ರೋಹಿತ್ ಚಕ್ರತೀರ್ಥನ ಬಂಧಿಸಿ, ಗಡಿಪಾರು ಮಾಡಿ

175

Get real time updates directly on you device, subscribe now.

ತುಮಕೂರು: ಮೇರು ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಹಾಗೂ ಕುವೆಂಪು ಅವರ ನಾಡಗೀತೆ ತಿರುಚಿರುವ ರೋಹಿತ್ ಚರ್ಕತೀರ್ಥ ಎಂಬ ವ್ಯಕ್ತಿಯನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತುಮಕೂರು ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥಗೌಡ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಗುಂಚಿ ಚೌಕದಲ್ಲಿರುವ ಕರವೇ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರೋಹಿತ ಚಕ್ರತೀರ್ಥನನ್ನು ಬಂಧಿಸಿ, ಗಡಿಪಾರು ಮಾಡಬೇಕು ಹಾಗೂ ಆತನನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೆ.ಎನ್.ಮಂಜುನಾಥಗೌಡ, ಕುವೆಂಪು ಈ ದೇಶ ಕಂಡ ನೆಲಮೂಲ ಸಂಸ್ಕೃತಿಯ ಕವಿ, ತಮ್ಮ ಕವಿತೆ, ನಾಟಕ, ಕಾದಂಬರಿ, ಬರಹಗಳ ಮೂಲಕ ಇಡೀ ವಿಶ್ವಕ್ಕೆ ವಿಶ್ವಮಾನವ ಸಂದೇಶ ಸಾರಿದವರು, ಇಂತಹವರು ರಚಿಸಿರುವ ನಾಡಗೀತೆ ಜೈ ಭಾರತ ಜನನೀಯ ತನುಜಾತೆ, ಜಯಯೇ ಕರ್ನಾಟಕ ಮಾತೆ ಎಂಬ ಗೀತೆಯನ್ನು ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿ 2017ರಲ್ಲಿ ಕೆಟ್ಟ ಅರ್ಥ ಬರುವಂತೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದೇ ಅಲ್ಲದೆ, ಕುವೆಂಪು ಅವರ ಜಾತಿಯ ಹೆಸರನ್ನು ಹಿಡಿದು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಇಡೀ ಸಮುದಾಯಕ್ಕೆ ಅಪಮಾನ ಮಾಡಿದ್ದಾನೆ. ಆದ್ದರಿಂದ ಕೂಡಲೇ ಅವನನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು, ಹಾಗೆಯೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಕನ್ನಡ ನಾಡು ಶಾಂತಿ ಸೌರ್ಹಾದತೆಗೆ ಹೆಸರಾದ ನಾಡು, ಮಕ್ಕಳು ಕಲಿಯುವ ಪಠ್ಯಪುಸ್ತಕಗಳಲ್ಲಿ ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸುವ ಪಠ್ಯಗಳನ್ನು ಹಾಕಿ, ಭಾರತ ಬಹುಸಂಸ್ಕೃತಿಯ ನಾಡು ಎಂಬುದನ್ನು ಇದುವರೆಗೂ ಪಠ್ಯ ಪುಸ್ತಕ ರಚಿಸಿರುವವರು ಹಾಗೂ ಪರಿಷ್ಕರಣಾ ಸಮಿತಿಯವರು ಮಾಡಿಕೊಂಡು ಬಂದಿದ್ದಾರೆ, ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ರೋಹಿತ್ ಚಕ್ರತೀರ್ಥ ಎಂಬ ಗೂಗಲ್ ಗಿರಾಕಿಯ ಕೈಗೆ ಪಠ್ಯಪುಸ್ತಕ ಪರಿಷ್ಕರಣೆಯ ಅಧ್ಯಕ್ಷ ಸ್ಥಾನ ನೀಡಿ ಮಕ್ಕಳ ವೈಜ್ಞಾನಿಕ ಚಿಂತನೆಗಳಿಗೆ ಅವಕಾಶ ಇಲ್ಲದಂತೆ ಮಾಡಲಾಗಿದೆ, ಅಲ್ಲದೆ ಹಲವಾರು ಹಿರಿಯ ಲೇಖಕರ ಪಾಠಗಳನ್ನು ಕೈಬಿಟ್ಟು, ಗೊಡ್ಡು ಸಂಪ್ರದಾಯ ಹೇಳುವ ಪಠ್ಯಗಳನ್ನು ಸೇರಿಸಲು ಹೊರಟಿರುವುದು ಖಂಡನೀಯ, ಕೂಡಲೇ ಸರಕಾರ ರೋಹಿತ್ ಚಕ್ರತೀರ್ಥ ಸಮಿತಿ ರದ್ದು ಪಡಿಸಿ ಷರಿಷ್ಕೃತ ಪಠ್ಯಗಳನ್ನು ಕೈಬಿಟ್ಟು, ಈ ಹಿಂದಿನ ರೀತಿಯಲ್ಲಿಯೇ ಪಠ್ಯವನ್ನು ಮಕ್ಕಳಿಗೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಕೆ.ಎನ್.ಮಂಜುನಾಥ್ ತಿಳಿಸಿದರು.
ಪ್ರಸಕ್ತ ಸಾಲಿನ ಶಾಲೆಗಳು ಆರಂಭವಾಗಿ ಪಠ್ಯಪುಸ್ತಕಕ್ಕಾಗಿ ಕಾಯುತ್ತಿರುವ ವೇಳೆ ರೋಹಿತ್ ಚಕ್ರತೀರ್ಥನ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ ಶಿಕ್ಷಣ ಮಂತ್ರಿ ಬಿ.ಸಿ.ನಾಗೇಶ್ ಮೌನಕ್ಕೆ ಶರಣಾಗಿರುವುದು ನೋಡಿದರೆ ಸರಕಾರವೇ ಕುಮ್ಮಕ್ಕು ನೀಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ, ಕೂಡಲೇ ಮುಖ್ಯಮಂತ್ರಿಗಳು ಪ್ರಾಥಮಿಕ ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಕರವೇ ಒತ್ತಾಯಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ಕರವೇ ಉಪಾಧ್ಯಕ್ಷ ಉಪ್ಪಾರಹಳ್ಳಿ ಕುಮಾರ್, ಯುವ ಘಟಕದ ಕುಂಭಯ್ಯ, ಮಹಿಳಾ ಘಟಕದ ಲೀಲಾವತಿ, ಶ್ರೀನಿವಾಸಮೂರ್ತಿ, ಚಂದ್ರಶೇಖರಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!