ತಂಬಾಕು ಸೇವನೆ ಕ್ಯಾನ್ಸರ್ ಗೆ ದಾರಿ: ಡೀಸಿ

ತಂಬಾಕು ಪರಿಸರಕ್ಕೆ ಮಾರಕ- ಯುವ ಪೀಳಿಗೆ ದುಶ್ಚಟಗಳಿಂದ ದೂರವಿರಲಿ

180

Get real time updates directly on you device, subscribe now.

ತುಮಕೂರು: ತಂಬಾಕಿನಿಂದ ಮನುಷ್ಯರಿಗಷ್ಟೇ ಅಲ್ಲ, ಪರಿಸರಕ್ಕೂ ಮಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ- 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆ ಮಾಡುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾತ್ರ ಈವರೆಗೂ ಚರ್ಚಿಸಲಾಗುತ್ತಿತ್ತು, ಆದರೆ ತಂಬಾಕು ಉತ್ಪನ್ನಗಳನ್ನು ತಯಾರಿಸಲು ಮರಗಳನ್ನು ಕಡಿಯುವುದರಿಂದ ಪರಿಸರ ಮಾಲಿನ್ಯ, ತಂಬಾಕು ಉತ್ಪನ್ನ ತಯಾರಿಸುವ ಕಾರ್ಖಾನೆಗಳು ಹೊರಬಿಡುವ ಹೊಗೆಯಿಂದ ವಾಯು ಮಾಲಿನ್ಯ, ಕಾರ್ಖಾನೆಯ ಮಲಿನವನ್ನು ನೀರಿಗೆ ಬಿಡುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ, ಇದರಿಂದ ಪರಿಸರಕ್ಕೂ ಮಾರಕವೆಂದು ತಿಳಿಸಿದರು.
ಪ್ರಸಕ್ತ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ತಂಬಾಕು ಪರಿಸರಕ್ಕೆ ಮಾರಕ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ತಂಬಾಕು ಬೆಳೆಯುವುದನ್ನು ನಿಲ್ಲಿಸಿದಾಗ ಮಾತ್ರ ಜನರ ಆರೋಗ್ಯ ಹಾಗೂ ಪರಿಸರ ರಕ್ಷಿಸಬಹುದು. ಅಲ್ಲದೆ ತಂಬಾಕು ಸೇವನೆಯಿಂದ ಉಂಟಾಗುವ ವಿವಿಧ ಬಗೆಯ ಕ್ಯಾನ್ಸರ್ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು.
ತಂಬಾಕು ವ್ಯಸನವನ್ನಷ್ಟೇ ಅಲ್ಲದೆ ಪರಿಸರ, ಮುಂದಿನ ಪೀಳಿಗೆ, ಆರೋಗ್ಯಕ್ಕೆ ಮಾರಕವಾಗುವಂತಹ ಯಾವುದೇ ವ್ಯಸನಗಳನ್ನು ತ್ಯಜಿಸಬೇಕು. ತಂಬಾಕು ವ್ಯಸನಿಗಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುವುದನ್ನು ಕಾಣಬಹುದಾಗಿದ್ದು, ಇಂತಹವರಿಂದ ಸಮಾಜಕ್ಕೂ ಮಾರಕವಾಗುವ ಸಾಧ್ಯತೆ ಇದೆ, ಹದಿಹರೆಯದ ವಿದ್ಯಾರ್ಥಿಗಳು ಬಹುಬೇಗ ತಂಬಾಕು ವ್ಯಸನಕ್ಕೆ ಬಲಿಯಾಗುತ್ತಾರೆ, ಹಿರಿಯರನ್ನು ಮಕ್ಕಳು ಅನುಸರಿಸುವುದರಿಂದ ಮೊದಲು ಹಿರಿಯರು ಧೂಮಪಾನ, ತಂಬಾಕು ಸೇವನೆ ತ್ಯಜಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ಮೋಹನ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಧ್ಯಯನದ ಪ್ರಕಾರ ತಂಬಾಕು ಉತ್ಪನ್ನಗಳ ಸೇವನೆಯಿಂದ ಭಾರತದಲ್ಲಿ ಪ್ರತಿ 8 ಸೆಕೆಂಡುಗಳಿಗೊಮ್ಮೆ ಒಬ್ಬರಂತೆ ಸಾವನ್ನಪ್ಪುತ್ತಿದ್ದಾರೆ, ತಂಬಾಕು ಬಳಕೆಯಿಂದ ಅತೀ ಹೆಚ್ಚು ಬಾಯಿ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳು, ಅಸ್ತಮಾ, ಕ್ಷಯ, ನಿರ್ಜೀವ ಶಿಶು ಜನನ, ವಿವಿಧ ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆ ಕಂಡುಬರುತ್ತಿದೆ, ಈ ನಿಟ್ಟಿನಲ್ಲಿ ತಂಬಾಕು ಸೇವನೆ ತ್ಯಜಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ವಿಶ್ವ ತಂಬಾಕು ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಆರೋಗ್ಯ ಇಲಾಖೆ, ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ, ವಿವಿಧ ಇಲಾಖೆಗಳು ಹಾಗೂ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಿನಾಚರಣೆ ಅಂಗವಾಗಿ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಿರು ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಘೋಷವಾಕ್ಯಗಳ ಫಲಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ರವಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!