ಕೇಂದ್ರ, ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಖಂಡನೆ

ಡೀಸಿ ಕಚೇರಿಗೆ ಮುತ್ತಿಗೆ- ಕಾಂಗ್ರೆಸ್ ಕಾರ್ಯಕರ್ತರ ಬಂಧನ, ಬಿಡುಗಡೆ

141

Get real time updates directly on you device, subscribe now.

ತುಮಕೂರು: ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಜನಾಕ್ರೋಶ ಪ್ರತಿಭಟನಾ ರ್ಯಾಲಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್, ಎಂಎಲ್ಸಿ ಆರ್.ರಾಜೇಂದ್ರ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ನಗರದ ಟೌನ್ಹಾಲ್ ವೃತ್ತದಲ್ಲಿ ಸಾರ್ವಜನಿಕ ಸಮಾರಂಭ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತಾ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ರಕ್ಷಣೆಗೆಂದು ನಿಯೋಜಿಸಲಾಗಿದ್ದ ಪೊಲೀಸರ ತಂಡ ಅವರನ್ನು ತಡೆದು ಪೊಲೀಸ್ ವಾಹನಕ್ಕೆ ತುಂಬಲು ಮುಂದಾದಾಗ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಹರಸಾಹಸ ಪಟ್ಟು ಪೊಲೀಸರು ವಾಹನಕ್ಕೆ ತುಂಬುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಟೌನ್ಹಾಲ್ ವತ್ತದಲ್ಲಿ ನಡೆದ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ, ರಾಜ್ಯದಲ್ಲಿರುವ ಬಿಜೆಪಿ ಸರಕಾರ ಸಂವಿಧಾನದ ಚೌಕಟ್ಟು ಮೀರಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ, ಶೇ.10 ರ ಕಮಿಷನ್ ಸರಕಾರ ಎಂದು ಸಿದ್ದರಾಮಯ್ಯ ಸರಕಾರವನ್ನು ಟೀಕಿಸಿದ್ದ ಮೋದಿ, ಶೇ.40ರ ಕಮಿಷನ್ ನೀಡಬೇಕೆಂದು ಸ್ವತಹ ಸಂತ್ರಸ್ಥರೇ ಪತ್ರ ಬರೆದರು ಕಣ್ಣು ಮುಚ್ಚಿ ಕುಳಿತಿದ್ದಾರೆ, ಇಂತಹ ಸರಕಾರಕ್ಕೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ, ಯುವ ಕಾಂಗ್ರೆಸ್ನ ಜನಾಕ್ರೋಶ ಹೋರಾಟ ಪ್ರತಿಹಳ್ಳಿ, ಹೋಬಳಿಗಳನ್ನು ಮುಟ್ಟಬೇಕಿದೆ ಎಂದರು.
ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಸಾಧನೆ ಎಂದರೆ ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಯೋಜನೆಗಳ ಹೆಸರು ಬದಲಾವಣೆಯಷ್ಟೇ, ಇಂದು ದೇಶದಲ್ಲಿ 60 ಲಕ್ಷ ಸರಕಾರಿ ನೌಕರಿ ಖಾಲಿ ಇದೆ, ಈ ಬಗ್ಗೆ ಪ್ರಶ್ನಿಸಿದರೆ ಇಡಿ, ಐಟಿ ಹೆಸರಿನಲ್ಲಿ ಬೆದರಿಸುವ ಕುತಂತ್ರದ ರಾಜಕಾರಣ ಮಾಡುತ್ತಿದೆ, ಕಾಂಗ್ರೆಸ್ ಪಕ್ಷದವರದ್ದು ಗಾಂಧಿ ಹಿಂದುತ್ವ, ಬಿಜೆಪಿಯದ್ದು ಗೂಡ್ಸೆ ಹಿಂದುತ್ವ, ನಿಮಗೆ ನಾಚಿಕೇಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸತ್ತರೆ ನಿಷೇಧಾಜ್ಞೆ ಮೀರಿ ಮೃತದೇಹದ ಮೆರವಣಿಗೆ ನಡೆಸಿ, ಸರಕಾರದ ಹಣದಲ್ಲಿ ಪರಿಹಾರ ನೀಡುವ ಬಿಜೆಪಿ ಪಕ್ಷದವರು, ಕಳೆದ ಒಂದು ತಿಂಗಳ ಹಿಂದೆ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಕೊಲೆಯಾಗಿದ್ದರೂ ಜಿಲ್ಲೆಯಲ್ಲಿರುವ ಮೂವರು ಮಂತ್ರಿಗಳು, ನಾಲ್ವರು ಶಾಸಕರು ಕನಿಷ್ಟ ಪಕ್ಷ ತಿರುಗಿಯೂ ನೋಡಿಲ್ಲ. ಪರಿಹಾರವೆಂಬುದು ಮರೀಚಿಕೆಯಾಗಿದೆ, ದಲಿತರನ್ನು ಕಂಡರೆ ಇಷ್ಟು ತಾತ್ಸಾರ ಏಕೆ, ಇದನ್ನು ಪ್ರತಿಯೊಬ್ಬ ಯುವ ಜನತೆಯೂ ಅರ್ಥ ಮಾಡಿಕೊಳ್ಳಬೇಕು, ಎಂಎಲ್ಸಿ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದಂತೆ ಮುಂಬರುವ ಚುನಾವಣೆಗಳಲ್ಲಿಯೂ ಒಗ್ಗೂಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ನಿಕೇತ್ರಾಜ್ ಮೌರ್ಯ ಮಾತನಾಡಿ, 2011- 12 ರಲ್ಲಿ ಕೈಗಾರಿಕಾ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕವನ್ನು 2013 ರಲ್ಲಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ನಂಬರ್ 1 ಸ್ಥಾನಕ್ಕೆ ತಂದು ಕೂರಿಸಿದರು, ಐಟಿ, ಬಿಟಿ, ಜನರಿಗೆ ಶುದ್ಧ ಕುಡಿಯುವ ನೀರು, ಎಲೆಕ್ಟ್ರಿಕಲ್ ವಾಹನ, ಸೋಲಾರ್ ಪಾರ್ಕ್ ಸೇರಿದಂತೆ ಹೂಡಿಕೆ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಮುಂದಿರುವಂತೆ ನೋಡಿಕೊಂಡರು ಅಂದಿನ ಕೇಂದ್ರ ಸರಕಾರ ಆರ್ಡಿಪಿಆರ್ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ನಾಲ್ಕು ವರ್ಷಗಳ ಕಾಲ ಸತತವಾಗಿ ಕರ್ನಾಟಕಕ್ಕೆ ಪ್ರಶಸ್ತಿ ನೀಡಿ ಗೌರವಿಸಿತ್ತು, ಆದರೆ ಇಂದು ರಾಜ್ಯದಲ್ಲಿ ಕೋಮವಾದ ಬೇರೂರಿದ್ದು, ಬಂಡವಾಳಗಾರರು ಹೂಡಿಕೆಗೆ ಹಿಂದೇಟು ಹಾಕುವಂತಾಗಿದೆ, ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಸದಾ ಮುಂದೆ ಇರುತ್ತಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಹಿಜಾಬ್, ನೈತಿಕ ಪೊಲೀಸ್ ಗಿರಿ, ಲವ್ ಜಿಹಾದ್ ನಂತಹ ಪೊಳ್ಳು ಹೋರಾಟಗಳಿಗೆ ಸಿಕ್ಕಿ 20ನೇ ಸ್ಥಾನಕ್ಕೆ ಕುಸಿದಿವೆ, ಕಾಂಗ್ರೆಸ್ ಅಭಿವೃದ್ಧಿಯ ಪ್ರತೀಕವಾಗಿ ಸ್ಥಾಪಿಸಿದ್ದ ಸಾರ್ವಜನಿಕ ಉದ್ದಿಮೆಗಳಾದ ಏರ್ಲೈನ್ಸ್, ರೈಲ್ವೆ, ಬಿಎಸ್ಎನ್ಎಲ್, ಎಲ್ಐಸಿ ಸಂಸ್ಥೆಗಳನ್ನು ಮಾರಾಟ ಮಾಡಿ ದೇಶವನ್ನು ಅಧೋಗತಿಗೆ ತಳ್ಳುತ್ತಿದೆ, ಈ ದೇಶದ ಸಂವಿಧಾನ ಉಳಿಯಬೇಕಾದರೆ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದರು.
ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಈ ದೇಶದ ಪ್ರಧಾನಿಯಾಗಿ ಓರ್ವ ಟೀ ಮಾರಾಟ ಮಾಡುವ ವ್ಯಕ್ತಿ ಆಯ್ಕೆಯಾಗಿದ್ದರೆ, ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ, ಇಂತಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ಪಕ್ಷಕ್ಕೆ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ ಇದೆಯೇ, ಒಮ್ಮೆಯೂ ರಾಜ್ಯದ ಜನತೆಗೆ ಬಹುಮತ ನೀಡದಿದ್ದರೂ ಪ್ರತಿಪಕ್ಷಗಳ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದು, ಹಿಂಬಾಗಿಲಿನ ಮೂಲಕ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಜನಸಾಮಾನ್ಯರ ಹಿತಬೇಕಿಲ್ಲ, ಕಪ್ಪು ಹಣ ವಾಪಸ್, ಉದ್ಯೋಗ ನೀಡುವ ಭರವಸೆ ನೀಡಿದ್ದ ಬಿಜೆಪಿ ಬದಲಾಗಿದೆ, ಸಾರ್ವಜನಿಕ ಉದ್ದಿಮೆಗಳ ಮಾರಾಟ, ಜಿಎಸ್ಟಿ ಹೆಸರಿನಲ್ಲಿ ಜನರಿಗೆ ತೆರಿಗೆ ಹೇರಿ ಜನರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ, ರಾಜ್ಯಕ್ಕೆ ಜಿಎಸ್ಟಿ ಪಾಲು ನೀಡಲು ಅಡ್ಡಗಾಲು ಹಾಕಿದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ, ಇಡೀ ರಾಜ್ಯದ ಮಾನ ಹರಾಜಿಗಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್, ವಕ್ಫ್ ಬೋರ್ಡ್ ಮಾಜಿ ಚೇರ್ಮನ್ ಇಕ್ಬಾಲ್ ಅಹಮದ್, ರೇವಣ್ಣಸಿದ್ದಯ್ಯ, ಕಲ್ಲಹಳ್ಳಿ ದೇವರಾಜು, ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾರೆಡ್ಡಿ, ಸುನೀಲ್, ಪ್ರದೀಪ್, ಆಶಿಕಾ, ದಿವ್ಯಾ, ಖಾಲಿದ್, ಅನಿಲ್, ಹಿಲಾಯಿ ಸಿಖಂದರ್, ರಾಜೇಶ್ ದೊಡ್ಡಮನೆ, ಶ್ರೀನಿವಾಸ್, ಜಿ.ಎನ್.ಮೂರ್ತಿ, ಚಿದಾನಂದ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!