ಕನ್ನಡ ಅತ್ಯಂತ ವೈಜ್ಞಾನಿಕ ಭಾಷೆ: ನಾಗಾಭರಣ

185

Get real time updates directly on you device, subscribe now.

ತುಮಕೂರು: ನಡೆ ನುಡಿ ಕಾಯಕ ವರ್ಷದ ಸಮಾರೋಪ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಮಾತನಾಡಿ, ಕನ್ನಡ ಅತ್ಯಂತ ವೈಜ್ಞಾನಿಕ ಭಾಷೆ ಎಂದು ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಮಹಾನಗರ ಪಾಲಿಕೆ ಜಾಗೃತಿ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಡೆ ನುಡಿ ಕಾಯಕ ವರ್ಷದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರೀಕ್ ಬಿಟ್ಟರೆ ಕನ್ನಡ ಅತ್ಯಂತ ಸುಂದರ ಭಾಷೆ ಎಂದ ಅವರು ಕನ್ನಡ ಲಿಪಿಗಳ ರಾಣಿ ಎನ್ನುವ ವಿನೋಬಾ ಬಾವೆ ಅವರ ಮಾತನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ಅಂತಹ ಸುಂದರ ಭಾಷೆಯಾದ ಕನ್ನಡದ ಬಗ್ಗೆ ನಮಗೆ ಗೌರವ ಇರಬೇಕು, ಇಂತಹ ಸುಂದರ ಭಾಷೆಯನ್ನು ನಾವು ತಲೆ ಮೇಲೆ ಹೊತ್ತುಕೊಂಡು ಮೆರೆಯಬೇಕು ಎಂದರು.
ನೀವು ಬೇರೆ ಯಾವುದೇ ಭಾಷೆಯನ್ನಾದರೂ ಕಲಿಯಿರಿ, ಕನ್ನಡದ ತಳಹದಿಯ ಮೇಲೆ ಇರಲಿ, ನದಿ ಹೇಗೆ ಹರಿಯುತ್ತಾ ಸಮುದ್ರ ಸೇರುತ್ತದೆಯೋ ಹಾಗೆ ಭಾಷೆ ಕೂಡ ನದಿಯಂತೆ ನಿರಂತರವಾಗಿ ಹರಿಯಬೇಕು ಎಂದರು.
ಈಗ ನಾವು 75 ವರ್ಷಗಳನ್ನು ಆಚರಿಸುತ್ತಿದ್ದೇವೆ, ಭಾಷೆಗೆ ಸಂಬಂಧಪಟ್ಟಂತೆ ಸಮಾನ ಅವಕಾಶ ಪಡೆಯಬೇಕಾಗಿದೆ, ಸಂವಿಧಾನದಲ್ಲಿ ತಿದ್ದುಪಡಿಯಾದಾಗ ಮಾತ್ರ ಇದು ಸಾಧ್ಯ ಎಂದರು.
ನಮ್ಮನ್ನು ಬಹಳಷ್ಟು ಜನ ಕೇಳುತ್ತಾರೆ ಯಾವುದು ರಾಷ್ಟ್ರ ಭಾಷೆ ಅಂತ, ನಮ್ಮ 22 ಭಾಷೆಗಳು ಕೂಡ ರಾಷ್ಟ್ರಭಾಷೆಗಳು ಎಂದ ಅವರು ಪ್ರತಿಯೊಂದು ಭಾಷೆಯು ರಾಷ್ಟ್ರ ಭಾಷೆಯಾದಾಗ ಅದಕ್ಕೆ ಸಮಾನ ಅವಕಾಶ ಕಲ್ಪಿಸಿಕೊಡುವುದು ಮುಖ್ಯ ಎಂದರು.
ಯಾವುದೇ ಭಾಷೆಯಾಗಲಿ ಅದು ಮಾತೃಭಾಷೆಯಾಗಿದ್ದಾಗ, ಆಡಳಿತ ಭಾಷೆಯಾದಾಗ, ಪರಿಸರ ಭಾಷೆಯಾದಾಗ ತಾನೇ ತಾನಾಗಿ ವೃತ್ತಿ ಭಾಷೆಯಾಗುತ್ತದೆ, ವೃತ್ತಿ ಭಾಷೆ ಮಾಡಿಕೊಂಡಾದ ಅದು ಅನ್ನದ ಭಾಷೆಯಾಗುತ್ತದೆ ಎಂದು ವ್ಯಾಖ್ಯಾನಿಸಿದರು.
ಕನ್ನಡ ಗುಣವನ್ನು ಕಾಣುವಂತಹ ಜನ ಬೇಕು, ಇಲ್ಲಿ ಕುಳಿತಿರುವವರು ಕನ್ನಡ ಕಾಳಜಿ ಇರುವಂತಹವರು ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಕಾಯಕ ವರ್ಷದ ಸಮಾರೋಪ ಕಾರ್ಯಕ್ರಮವನ್ನು 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾಡಿದ್ದೇವೆ, ತುಮಕೂರಿನಲ್ಲಿ ನಿರಂತರವಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಮಾತನಾಡಿ, ಕನ್ನಡಕ್ಕೆ ಯಾವುದೇ ಸಮಸ್ಯೆ ಬಂದಾಗ ಅಂದರೆ ಉದ್ಯೋಗದಲ್ಲಿ, ಆಡಳಿತದಲ್ಲಿ ಸಮಸ್ಯೆ ಬಂದಾಗ ಮೊದಲ ಧ್ವನಿಯೇ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ 16 ಅಧ್ಯಕ್ಷರು ಆಗಿದ್ದಾರೆ, ನಾಗಾಭರಣ ಅವರು 16ನೇ ಅಧ್ಯಕ್ಷರಾಗಿದ್ದಾರೆ ಎಂದರು.
ಕನ್ನಡ ಚಲನಚಿತ್ರದಲ್ಲಿ 10 ರಾಷ್ಟ್ರ ಪ್ರಶಸ್ತಿ ತೆಗೆದುಕೊಂಡ ಏಕೈಕ ವ್ಯಕ್ತಿ ಎಂದರೆ ಅದು ನಾಗಾಭರಣ ಅವರು, ಕನ್ನಡ ಕಾಯಕ ವರ್ಷಾಚರವಣೆಯಲ್ಲಿ 12 ಅಭಿಯಾನ ಮಾಡಿದ್ದೇವೆ, ಸ್ಪರ್ಧಾತ್ಮಕ ವಿಷಯಕ್ಕೆ ಸಂಬಂಧಪಟ್ಟ ಕರ್ನಾಟಕ ಸಂಗಾತಿ ಪುಸ್ತಕವನ್ನು ಪರಿಷ್ಕೃರಿಸಿ ಹೊರ ತಂದಿದ್ದೇವೆ, ಅಲ್ಲದೇ 27 ಪುಸ್ತಕವನ್ನು ಪ್ರಕಟಣೆ ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್, ಡಿಡಿಪಿಐ ನಂಜಯ್ಯ, ಶಿಕ್ಷಣ ಅಧಿಕಾರಿ ರಂಗದಾಸಪ್ಪ, ನೇತ್ರತಜ್ಞ ಡಾ.ದಿನೇಶ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಉಗಮ ಶ್ರೀನಿವಾಸ್, ಮಲ್ಲಿಕಾರ್ಜುನ ಕೆಂಕೆರೆ, ಶೈಲಾ ನಾಗರಾಜ್, ಮಹಾ ನಗರ ಪಾಲಿಕೆ ಜಾಗೃತಿ ಸಮಿತಿ ಸದಸ್ಯ ಜಿ.ಕೆ. ಕುಲಕರ್ಣಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು. ಕಾರ್ಯಕ್ರಮದ ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!