ತುಮಕೂರು: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರವರನ್ನು ಯಾರೋ ಏನೋ ಹೇಳುತ್ತಾರೆ ಎಂದು ಗಡಿಪಾರು ಮಾಡಲು ಆಗುವುದಿಲ್ಲ. ಅಷ್ಟಕ್ಕೂ ಅವರು ಗಡಿಪಾರು ಮಾಡುವಂತಹ ಅಪರಾಧ ಏನು ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಇಂದಿಲ್ಲಿ ಪ್ರಶ್ನಿಸಿದರು.
ನಗರದಲ್ಲಿ ಜಿಪಂ ಕೆಡಿಪಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಪಾರು ಮಾಡಬೇಕೆಂದರೆ ಅದಕ್ಕೆ ಆದಂತಹ ನಿಯಮಾವಳಿಗಳಿವೆ. ಈ ರೀತಿ ಮಾತನಾಡುವವರಿಗೆ ಆ ನಿಯಮಾವಳಿಗಳ ಬಗ್ಗೆ ಗೊತ್ತಿಲ್ಲ ಎಂದರು.
ರೋಹಿತ್ ಚಕ್ರತೀರ್ಥ ಗಡಿಪಾರು ಆಗುವಂತಹ ಅಪರಾ‘ ಏನು ಮಾಡಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಯಾರೋ ಏನೋ ಹೇಳುತ್ತಾರೆ ಎಂದು ಅದನ್ನೆಲ್ಲ ನಾವು ಕೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಸವಣ್ಣನ ಪಠ್ಯ ತಿರುಚಲಾಗಿದೆ ಎಂದು ಸ್ವಾಮೀಜಿಯವರು ಸಿಟ್ಟಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಶಿಕ್ಷಣ ಸಚಿವರು ಆ ಬಗ್ಗೆ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಸ್ವಾಮೀಜಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.
ಈ ಘಟನೆ 2017 ರಲ್ಲಿ ಆಗಿರುವಂತಹದ್ದು. ಈಗಾಗಲೇ ಆ ಬಗ್ಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೆ ಬಿ ರಿಪೋರ್ಟ್ ಕೂಡ ಹಾಕಲಾಗಿದೆ. ಹೀಗಿದ್ದರೂ ವಿನಾ ಕಾರಣ ಈಗ ಆ ಘಟನೆಗಳ ಬಗ್ಗೆ ಇಲ್ಲಸಲ್ಲದನ್ನು ಎಬ್ಬಿಸುತ್ತಿದ್ದಾರೆ, ಚರ್ಚೆಯಾಗುವಂತೆ ಮಾಡುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ನೆನ್ನೆಯಷ್ಟೇ ರಾಜ್ಯದ ಜಿಎಸ್ಟಿ ಪಾಲನ್ನು ರಾಜ್ಯ ಸರ್ಕಾರಕ್ಕೆ ಜಮಾ ಮಾಡಿದೆ. ನಮ್ಮ ರಾಜ್ಯದ ಜಿಎಸ್ಟಿ ಪಾಲನ್ನು ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಗಡಿಪಾರು ಮಾಡುವಂತಹ ತಪ್ಪು ರೋಹಿತ್ ಚಕ್ರತೀರ್ಥ ಮಾಡಿಲ್ಲ
Get real time updates directly on you device, subscribe now.
Prev Post
Next Post
Comments are closed.