಗ ಠಾಣೆಯಲ್ಲಿದ್ದ ಪಿ.ಎಸ್.ಐ ಲಕ್ಷ್ಮಣ, ತಮ್ಮ ಅನುಮತಿ ಇಲ್ಲದೆ ಠಾಣೆಯೊಳಗೆ ಬಂದಿದ್ದನ್ನು ಆಕ್ಷೇಪಿಸಿ ಗ್ರಾಪಂ ಸದಸ್ಯನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೇದೆಯೊಬ್ಬರ ಮೂಲಕ ಠಾಣೆಯಿಂದ ಬಲವಂತವಾಗಿ ಹೊರ ಹಾಕಿದರು ಎನ್ನಲಾಗಿದೆ. ಗ್ರಾಪಂ ಸದಸ್ಯ ನಾಗಾನಂದ್ ಸೌಮ್ಯತೆಗೆ ಹೆಸರಾಗಿದ್ದ ವ್ಯಕ್ತಿಯಾಗಿದ್ದು, ಇವರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿದ ಗ್ರಾಮದ ಯುವಕ ವಿಷಯವನ್ನು ಗ್ರಾಮಸ್ಥರು, ಮುಖಂಡರಿಗೆ ತಿಳಿಸಿದರು.
ನಾಗಾನಂದ್ ಬೆಂಬಲಿಸಿ ಪಕ್ಷಾತೀತವಾಗಿ ನೂರಾರು ಮಂದಿ ಠಾಣೆ ಮುಂದೆ ಜಮಾಯಿಸಿ ಪಿ.ಎಸ್.ಐ ಲಕ್ಷ್ಮಣ್ನನ್ನು ಕೂಡಲೆ ಅಮಾನತು ಮಾಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿ ಪೊಲೀಸ್ ಠಾಣೆಯಿಂದ ಹೊರ ಹಾಕಿದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ್, ಪ್ರಮುಖರಾದ ರಮೇಶ, ಕೃಷ್ಣ, ದೇವರಾಜ, ಸುರೇಶ್, ಆನಂದಕುಮಾರ್, ಶಿವರಾಮ, ಸುನಿಲ್ ಇತರರು ಪ್ರತಿಭಟನೆ ಬೆಂಬಲಿಸಿ ಕ್ರಮಕ್ಕೆ ಆಗ್ರಹಿಸಿದರು. ಸಿಪಿಐ ಗುರುಪ್ರಸಾದ್, ಡಿ.ವೈ.ಎಸ್.ಪಿ ರಮೇಶ್ ಪ್ರತಿಭಟನಾಕಾರರ ಮನ ಒಲಿಸಲು ಮುಂದಾದರೂ ಪ್ರತಿಭಟನಾಕಾರರು ಜಗ್ಗದೆ ಪೊಲೀಸ್ ಠಾಣೆಯಲ್ಲಿ ಕೆಲ ಸಿಬ್ಬಂದಿ ಸಾರ್ವಜನಿಕರೊಂದಿಗೆ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದಾರೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಅನ್ನೋದೆ ಮರೆತಿದ್ದಾರೆ, ದೌರ್ಜನ್ಯ ನಡೆಸಿದ ಪಿ.ಎಸ್.ಐ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.
ಮಧ್ಯಾಹ್ನ ಮೂರುಗಂಟೆ ಸಮಯಕ್ಕೆ ಪಿ.ಎಲ್.ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಡಿ.ವೈ.ಎಸ್.ಪಿ ನೇತೃತ್ವದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಗ್ರಾಪಂ ಸದಸ್ಯ ನಾಗಾನಂದ, ಗ್ರಾಪಂ ಅಧ್ಯಕ್ಷರ ಚುನಾವಣೆ ವೇಳೆಯಲ್ಲಿ ಪಿ.ಎಸ್.ಐ ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡರು ನಾವು ಪ್ರಶ್ನಿಸಲಿಲ್ಲ, ಆದರೆ ಇಂದು ಏಕಾಏಕಿ ಹಲ್ಲೆ ಮಾಡಿದ್ದು ಸರಿಯಲ್ಲ, ಏಕಾಏಕಿ ಹಲ್ಲೆ ಮಾಡುವಂತ ತಪ್ಪೇನು ಮಾಡಿದ್ದೇನೆ ಎಂದು ಪ್ರಶ್ನಿಸಿದರು. ಡಿ.ಕೃಷ್ಣಕುಮಾರ್, ಪೊಲೀಸ್ ಸಿಬ್ಬಂದಿ ಕೆಲ ಸಮಯದಲ್ಲಿ ಸರಿಯಾಗಿ ವರ್ತಿಸುತ್ತಿಲ್ಲ, ದೂರು ನೀಡಲು ಬಂದರೆ ಸ್ವೀಕರಿಸೊಲ್ಲ, ಈ ಘಟನೆಗೆ ಸಂಬಂಧಿಸಿದಂತೆ ಪಿ.ಎಸ್.ಐ ತಪ್ಪು ಮಾಡಿದ್ದಾರೆ ಕ್ರಮ ಕೈಗೊಳ್ಳಿ, ಅಮೃತೂರು ಠಾಣೆಯಲ್ಲೂ ದೂರು ಸ್ವೀಕಾರ ಮಾಡುತ್ತಿಲ್ಲ ಗಮನಹರಿಸಿ ಎಂದು ಆಗ್ರಹಿಸಿದರು. ಡಿ.ವೈ.ಎಸ್.ಸಿ ರಮೇಶ್, ಸದರಿ ಪಿ.ಎಸ್.ಐ ಮೇಲೆ ಇಲಾಖೆ ನಿಯಾಮನುಸಾರ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಗ್ರಾಪಂ ಸದಸ್ಯನ ಮೇಲೆ ಪಿ.ಎಸ್.ಐ ಹಲ್ಲೆ- ಠಾಣೆ ಮುಂದೆ ಪ್ರತಿಭಟನೆ
Get real time updates directly on you device, subscribe now.
Next Post
Comments are closed.