ಕುಂದುಕೊರತೆ ಸಭೆಯಿಂದ ಪೇರಿ ಕಿತ್ತ ಪಿಡಿಒ

ಕಾಮಗಾರಿ ಅಕ್ರಮ ಸಂಬಂಧ ಅಭಿವೃದ್ಧಿ ಅಧಿಕಾರಿ ಮೇಲೆ ಕೇಸ್

290

Get real time updates directly on you device, subscribe now.

ಕುಣಿಗಲ್: ಪೊಲೀಸರ ಮುಂದೆಯೆ ಆರೋಪಿತ ಪಿಡಿಒ ಕಾಲಿಗೆ ಬುದ್ಧಿ ಹೇಳಿ ಪರಾರಿಯಾದ ಘಟನೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ನಡೆಯಿತು.

ಮಂಗಳವಾರ ಲೋಕಾಯುಕ್ತ ಎಸ್ಪಿ ವಲಿಭಾಷ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಯುತ್ತಿತ್ತು, ಸಭೆಯಲ್ಲಿ ಬೇಗೂರು ಗ್ರಾಮದ ಕಾಮಗಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಬೇಗೂರು ಪಿಡಿಒ ಮೇಲೆ ಪ್ರಕರಣ ದಾಖಲಾಗಿದ್ದರೂ ಬಂಧನವಾಗಿರಲಿಲ್ಲ ಎನ್ನಲಾಗಿದೆ, ಈ ನಿಟ್ಟಿನಲ್ಲಿ ಪಿರ್ಯಾದುದಾರ ದೂರು ನೀಡಿದ್ದು, ಸಭೆಯಲ್ಲಿ ಹಾಜರಿದ್ದ ಪಿಡಿಒ ಸುದರ್ಶನ್ ಅವರನ್ನು ವಶಕ್ಕೆ ಪಡೆಯುವಂತೆ ಲೋಕಾಯುಕ್ತ ಸಿಪಿಐ ವಿಜಯಕುಮಾರ್ ಕುಣಿಗಲ್ ಪಿಎಸೈ ಜಮಾಲ್ ಅಹಮದ್ ಅವರಿಗೆ ಸೂಚಿಸಿದರು. ಅಷ್ಟರಲ್ಲಿ ಸಭೆಯಲ್ಲಿದ್ದ ಪಿಡಿಒ ಕಾಲಿಗೆ ಬುದ್ಧಿ ಹೇಳಿದ್ದರು. ಈ ವಿಷಯವಾಗಿ ಲೋಕಾಯುಕ್ತ ಸಿಪಿಐ, ಕುಣಿಗಲ್ ಪಿಎಸೈ ಅವರನ್ನು ತರಾಟೆಗೆ ತೆಗೆದುಕೊಂಡು ಕರೆತರುವಂತೆ ಸೂಚಿಸಿದರು, ಆದರೆ ಪಿಡಿಒ ನಂಬರ್ ಸ್ವಿಚ್ ಆಫ್ ಆಗಿದ್ದು ಅವರನ್ನು ಪೊಲೀಸರು ತಾಪಂ ಕಚೇರಿ ಸಮೀಪದ ಅಂಗಡಿ ಇತರೆಡೆ ಹುಡುಕಾಡಿದರು.
ಸಿಡಿಪಿಒ ಅನುಶಾ ವಿರುದ್ಧ ಅಂಗನವಾಡಿ ಕಾರ್ಯಕರ್ತೆ ವ್ಯಾಪಕ ದೂರು ನೀಡಿ, ಇಲಾಖೆಯಿಂದ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುತ್ತಿಲ್ಲ, ನಮ್ಮ ಸಮಸ್ಯೆ ಯಾರು ಕೇಳುತ್ತಿಲ್ಲ, ಬರಬೇಕಾದ ಅನುದಾನ ನೀಡುತ್ತಿಲ್ಲ, ಅವ್ಯವಸ್ಥೆಯ ಆಗರವಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಯಾಗಿ ಸುಮಾರು ಹತ್ತಕ್ಕೂ ಹೆಚ್ಚು ಅಂಗನವಾಡಿ ಸಿಬ್ಬಂದಿ ಲೋಕಾಯುಕ್ತ ಅಧಿಕಾರಿಗಳ ಮುಂದೆ ಬಂದು ಮೇಡಂ ಪರ ಲಾಭಿ ನಡೆಸಲು ಮುಂದಾದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಇಂತಹ ಪ್ರವೃತ್ತಿ ಆಡಳಿತಾತ್ಮಕ ದೃಷ್ಟಿಯಿಂದ ಒಳ್ಳೆಯದಲ್ಲ, ಸಮಸ್ಯೆ ಬಗೆಹರಿಸಲು ಯತ್ನಿಸಬೇಕು ಎಂದು ತಾಕೀತು ಮಾಡಿದರು. ಲೋಕಾಯುಕ್ತ ಎಸ್ಪಿ ಒಂದು ದಿನ ನಾವೇ ಬಂದು ಇಲಾಖೆ ಪರಿಶೀಲನೆ ಮಾಡುತ್ತೇವೆ, ಎಲ್ಲಿ ಸಮಸ್ಯೆಯಾಗಿದೆಯೋ ಎಲ್ಲವನ್ನು ಬಗೆಹರಿಸೋಣ, ಇಲಾಖೆ ಸಮರ್ಪಕವಾಗಿ ಕೆಲಸ ಮಾಡಲು ಶ್ರಮಿಸೋಣ ಎಂದರು.
ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಗ್ರಾವೆಲ್ ಪಿಟ್ ಸಾರ್ವಜನಿಕ ಸ್ಥಳವನ್ನು ಖಾಸಗಿ ವ್ಯಕ್ತಿಗೆ ಪಿಡಿಒ ಅಕ್ರಮವಾಗಿ ಖಾತೆ ಮಾಡಿದ್ದಾರೆಂದು ಶಿವಣ್ಣ ದೂರು ನೀಡಿದರೆ, ಕೆಂಪನಹಳ್ಳಿ ಗ್ರಾಮದ ಸಾರ್ವಜನಿಕ ರಸ್ತೆ ಒತ್ತುವರಿಯಾಗಿದೆ, ಈ ಬಗ್ಗೆ ತಾಲೂಕು ಸರ್ವೆಯರ್ ಸರಿಯಾದ ವರದಿ ನೀಡುತ್ತಿಲ್ಲ, ರಸ್ತೆ ಒತ್ತುವರಿ ತೆರವುಗೊಳಿಸುತ್ತಿಲ್ಲ ಎಂದು ನಿಡಸಾಲೆ ಗ್ರಾಮ ಪಂಚಾಯಿತಿ ಜಾಗದಲ್ಲಿ ಖಾಸಗಿ ವ್ಯಕ್ತಿ ಕಟ್ಟಡ ನಿರ್ಮಾಣ ಮಾಡಿದ್ದರೂ ಗ್ರಾಮ ಪಂಚಾಯಿತಿಯವರು ಸಾರ್ವಜನಿಕ ಜಾಗ ರಕ್ಷಣೆ ಮಾಡುತ್ತಿಲ್ಲ ಎಂದು, ಬೇರೆ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ರವೀಶ್, ತಹಶೀಲ್ದಾರ್ ಮಹಾಬಲೇಶ್ವರ್, ತಾಪಂ ಇಒ ಜೋಸೆಫ್, ಲೋಕಾಯುಕ್ತ ಸಿಪಿಐ ವಿಜಯಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!