ಸರ್ಕಾರಿ ಆಸ್ಪತ್ರೆ ಅಧ್ವಾನಕ್ಕೆ ನ್ಯಾಯಾಧೀಶರ ಗರಂ

310

Get real time updates directly on you device, subscribe now.

ಗುಬ್ಬಿ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ನ್ಯಾಯಾಧೀಶರಾದ ಮಂಜುಳಾ ಉಂಡಿ ಶಿವಪ್ಪ ಹಾಗೂ ವಿನುತ ಅವರು ಸೋಮವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಕಾಯುತ್ತಿದ್ದ ರೋಗಿಗಳು ಆಸ್ಪತ್ರೆಯ ಅವ್ಯವಸ್ಥೆ ಹಾಗೂ ವೈದ್ಯರ ಬಗ್ಗೆ ದೂರಿನ ಸುರಿ ಮಳೆ ಗೈದರು. ವೈದ್ಯರು ಆಸ್ಪತ್ರೆಗೆ ಬರುವ ಹಾಗೂ ಹೋಗುವ ವೇಳೆಯೇ ರೋಗಿಗಳಿಗೆ ತಿಳಿಯುತ್ತಿಲ್ಲ, ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೋ ದೇವರೇ ಬಲ್ಲ ಎಂದು ರೋಗಿಗಳು ನೇರವಾಗಿಯೇ ಆಸ್ಪತ್ರೆಯ ವೈದ್ಯರ ವಿರುದ್ಧ ದೂರು ನೀಡಿದರು.
ತಾಲ್ಲೂಕು ಆಸ್ಪತ್ರೆಯಾಗಿದ್ದರೂ ಅನೇಕ ಸಮಸ್ಯೆಗಳ ಕೂಪವಾಗಿದೆ, ದೂರದ ಊರುಗಳಿಂದ ಬಂದಿದ್ದರೂ ಸುಮ್ಮನೆ ಕಾಯಿಸುತ್ತಾರೆ ಎಂದು ದೂರಿದರು. ನ್ಯಾಯಾಧೀಶರು ಭೇಟಿ ನೀಡಿದ್ದ ವೇಳೆ ಯಾವ ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದ್ದನ್ನು ಕಂಡು ವೈದ್ಯಾಧಿಕಾರಿಗಳ ಮೇಲೆ ಸಿಟ್ಟಾದರು.
ಗ್ರಾಮೀಣ ಭಾಗದ ರೋಗಿಗಳು, ವಿಶೇಷ ಚೇತನರು ,ಬಾಣಂತಿ, ಮಕ್ಕಳು ಹಾಗೂ ವೃದ್ಧರಿಗೆ ತಕ್ಷಣ ಸ್ಪಂದಿಸಿ ಚಿಕಿತ್ಸೆ ಒದಗಿಸುವಂತೆ ಸೂಚಿಸಿದರು.
ತಾಲ್ಲೂಕು ಮಟ್ಟದ ಆಸ್ಪತ್ರೆಯಾಗಿದ್ದರೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳಿಸುತ್ತಿರುವ ಬಗ್ಗೆ ನ್ಯಾಯಾಧೀಶರು ಗರಂ ಆದರು, ಉತ್ತಮ ಪ್ರಯೋಗಾಲಯ, ಕ್ಷ- ಕಿರಣ ಯಂತ್ರ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾಯಾಧೀಶರು ಆಸ್ಪತ್ರೆಯ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹೆರಿಗೆ ವಿಭಾಗಗಳಲ್ಲಿರುವ ಸಮಸ್ಯೆಪರಿಹರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ದಿವಾಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿಂದು ಮಾಧವ್, ಆಸ್ಪತ್ರೆಯ ಸಿಬ್ಬಂದಿ, ಕಾನೂನು ಸೇವಾ ಪ್ರಾಧಿಕಾರ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!