ಕಾಲಗರ್ಭ ಸೇರಿದ ತಾಲೂಕು ಕಚೇರಿ ಹಳೆ ಕಟ್ಟಡ

ಏಳು ದಶಕಗಳ ಕಾಲ ಕುಣಿಗಲ್ ತಾಲೂಕಿನ ಶಕ್ತಿ ಕೇಂದ್ರವಾಗಿದ್ದ ಬಿಲ್ಡಿಂಗ್

281

Get real time updates directly on you device, subscribe now.

ಆನಂದ ಸಿಂಗ್ ಟಿ.ಹೆಚ್.
ಕುಣಿಗಲ್: ಏಳು ದಶಕಗಳ ಕಾಲ ತಾಲೂಕಿನ ಶಕ್ತಿ ಕೇಂದ್ರವಾಗಿದ್ದ ತಾಲೂಕು ಕಚೇರಿ ಹಳೆ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

1953ರ ಆಗಸ್ಟ್ 20ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಅವರಿಂದ ತಾಲೂಕಿನ ಜನತೆಗೆ ಆಡಳಿತ ನೀಡಲು ಹಳೆ ತಾಲೂಕು ಕಚೇರಿ ನಿರ್ಮಾಣವಾಗಿತ್ತು, ಅಂದು ಮೂಡಲಗಿರಿಗೌಡರು ಕುಣಿಗಲ್ ಕ್ಷೇತ್ರದ ಶಾಸಕರಾಗಿದ್ದರು. 1853ರ ಹಿಂದೆ ಪಟ್ಟಣದ ದೊಡ್ಡಪೇಟೆಯಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಾಗದಲ್ಲಿ ಅಠಾರ ಕಚೇರಿಯಲ್ಲಿ ನಡೆಯುತ್ತಿತ್ತು, 1853ರಲ್ಲಿ ನಿರ್ಮಾಣವಾದ ತಾಲೂಕು ಕಚೇರಿಯ ಒಂದು ಭಾಗವನ್ನು ಕುಣಿಗಲ್ ಪೊಲೀಸ್ ಠಾಣೆಗೆ, ಉಪ ನೋಂದಣಾಧಿಕಾರಿಗಳ ಕಚೇರಿಗೂ ಜಾಗ ನೀಡಲಾಗಿತ್ತು.
ಕಂದಾಯ ಇಲಾಖೆಯಲ್ಲಿ ಹೊಸ ಹೊಸ ಯೋಜನೆಗಳು ಜಾರಿಗೊಂಡ ಕಾರಣ, ಹೊಸ ವಿಭಾಗಗಳ ಸೃಜನೆಯಾಗಿ, ಇರುವ ಕಟ್ಟಡದಲ್ಲಿ ಸ್ಥಳವಕಾಶದ ಕೊರತೆಯಾಯಿತು. ಈ ಮಧ್ಯೆ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಮಂಜೂರಾಗಿ ನಿರ್ಮಾಣಗೊಂಡು ಸ್ಥಳಾಂತರಗೊಂಡರೆ, ಉಪ ನೋಂದಣಾಧಿಕಾರಿ ಕಚೇರಿ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಇರುವ ಕಟ್ಟಡದಲ್ಲೆ ವಿವಿಧ ವಿಭಾಗಗಳಿಗೆ ಜಾಗ ನೀಡಿ ಸಾರ್ವಜನಿಕರ ಕೆಲಸಕ್ಕೆ ಅನುವು ಮಾಡಿಕೊಡಲಾಯಿತು, ಆದರೆ ಕಟ್ಟಡ ಶಿಥಿಲವಾಗಿ ಸೋರಲು ಪ್ರಾಂಭಿಸಿದ್ದರಿಂದ ಸರ್ಕಾರಿ ದಾಖಲೆ, ಕಡತಗಳು ನೆನೆದು ಹಾಳಾಗುವ ಜೊತೆ ಗೆದ್ದಲು ಹಿಡಿಯುವಂತಾಗಿ ಅಧಿಕಾರಿಗಳಿಗೆ ತಲೆ ನೋವಿನ ಸಂಗತಿಯಾಯಿತು.
ಹೊಸ ಕಟ್ಟಡ ನಿರ್ಮಾಣದ ಬೇಡಿಕೆಗೆ ಕೂಗು ಹೆಚ್ಚಾದ್ದರಿಂದ 2006 ರಲ್ಲಿ ಜಾಗ ಗುರುತಿಸುವ ವಿಷಯದಲ್ಲಿ ಕುಣಿಗಲ್, ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರ ಪ್ರತಿಷ್ಠೆಯಾಗಿ ಸಮರ್ಪಕ ಜಾಗ ಗುರುತಿಸಲು ಆಗಲಿಲ್ಲ, 2008ರಲ್ಲಿ ಕುಣಿಗಲ್ ವಿಧಾನಸಭೆ ಕ್ಷೇತ್ರದ ಪುನರ್ವಿಂಗಡನೆಯಾಗಿ ಒಂದೆ ಕ್ಷೇತ್ರವಾದ್ದರಿಂದ 2008 ರಲ್ಲಿ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್ನ ಬಿ.ಬಿ.ರಾಮಸ್ವಾಮಿಗೌಡ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ಸತತ ಒತ್ತಡ ಹೇರಿದ್ದರ ಪರಿಣಾಮ ಮೊದಲ ಹಂತದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಅಂದಿನ ಸಿಎಂ ಯಡಿಯೂರಪ್ಪನವರು ಶಂಕುಸ್ಥಾಪನೆ ನೆರವೇರಿಸಿ ಹಾಲಿ ತಾಲೂಕು ಕಚೇರಿ ಕಟ್ಟಡದ ಹಿಂಭಾಗದ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.
ಹೆಚ್ಚುವರಿ ಅನುದಾನವನ್ನು ಶಾಸಕ ಡಿ.ನಾಗರಾಜಯ್ಯನವರು ಮಂಜೂರು ಮಾಡಿಸಿದ ಮೇರೆಗೆ ಒಟ್ಟಾರೆ 9.20 ಕೋಟಿ ರೂ. ವೆಚ್ಚದಲ್ಲಿ ಹೊಸ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಇನ್ನು ಅನುದಾನ ಬೇಕಿರುವುದರಿಂದ ಹಾಲಿಶಾಸಕ ಡಾ.ರಂಗನಾಥ, ಸಂಸದ ಡಿ.ಕೆ.ಸುರೇಶ್ ಸರ್ಕಾರದ ಮೇಲೆ ಸತತ ಒತ್ತಡಹಾಕಿ ಅನುದಾನ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ. ಮಿನಿ ವಿಧಾನಸೌಧ ಹೊಸ ಕಟ್ಟಡಕ್ಕೆ ತಾಲೂಕು ಕಚೇರಿ ವಿವಿಧ ವಿಭಾಗಗಳು ಸ್ಥಳಾಂತರಗೊಂಡಿರುವ ಕಾರಣ ಹಳೆ ಕಟ್ಟಡ ತೆರವುಗೊಳಿಸಿ ಈ ಜಾಗದಲ್ಲಿ ವಿಶಾಲವಾದ ಉದ್ಯಾನವನ ನಿರ್ಮಿಸಿ ಮಿನಿ ವಿಧಾನಸೌಧದ ಸೌಂದರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಳೆ ಕಟ್ಟಡದಲ್ಲಿ ಕಿಟಕಿ, ಬಾಗಿಲುಗಳು ಗುಣಮಟ್ಟದ ಮರಗಳಿಂದ ಮಾಡಿದ್ದರಿಂದ ಕಟ್ಟಡ ತೆರವು ಹರಾಜು ಪ್ರಕ್ರಿಯೆ ಆನ್ಲೈನ್ ಮೂಲಕ ನಡೆದು ಹತ್ತುಲಕ್ಷಕ್ಕೆ ತೆರವು ಕಾರ್ಯದ ಗುತ್ತಿಗೆ ಅಖೈರುಗೊಂಡಿದೆ. ಸುಮಾರು 69 ವರ್ಷಗಳ ಕಾಲ ತಾಲೂಕಿನ ಜನತೆಗೆ ಸೇವೆ ನೀಡಿದ ಬೃಹತ್ ಕಂಬಗಳನ್ನು ಹೊಂದಿದ್ದ ಕುಣಿಗಲ್ ತಾಲೂಕು ಕಚೇರಿ ಹಳೆ ಕಟ್ಟಡ ಇನ್ನು ನೆನಪು ಮಾತ್ರ.

Get real time updates directly on you device, subscribe now.

Comments are closed.

error: Content is protected !!